‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ: ಸಿದ್ದರಾಮಯ್ಯ ತಪ್ಪು ಮಾಡಿರಬೇಕು ಎಂದ ಬಿಜೆಪಿ

‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ: ಸಿದ್ದರಾಮಯ್ಯ ತಪ್ಪು ಮಾಡಿರಬೇಕು ಎಂದ ಬಿಜೆಪಿ

ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಗುರಿಯಾಗಿಸಿಕೊಂಡು ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ ಮಾಡಲು ಬಿಜೆಪಿ ಮುಂದಾಗಿತ್ತು. ಈ ಪುಸ್ತಕ ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಬೆನ್ನಲ್ಲೇ ರಾಜ್ಯ ಬಿಜೆಪಿ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಸಿದ್ದರಾಮಯ್ಯ ಅವರ ಭಯ ಮತ್ತು ಆತಂಕವನ್ನು ಗಮನಿಸಿದರೆ ಅವರು ತಮ್ಮ ರಾಜಕೀಯ ಜೀವನದಲ್ಲಿ ಮಹತ್ತರ ತಪ್ಪು ಮಾಡಿರಬೇಕು ಅನಿಸುತ್ತದೆ. ಇಲ್ಲದಿದ್ದರೆ ಭಯ ಪಡುವ ಅಗತ್ಯ ಇರಲಿಲ್ಲ’ ಎಂದು ಹೇಳಿದೆ.

ಈ ಬಗ್ಗೆ ಬಿಜೆಪಿ ಸರಣಿ ಟ್ವೀಟ್ ಮಾಡಿದ್ದು, ‘ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆಗೆ ಮುನ್ನವೇ ಸಿದ್ದರಾಮಯ್ಯ ಅವರ ಭಯ ಮತ್ತು ಆತಂಕವನ್ನು ಗಮನಿಸಿದರೆ, ಅವರು ತಮ್ಮ ರಾಜಕೀಯ ಜೀವನದಲ್ಲಿ ಮಹತ್ತರ ತಪ್ಪು ಮಾಡಿರಬೇಕು ಅನಿಸುತ್ತದೆ. ಇಲ್ಲದಿದ್ದರೆ ಭಯ ಪಡುವ ಅಗತ್ಯ ಇರಲಿಲ್ಲ. 4 ದಶಕಗಳ ಕಾಲ ರಾಜಕೀಯ ಜೀವನ ಮಾಡಿದ ಅವರಿಗೆ ಪುಸ್ತಕದ ಕಾರಣಕ್ಕೆ ಭಯ ಪಡುತ್ತಾರೆ ಎಂದರೆ ಅದು ಅರ್ಥಹೀನ; ಆ ಪುಸ್ತಕದಲ್ಲಿರುವ ವಿಷಯ – ತಿರುಳಿನ ಅರಿವೂ ಅವರಿಗೆ ಇಲ್ಲ. ಆದರೂ ಭಯಪಡುತ್ತಿದ್ದಾರೆ ಎಂದರೆ ಎಲ್ಲೋ ಅವರಲ್ಲಿ ಅಪರಾಧಿ ಮನೋಭಾವ, ಅಪರಾಧಿ ಮನಸ್ಥಿತಿ ಕಾಡುತ್ತಿರುವುದು ಕಂಡುಬರುತ್ತದೆ’ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆಗೆ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ

‘ಕಾಂಗ್ರೆಸ್ ವಾಕ್ ಸ್ವಾತಂತ್ರ್ಯ, ಫ್ರೀಡಂ ಆಫ್ ಎಕ್ಸ್ಪ್ರೆಶನ್ ಬಗ್ಗೆ ಬೊಬ್ಬೆ ಹಾಕುತ್ತದೆ. ಇವೆಲ್ಲವೂ ಬೇಕೆಂದು ಕಾಂಗ್ರೆಸ್ಸಿಗರು ಭಾಷಣದಲ್ಲಿ ಹೇಳುತ್ತಾರೆ. ಆದರೆ, ಆಚರಣೆ ವಿಚಾರಕ್ಕೆ ಬಂದಾಗ ಅದರ ವಿರುದ್ಧವಾಗಿ ನಡೆದುಕೊಳ್ಳುತ್ತದೆ. ಎಂದೂ ಕೂಡ ಈ ದೇಶದ ಸಂವಿಧಾನವನ್ನು ಗೌರವಿಸುವ ಕೆಲಸವನ್ನೇ ಅದು ಮಾಡಿಲ್ಲ. ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಸಂವಿಧಾನದ ಆಶಯ, ಸುಪ್ರೀಂ ಕೋರ್ಟಿನ ತೀರ್ಪನ್ನು ಧಿಕ್ಕರಿಸಿ ಈ ದೇಶದಲ್ಲಿ ತುರ್ತು ಪರಿಸ್ಥಿತಿ ತಂದರು. ಮತಬ್ಯಾಂಕ್ಗೆ ಧಕ್ಕೆ ಆಗುತ್ತಿರುವ ಸಂದರ್ಭದಲ್ಲಿ ಇಂತಹ ಅನೇಕ ಪುಸ್ತಕಗಳನ್ನು ನಿಷೇಧಿಸುವ ಕೆಲಸ ಮಾಡಿದರು ಎಂದು ಕಿಡಿಕಾರಿದೆ.

ಅದು ಸಲ್ಮಾನ್ ರಶ್ದೀ ಅವರ ‘ದಿ ಸೆಟಾನಿಕ್ ವರ್ಸಸ್’ ಇರಬಹುದು, ತಸ್ಲಿಮಾ ನಸ್ರೀನ್ ಅವರ ಲಜ್ಜಾ ಇರಬಹುದು. ಬೇರೆಬೇರೆ ಸಂದರ್ಭದಲ್ಲಿ ಜನತಂತ್ರದ ಧ್ವನಿಯನ್ನು ಅಡಗಿಸುವ ಕೆಲಸವನ್ನು ಕಾಲಕಾಲಕ್ಕೆ ಕಾಂಗ್ರೆಸ್ ಮಾಡುತ್ತಲೇ ಬಂದಿದೆ. ಇವತ್ತಿನ ಘಟನೆ ಕೂಡ ಅದಕ್ಕೆ ಮೂಕಸಾಕ್ಷಿಯಾಗಿ ನಿಂತಿದೆ’ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

‘ಪ್ರಜಾಪ್ರಭುತ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯ ಏನಿತ್ತೋ, ಮೂಲಭೂತ ವ್ಯಕ್ತಿ ಸ್ವಾತಂತ್ರ್ಯ ಏನಿದೆಯೋ ಅದನ್ನು ಪುಸ್ತಕ ಬರುವ ಮೊದಲೇ ನಿಷೇಧಿಸುವ ಅವರ ಕೋರಿಕೆ ನೋಡಿದರೆ ಸಿದ್ದರಾಮಯ್ಯ ಅವರು ಎಷ್ಟು ಆತಂಕಗೊಂಡಿದ್ದಾರೆ ಎಂದು ತಿಳಿಯುತ್ತದೆ. ಆದ್ದರಿಂದ ಈ ಪುಸ್ತಕ ಕರ್ನಾಟಕ ಜನತೆಗೆ ಅನಾವರಣ ಆಗಬೇಕು. ಸತ್ಯ ಜನರಿಗೆ ತಲುಪಬೇಕು. ಆರು ಕೋಟಿ ಕನ್ನಡಿಗರ ಮನಮನದಲ್ಲೂ ಒಂದಷ್ಟು ಭ್ರಷ್ಟಾಚಾರ, ಸ್ವಜನಪಕ್ಷಪಾತ, ತುಷ್ಟೀಕರಣ, ಕೋಮುವಾದ- ಇವೆಲ್ಲ ಹೇಗೆ ನಡೆಯುತ್ತಿದೆ ಎಂಬುದರ ಅರಿವು ಜಾಗೃತಿ ಮೂಡಿಸುವ ಪುಸ್ತಕಗಳು ಮತ್ತಷ್ಟು ಪ್ರಕಟವಾಗಬೇಕು. ಆಗ ಪ್ರಜಾಪ್ರಭುತ್ವ, ಸಂವಿಧಾನ ಉಳಿಯುತ್ತದೆ ಎಂದು ಹೇಳಿದೆ.

ಜನತಂತ್ರದ ಮೌಲ್ಯಕ್ಕೆ ಬೆಲೆ ಸಿಗುತ್ತದೆ. ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಸಿಗುತ್ತದೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿಗರ ಈ ಧೋರಣೆಯನ್ನು ಬಿಜೆಪಿ ಖಂಡಿಸುತ್ತದೆ’ ಎಂದು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಗುರಿಯಾಗಿಸಿಕೊಂಡು ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ ಮಾಡಲು ಬಿಜೆಪಿ ಮುಂದಾಗಿತ್ತು. ಈ ಪುಸ್ತಕ ಬಿಡುಗಡೆಯಾಗುತ್ತಿದೆ ಎಂಬ ವಿಚಾರ ತಿಳಿದು ಪುರಭವವನದ ಬಳಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಈ ಪುಸ್ತಕ ಬಿಡುಗಡೆಗೆ ಬೆಂಗಳೂರಿನ 60ನೇ ಸಿಸಿಹೆಚ್ ನ್ಯಾಯಾಲಯ ಪುಸ್ತಕ ಬಿಡುಗಡೆ, ಮಾರಾಟ ಅಲ್ಲದೇ ಮಾಧ್ಯಮ ಪ್ರಸಾರಕ್ಕೂ ಕೋರ್ಟ್ ತಡೆಯಾಜ್ಞೆ ನೀಡಿದೆ. ಮುಂದಿನ ವಿಚಾರಣೆಯನ್ನು ಫೆ.9ಕ್ಕೆ ಮುಂದೂಡಿದೆ.

suddiyaana