ನಿಜವಾದ ಪ್ರತಿಪಕ್ಷದ ನಾಯಕ ಅಂದರೆ ನಾನೇ – ಅಧಿವೇಶನದಲ್ಲಿ ಬಿಜೆಪಿ ಕಾಲೆಳೆದ ಯತ್ನಾಳ್

ನಿಜವಾದ ಪ್ರತಿಪಕ್ಷದ ನಾಯಕ ಅಂದರೆ ನಾನೇ – ಅಧಿವೇಶನದಲ್ಲಿ ಬಿಜೆಪಿ ಕಾಲೆಳೆದ ಯತ್ನಾಳ್

ಬೆಳಗಾವಿಯಲ್ಲಿ ನಡೆಯುತ್ತಿರೋ ಚಳಿಗಾಲದ ಅಧಿವೇಶನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ನಾಯಕರ ಕಾಳೆದರು.  ಈ ಸದನದಲ್ಲಿ ನಿಜವಾದ ಪ್ರತಿಪಕ್ಷದ ನಾಯಕ ಅಂದರೆ ನಾನೇ. ನಾನು ಅಡ್ಜಸ್ಟ್​ಮೆಂಟ್ ರಾಜಕಾರಣಿ ಅಲ್ಲ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

ಸದನ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ಕಲಾಪಕ್ಕೆ ಸ್ಪೀಕರ್ ಯು. ಟಿ. ಖಾದರ್ ಅವಕಾಶ ಕೊಟ್ಟರು. ಇದಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಕ್ಷೇಪಿಸಿ, ಎಲ್ಲವನ್ನೂ ಬದಿಗೊತ್ತಿ ಉತ್ತರ ಕರ್ನಾಟಕ ಭಾಗದ ಚರ್ಚೆ ಮಾಡುತ್ತೇವೆ ಅಂತಾ ಸಚಿವರೇ ಹೇಳಿದ್ದಾರೆ. ಹೀಗಾಗಿ, ಉತ್ತರ ಕರ್ನಾಟಕ ಭಾಗದ ಬಗ್ಗೆ ಮೊದಲೇ ಚರ್ಚೆ ಮಾಡಬೇಕೆಂದು ಪಟ್ಟು ಹಿಡಿದರು‌. ಆಗ ಪ್ರಶ್ನೋತ್ತರ ಕಲಾಪಕ್ಕೆ ಆಡಳಿತ ಪಕ್ಷದ ಶಾಸಕ ರಂಗನಾಥ್ ಒತ್ತಾಯ ಮಾಡಿದರು. ಇದೇ ವೇಳೆ, ಮಧ್ಯಪ್ರವೇಶಿಸಿದ ಬಸನಗೌಡ ಯತ್ನಾಳ್ ಉ.ಕ. ಚರ್ಚೆ ಬಗ್ಗೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ, ನಿಯಮದಂತೆ ಪ್ರಶ್ನೋತ್ತರ ಅವಧಿಗೆ ಅವಕಾಶ ನೀಡಿ ಬಳಿಕ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸೋಣ ಎಂದು ಮನವಿ ಮಾಡಿದರು.ಇದೇ ವೇಳೆ ಶಾಸಕ ಯತ್ನಾಳ್, ಸದನದಲ್ಲಿ ತಮ್ಮ ಕುರ್ಚಿ ಬದಲಾಯಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ನಾವೆಲ್ಲರೂ ಹಿರಿಯ ಶಾಸಕರು, ಆದರೆ ನಮ್ಮನ್ನು ಹಿಂದಕ್ಕೆ ಹಾಕಿದ್ದೀರಾ, ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದರು. ಈ ವೇಳೆ ಯತ್ನಾಳ್ ಅವರನ್ನು ಬಿಜೆಪಿಯವರು ಅನಾಥರನ್ನಾಗಿ ಮಾಡಿದ್ದಾರೆ. ಅವರ ಜೊತೆ ನಾವು ನಿಲ್ಲುತ್ತೇವೆ ಎಂದು ಕಾಂಗ್ರೆಸ್ ಶಾಸಕ ರಂಗನಾಥ್ ಅವರು ಕಿಚಾಯಿಸಿದರು.

ಇದನ್ನೂ ಓದಿ:8ನೇ ದಿನಕ್ಕೆ ಕಾಲಿಟ್ಟ ಇಂಡಿಗೋ ಬಿಕ್ಕಟ್ಟು! – IndiGoಗೆ ವಿಪ್ ಜಾರಿ.. ವೇಳಾಪಟ್ಟಿಯಲ್ಲಿ ಶೇ. 5 ರಷ್ಟು ಕಡಿತ!

ಇದಕ್ಕೆ ಸ್ಪಷ್ಟನೆ ನೀಡಿದ ಸ್ಪೀಕರ್ ಯು. ಟಿ. ಖಾದರ್, ರಾಜಕೀಯದಲ್ಲಿ ಸೀನಿಯರ್, ಜೂನಿಯರ್ ಅಂತಿಲ್ಲ. ಅಧಿಕಾರದಲ್ಲಿ ಇದ್ದಾಗ ಸೀನಿಯರ್, ಇಲ್ಲದಿದ್ದಾಗ ಜ್ಯೂನಿಯರ್. ಶಾಸಕರ ಸಂಖ್ಯಾಬಲ ನೋಡಿಕೊಂಡು ಸೀಟು ಕೊಡುವುದು. ನಿಮಗೆ ಬೇಕಾದಾಗ ಇಲ್ಲಿ ಇರುತ್ತೀರಾ, ಬೇಡ ಅಂದಾಗ ಅಲ್ಲಿಗೆ ಹೋಗುತ್ತೀರಿ ಎಂದು ತಿಳಿಸಿದರು.

ಸದನದಲ್ಲಿ ನಿಜವಾದ ಪ್ರತಿಪಕ್ಷದ ನಾಯಕ ಅಂದರೆ ನಾನೇ

 ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಬೇಕಾದಾಗ ಅಂತಾ ಅಲ್ಲ, ನಾನೊಬ್ಬ ನಿಷ್ಠಾವಂತ ಕಾರ್ಯಕರ್ತ. ಈ ಸದನದಲ್ಲಿ ನಿಜವಾದ ಪ್ರತಿಪಕ್ಷದ ನಾಯಕ ಅಂದರೆ ನಾನೇ. ನಾನು ಅಡ್ಜಸ್ಟ್​ಮೆಂಟ್ ರಾಜಕಾರಣಿ ಅಲ್ಲ. ನಾನೇನು ಸಿಎಂ ಮನೆಗೆ ಹೋಗಿಲ್ಲ. ಯಾರ ಮಂತ್ರಿಗಳ ಕಚೇರಿಗೂ ಹೋಗಿಲ್ಲ ಎಂದು ಹೇಳುತ್ತ ವಿಪಕ್ಷ ನಾಯಕ ಆರ್.ಅಶೋಕ್ ಎದುರಲ್ಲೇ, ನಾನೇ ನಿಜವಾದ ಪ್ರತಿಪಕ್ಷ ನಾಯಕ ಎಂದು ಪ್ರತಿಪಾದಿಸಿರುವುದು ಸದನದಲ್ಲಿ ಎಲ್ಲರ ಗಮನ ಸೆಳೆಯಿತು.

Kishor KV