ಎಲೆಕ್ಟ್ರಾನಿಕ್ ಸಾಧನಗಳಿಗೆ ಏಕ ಮಾದರಿ ಚಾರ್ಜರ್! – ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದೇಕೆ?

ಎಲೆಕ್ಟ್ರಾನಿಕ್ ಸಾಧನಗಳಿಗೆ ಏಕ ಮಾದರಿ ಚಾರ್ಜರ್! – ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದೇಕೆ?

ನವದೆಹಲಿ: ಇನ್ನು ಮುಂದೆ ಮೊಬೈಲ್ ಫೋನ್, ಲ್ಯಾಪ್ ಟಾಪ್ ಮುಂತಾದ ಎಲೆಕ್ಟ್ರಾನಿಕ್ ಸಾಧನಗಳಿಗೆ ವಿಭಿನ್ನ ಚಾರ್ಜರ್​ಗಳನ್ನು ಬಳಸಬೇಕೆಂದಿಲ್ಲ.  ಎಲ್ಲ ಮಾದರಿಯ ಎಲೆಕ್ಟ್ರಾನಿಕ್ ಸಾಧನಗಳಿಗೆ ಟೈಪ್ ಸಿ ಚಾರ್ಜರ್ ಅನ್ನು ಬಳಸುವಂತೆ ಕೇಂದ್ರ ಸರ್ಕಾರ ಶಿಫಾರಸ್ಸು ಮಾಡಿದೆ.

ಸ್ಮಾರ್ಟ್​​ಫೋನ್​ಗಳು ಸೇರಿದಂತೆ ಇತರ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳಿಗೆ ಟೈಪ್ ಸಿ ಚಾರ್ಜರ್ ಬಳಸಬೇಕು. ಒಂದೇ ರೀತಿಯ ಚಾರ್ಜರ್ ಅನ್ನು ಎಲ್ಲ ಸಾಧನಗಳಿಗೆ ಬಳಸುವುದರಿಂದ ಗ್ರಾಹಕರಿಗೂ ಅನುಕೂಲವಾಗುತ್ತದೆ. ವಿಭಿನ್ನ ಚಾರ್ಜರ್​​ಗಳ ಖರೀದಿಯೂ ತಪ್ಪುತ್ತದೆ. ಇ-ತ್ಯಾಜ್ಯದ ಪ್ರಮಾಣ ಕಡಿಮೆ ಮಾಡುವುದು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ‘ಬ್ಯುರೋ ಆಫ್​ ಇಂಡಿಯನ್ ಸ್ಟ್ಯಾಂಡರ್ಡ್ಸ್’ ಹೇಳಿದೆ.

ಇದನ್ನೂ ಓದಿ: ಆಸ್ಕರ್ ಅಂಗಳದಲ್ಲಿ ಕಾಂತಾರ, ವಿಕ್ರಾಂತ್ ರೋಣ – ಅರ್ಹತೆ ಸುತ್ತು ಪಾಸ್ ಮಾಡಿದ ಕನ್ನಡ ಚಿತ್ರಗಳು

ಸ್ಮಾರ್ಟ್​ಫೋನ್, ಟ್ಯಾಬ್ಲೆಟ್​, ಲ್ಯಾಪ್​ಟಾಪ್​​ಗಳಿಗೆ ಟೈಪ್ ಸಿ ಚಾರ್ಜರ್​ ಅನ್ನು ಮಾನದಂಡವನ್ನಾಗಿ ಪರಿಗಣಿಸಲು ಉದ್ಯಮಿಗಳು ಸಮ್ಮತಿಸಿರುವುದಾಗಿ 2022ರ ಡಿಸೆಂಬರ್​​ನಲ್ಲಿ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದರು.

ಈ ವಿಚಾರಕ್ಕೆ ಸಂಬಂಧಿಸಿ ಯುರೋಪ್ ಒಕ್ಕೂಟ ಆದೇಶ ನೀಡಿರುವ ಬಗ್ಗೆಯೂ ಅವರು ಉಲ್ಲೇಖಿಸಿದ್ದರು. ಈ ಮಧ್ಯೆ, ವಾಚ್​ಗಳಂಥ ಧರಿಸುವ ಎಲೆಕ್ಟ್ರಾನಿಕ್ ಸಾಧನಗಳಿಗೆ ಏಕ ಮಾದರಿಯ ಚಾರ್ಜರ್ ಅಭಿವೃದ್ಧಿಪಡಿಸುವ ಬಗ್ಗೆ ಕಾನ್ಪುರ ಐಐಟಿ ಅಧ್ಯಯನ ನಡೆಸುತ್ತಿದೆ. ಅಧ್ಯಯನ ಪೂರ್ಣಗೊಂಡ ಬೆನ್ನಲ್ಲೇ ಕೈಗಾರಿಕೋದ್ಯಮಿಗಳ ಜತೆ ಚರ್ಚಿಸಲಿದೆ. ಇ-ತ್ಯಾಜ್ಯ ತಡೆಗಾಗಿ ಏಕ ಮಾದರಿಯ ಚಾರ್ಜರ್ ಬಳಕೆ ಬಗ್ಗೆ ಕೇಂದ್ರ ಪರಿಸರ ಸಚಿವಾಲಯವೂ ಅಧ್ಯಯನ ನಡೆಸಲಿದೆ ಎನ್ನಲಾಗಿದೆ.

suddiyaana