ಐಪಿಎಲ್ ಹರಾಜಿಗೂ ಮುನ್ನ ಮೂವರನ್ನ ನಿಷೇಧಿಸಿದ ಬಿಸಿಸಿಐ – 10 ಫ್ರಾಂಚೈಸಿಗಳಿಗೆ ಬೇಕಿದೆ 77 ಆಟಗಾರರು!

ಐಪಿಎಲ್ ಹರಾಜಿಗೂ ಮುನ್ನ ಮೂವರನ್ನ ನಿಷೇಧಿಸಿದ ಬಿಸಿಸಿಐ – 10 ಫ್ರಾಂಚೈಸಿಗಳಿಗೆ ಬೇಕಿದೆ 77 ಆಟಗಾರರು!

19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಆಕ್ಷನ್ ಗೆ ಕೆಲವೇ ದಿನಗಳಷ್ಟೇ ಬಾಕಿ. ಇದೇ ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ಮಿನಿ ಹರಾಜು ನಡೆಯಲಿದೆ. ಈ ಹರಾಜಿಗೆ ಒಟ್ಟು 1,355 ಆಟಗಾರರು ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದರು. ಈ ಪೈಕಿ ಬಿಸಿಸಿಐ 350 ಅಟಗಾರರ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಹಾಗೇ ಆಟಗಾರರು ತಮ್ಮ ತಮ್ಮ ಮೂಲ ಬೆಲೆಯನ್ನ ಘೋಷಣೆ ಮಾಡಿಕೊಂಡಿದ್ದಾರೆ. ಅಚ್ಚರಿಯ ವಿಚಾರ ಅಂದ್ರೆ ಮಿನಿ ಹರಾಜಿನ ಸಿದ್ಧತೆಯ ವೇಳೆಯೇ ಬಿಸಿಸಿಐ ಮೂವರು ಅಂತರರಾಷ್ಟ್ರೀಯ ಆಟಗಾರರ ಮೇಲೆ ನಿಷೇಧ ಹೇರಿದೆ. ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್ ಮತ್ತು ಜೇಸನ್ ರಾಯ್ ಈ ಮೂವರು ಇಂಗ್ಲೆಂಡ್ ಆಟಗಾರರಿಗೆ ಶಾಕ್ ಕೊಡಲಾಗಿದೆ.

ಇದನ್ನೂ ಓದಿ ಕೆ.ಎಲ್ ರಾಹುಲ್ ರೀತಿ ಮಾಡೋಕೆ ಹೋಗಿ ಯಡವಟ್ಟು – ಸೂರ್ಯಕುಮಾರ್‌ಗೆ ಕೈ ಕೊಟ್ಟ ಕನ್ನಡಿಗನ ಟ್ರಿಕ್..!

2025ರ ಐಪಿಎಲ್ ಹರಾಜಿನಲ್ಲಿ ಹ್ಯಾರಿ ಬ್ರೂಕ್ ಮತ್ತು ಜೇಸನ್ ರಾಯ್ ಇಬ್ಬರೂ ಮಾರಾಟವಾಗಿದ್ದರೂ, ವೈಯಕ್ತಿಕ ಕಾರಣಗಳಿಂದಾಗಿ ಇಬ್ಬರೂ ಲೀಗ್‌ ತೊರೆದಿದ್ದರು. ಬಿಸಿಸಿಐನ ನಿಯಮಗಳ ಪ್ರಕಾರ, ಖರೀದಿಯಾದ ನಂತರ ಯಾವುದೇ ಆಟಗಾರನು ಲೀಗ್‌ನಿಂದ ಹಿಂದೆ ಸರಿದರೆ, ಅವನಿಗೆ ಎರಡು ವರ್ಷಗಳ ನಿಷೇಧ ಹೇರಲಾಗುತ್ತದೆ. ಹೀಗಾಗಿ ಅವರಿಬ್ಬರ ಮೇಲೂ 2026 ಮತ್ತು 2027 ಸಾಲಿನವರೆಗೆ ನಿರ್ಬಂಧ ಹೇರಲಾಗಿದೆ.  2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹ್ಯಾರಿ ಬ್ರೂಕ್ ಅವರನ್ನು 6.25 ಕೋಟಿ ರೂಪಾಯಿಗೆ ಖರೀದಿಸಿತ್ತು. ಆದರೆ ಅವರು ಇಂಗ್ಲೆಂಡ್‌ನ ದೇಶೀಯ ಕ್ರಿಕೆಟ್ ಋತುವಿನಲ್ಲಿ ಆಡಲು ಐಪಿಎಲ್ ತೊರೆದಿದ್ದರು. ಇದರಿಂದ ನೇರವಾಗಿ ಎರಡು ವರ್ಷದ ನಿಷೇಧ ವಿಧಿಸಲಾಯಿತು. ಇದೇ ರೀತಿಯಾಗಿ, ಜೇಸನ್ ರಾಯ್ 2024ರಲ್ಲೇ ವೈಯಕ್ತಿಕ ಕಾರಣಗಳಿಂದ ಲೀಗ್‌ನಿಂದ ಹಿಂದೆ ಸರಿದಿದ್ದರು. ಅವರು 2025ರ ಹರಾಜಿನಲ್ಲೂ ಹೆಸರು ನೋಂದಾಯಿಸಿಕೊಳ್ಳಲಿಲ್ಲ. ಫ್ರಾಂಚೈಸಿಗಳು ಈ ತಾರಾ ಆಟಗಾರರ ಮೇಲೆ ಕಣ್ಣಿರಿಸಿಕೊಂಡಿದ್ದರೂ, ಈಗ ಬೇಟೆ ಆಟಗಾರರ ಮೇಲೆ ಕಣ್ಣಿಡಬೇಕಾಗುತ್ತೆ.

ಬಿಸಿಸಿಐ ಅಂತಿಮ ಪಟ್ಟಿಯ ಪ್ರಕಾರ 350 ಕ್ರಿಕೆಟಿಗರು ಮಾತ್ರ ಬಿಡ್ಡಿಂಗ್‌ಗೆ ಸಿದ್ಧರಿದ್ದಾರೆ. ಇವರಲ್ಲಿ 240 ಭಾರತೀಯ ಆಟಗಾರರು ಮತ್ತು 110 ವಿದೇಶಿ ಆಟಗಾರರು ಸೇರಿದ್ದಾರೆ. ಐಪಿಎಲ್​ನ ದುಬಾರಿ ಆಟಗಾರರಲ್ಲಿ ಒಬ್ಬರಾದ ವೆಂಕಟೇಶ್ ಅಯ್ಯರ್, ಯುವ ಆಟಗಾರ ಪೃಥ್ವಿ ಶಾ, ರವಿ ಬಿಷ್ಣೋಯ್​​ ಭಾರತೀಯರಲ್ಲಿ ಟಾಪ್ ಆಟಗಾರರಾಗಿದ್ದಾರೆ. ಇತ್ತೀಚೆಗೆ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ ಮರಳಿದ ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಕೂಡ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಮೂಲ ಬೆಲೆ ₹1 ಕೋಟಿ. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ, ಅವರ ಮೂಲ ಬೆಲೆ ₹2 ಕೋಟಿ. ಸ್ಮಿತ್ ಕೊನೆಯ ಬಾರಿಗೆ 2021 ರಲ್ಲಿ ಐಪಿಎಲ್‌ನಲ್ಲಿ ಆಡಿದ್ದರು. ಆ ಬಳಿಕ ಸ್ಮಿತ್​​ ಅನ್​ಸೋಲ್ಡ್ ಆಗಿದ್ದರು. ಈ 350 ಆಟಗಾರರಲ್ಲಿ 10 ಐಪಿಎಲ್ ಫ್ರಾಂಚೈಸಿಗಳು ಉಳಿದಿರುವ 77 ಸ್ಥಾನಗಳನ್ನು ತುಂಬಲಿವೆ. ಮೂರು ಬಾರಿ ಚಾಂಪಿಯನ್ ಆಗಿರುವ ಕೆಕೆಆರ್ ₹64.3 ಕೋಟಿ ಅತ್ಯಧಿಕ ಮೊತ್ತದೊಂದಿಗೆ ಹರಾಜಿಗೆ ಪ್ರವೇಶಿಸಲಿದೆ. ಅವರ ನಂತರ ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ₹43.4 ಕೋಟಿ ಉಳಿದಿದೆ. ಒಂದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಸನ್‌ರೈಸರ್ಸ್ ಹೈದರಾಬಾದ್ ₹25.5 ಕೋಟಿಯೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

Shantha Kumari