ಫ್ರೆಂಡ್ಸ್‌ ಜೊತೆ ಪಾರ್ಟಿ ಮಾಡುತ್ತಿದ್ದ ವೇಳೆ ಎಂಟ್ರಿ ಕೊಟ್ಟ ಪೊಲೀಸರು! – ಖಾಕಿಗೆ ಹೆದರಿ ಬಾಲ್ಕನಿಯಿಂದ ಹಾರಿದ ಯುವತಿ!

ಫ್ರೆಂಡ್ಸ್‌ ಜೊತೆ ಪಾರ್ಟಿ ಮಾಡುತ್ತಿದ್ದ ವೇಳೆ ಎಂಟ್ರಿ ಕೊಟ್ಟ ಪೊಲೀಸರು! – ಖಾಕಿಗೆ ಹೆದರಿ ಬಾಲ್ಕನಿಯಿಂದ ಹಾರಿದ ಯುವತಿ!

ವೀಕೆಂಡ್‌ ಬಂದ್ರೆ ಸಾಕು. ಬೆಂಗಳೂರಿಗರು ಪಾರ್ಟಿ ಮೂಡ್‌ನಲ್ಲಿರುತ್ತಾರೆ. ಫ್ರೆಂಡ್‌ ಜೊತೆ ಪಾರ್ಟಿ ಮಾಡಿಕೊಂಡು ಬಿಂದಾಸ್‌ ಆಗಿ ಇರ್ತಾರೆ. ಇದೀಗ ಬೆಂಗಳೂರಿನಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಹೋಗಿ ಯುವತಿ ಜೀವಕ್ಕೆ ಅಪಾಯ ತಂದುಕೊಂಡಿದ್ದಾಳೆ.

ಇದನ್ನೂ ಓದಿ: ಇಂಡಿಗೋ ವಿಮಾನದಲ್ಲಿ ಕರ್ನಾಟಕದ 21 ಶಾಸಕರು ಲಾಕ್!‌ – ಬೆಳ್ಳಂ ಬೆಳಗ್ಗೆ ಆಗಿದ್ದೇನು?

ಈ ಘಟನೆ ಬೆಂಗಳೂರಿನ ಹೆಚ್‌ಎಎಲ್‌ನ ಎಇಸಿಎಸ್ ಲೇಔಟ್ ನ ಹೊಟೇಲ್‌ನಲ್ಲಿ ನಡೆದಿದೆ. ಯುವತಿ ಸ್ನೇಹಿತರೊಂದಿಗೆ ಹೋಟೆಲ್‌ನಲ್ಲಿ ಪಾರ್ಟಿ ಮಾಡುತ್ತಿದ್ದಳು. ಈ ವೇಳೆ ಪೊಲೀಸರು ಧಿಡೀರ್ ಎಂಟ್ರಿ ಕೊಟ್ಟ ಪರಿಣಾಮ ಭಯಗೊಂಡ ಯುವತಿ ಹೋಟೆಲ್ ಬಾಲ್ಕನಿಯಿಂದ ಕೆಳಗೆ ಹಾರಿದ್ದಾಳೆ. ಇದ್ರಿಂದಾಗಿ ಯುವತಿ ಗಂಭೀರ ಗಾಯಗೊಂಡಿದ್ದಾಳೆ. ಘಟನೆಯಲ್ಲಿ ಯುವತಿಯ ತಲೆ, ಮೈಕೈಗೆ ಗಂಭೀರ ಗಾಯಗಳಾಗಿವೆ. ಸದ್ಯ ಗಂಭೀರ ಗಾಯಗೊಂಡಿರುವ ಯುವತಿಯನ್ನು ಕುಂದಲಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

ಅಷ್ಟಕ್ಕೂ ಆಗಿದ್ದೇನು?

ಯುವತಿ ಸೇರಿದಂತೆ ಎಂಟು ಜನ ಸ್ನೇಹಿತರು ಶನಿವಾರ ರಾತ್ರಿ ಸೇರಿ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಗಾಗಿ ಮೂರು ರೂಂಗಳನ್ನು ಬುಕ್ ಮಾಡಿದ್ದರು. ಬಳಿಕ ಯುವಕರು ಹಾಗೂ ಯುವತಿಯರು ಹಾಡುಗಳನ್ನ ಹಾಕಿಕೊಂಡು ಡ್ಯಾನ್ಸ್ ಮಾಡುತ್ತಿದ್ದರು. ಯುವಕರ ಪಾರ್ಟಿ, ಡ್ಯಾನ್ಸ್ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೆಲ ನಿಮಿಷಗಳ ಬಳಿಕ ಹೊಟೇಲ್‌ಗೆ ಹೊಯ್ಸಳ ಪೊಲೀಸರು ಆಗಮಿಸಿದ್ದರು. ಪೊಲೀಸರು ಬಂದ ವಿಚಾರ ತಿಳಿದು ಬಾಲ್ಕನಿಗೆ ತೆರಳಿದ ಯುವತಿ ಭಯದಿಂದ ಬಾಲ್ಕನಿಯಿಂದ ಹಾರಿದ್ದಾಳೆ. ಕಬ್ಬಿಣದ ಗ್ರಿಲ್ಸ್ ಮೇಲೆ ಬಿದ್ದು ಯುವತಿಗೆ ಗಂಭೀರ ಗಾಯಗಳಾಗಿವೆ. ಬಳಿಕ ಯುವತಿಯನ್ನ ಆಕೆಯ ಸ್ನೇಹಿತರು ಆಸ್ಪತ್ರೆಗೆ ಸೇರಿಸಿದ್ದಾರೆ.

ಪಾರ್ಟಿ ವಿಚಾರ ತಿಳಿದು ಹೊಯ್ಸಳ ಸಿಬ್ಬಂದಿ ಹೊಟೇಲ್‌ಗೆ ಎಂಟ್ರಿ ಕೊಟ್ಟ ವೇಳೆ ಪಾರ್ಟಿ ವೀಡಿಯೋ ತೋರಿಸಿ ದೂರು ಬಂದಿದೆ ಎಂದಿದ್ದರು. ನಂತರ ಯುವಕರ ಬಳಿ ಹಣ ಕೇಳಿದ್ದಾರೆ ಎಂದು ಯುವಕನೊಬ್ಬ ಆರೋಪಿಸಿದ್ದಾನೆ. ಫೋನ್ ಪೇ ಮಾಡುತ್ತೇವೆ ಎಂದು ಯುವಕರು ಹೇಳಿದಾಗ ಫೋನ್ ಪೇ ಬೇಡ, ಕ್ಯಾಶ್ ಕೊಡಿ ಎಂದು ಪೊಲೀಸರು ಕೇಳಿದ್ದಾರೆ. ಸರಿ ಎಂದು ಎಟಿಎಂನಲ್ಲಿ ಹಣ ತರುತ್ತೇನೆ ಎಂದು ಯುವಕ ಹೋಟೆಲ್‌ನಿಂದ ಹೊರಗೆ ಬಂದ ವೇಳೆ ಯುವತಿ ಹೋಟೆಲ್ ಬಾಲ್ಕನಿಯಿಂದ ಹಾರಿದ್ದಾಳೆ. ಸದ್ಯ ಘಟನೆ ಬಗ್ಗೆ ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿ, ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಯುವತಿ ತಂದೆ ಕೊಟ್ಟ ದೂರಿನ ಮೇರೆಗೆ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹೋಟೆಲ್ ಲಾಡ್ಜ್‌ನ ಬಾಲ್ಕನಿಯಲ್ಲಿ ಸುರಕ್ಷತೆ ವಹಿಸದೆ ನಿರ್ಲಕ್ಷ್ಯ ಎಂದು ದೂರು ದಾಖಲಿಸಲಾಗಿದೆ. ಪೊಲೀಸರ ತಪ್ಪು ಮುಚ್ಚಿಡಲು ಹೋಟೆಲ್ ಮಾಲೀಕರ ಮೇಲೆ ಎಫ್‌ಐಆರ್ ಮಾಡಿರುವ ಕುರಿತು ಅನುಮಾನ ವ್ಯಕ್ತವಾಗಿದೆ.

Shwetha M