8ನೇ ದಿನಕ್ಕೆ ಕಾಲಿಟ್ಟ ಇಂಡಿಗೋ ಬಿಕ್ಕಟ್ಟು! – IndiGoಗೆ ವಿಪ್ ಜಾರಿ.. ವೇಳಾಪಟ್ಟಿಯಲ್ಲಿ ಶೇ. 5 ರಷ್ಟು ಕಡಿತ!

ಇಂಡಿಗೋ ವಿಮಾನ ಬಿಕ್ಕಟ್ಟು 8ನೇ ದಿನಕ್ಕೆ ಕಾಲಿಟ್ಟಿದೆ. ದೇಶದಾದ್ಯಂತ ಇಂದು ಕೂಡ ನೂರಾರು ವಿಮಾನ ಹಾರಾಟ ರದ್ದಾಗಿದೆ. ಇದ್ರಿಂದಾಗಿ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ.
ಇದನ್ನೂ ಓದಿ: ರಾಜ್ಯದ ಮಹಿಳಾ ನೌಕರರಿಗೆ ಶಾಕ್! – ಮುಟ್ಟಿನ ರಜೆಗೆ ಹೈಕೋರ್ಟ್ ತಡೆ
ಮಂಗಳವಾರವೂ ಸುಮಾರು 500ಕ್ಕೂ ಹೆಚ್ಚು ಇಂಡಿಗೋ ವಿಮಾನ ಹಾರಾಟ ರದ್ದಾಗಿದೆ. ಬೆಂಗಳೂರು ಮತ್ತು ದೆಹಲಿಯಲ್ಲಿ ಇನ್ನೂ ದೊಡ್ಡ ಅಡೆತಡೆಗಳು ಕಂಡುಬಂದಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 58 ಆಗಮನ ಮತ್ತು 63 ನಿರ್ಗಮನ ವಿಮಾನ ಸೇರಿದಂತೆ 121 ವಿಮಾನಗಳು ರದ್ದಾಗಿರುವುದಾಗಿ ವರದಿಯಾಗಿದೆ. ದೆಹಲಿಯಲ್ಲಿ ಒಟ್ಟು 152 ವಿಮಾನಗಳು ರದ್ದಾಗಿವೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ 14 ಆಗಮನ ಮತ್ತು 44 ನಿರ್ಗಮನಗಳು ಸೇರಿದಂತೆ 58 ವಿಮಾನಗಳು ರದ್ದಾಗಿವೆ. ಚೆನ್ನೈನಿಂದ ಕನಿಷ್ಠ 81 ವಿಮಾನಗಳು, ಮುಂಬೈನಿಂದ 31, ಲಖನೌದಿಂದ 26 ಮತ್ತು ಅಹಮದಾಬಾದ್ನಿಂದ 16 ವಿಮಾನಗಳು ರದ್ದಾಗಿವೆ.
ಇನ್ನು ಇಂಡಿಗೋ ಬಿಕ್ಕಟ್ಟು ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಇಂಡಿಗೋ ವಿಮಾನಯಾನ ಸಂಸ್ಥೆಯ ಚಳಿಗಾಲದ ವೇಳಾಪಟ್ಟಿಯನ್ನು ಶೇಕಡಾ 5 ರಷ್ಟು ಕಡಿತಗೊಳಿಸಿದೆ. ಆ ಸ್ಥಾನಗಳನ್ನು ಇತರ ವಿಮಾನಯಾನ ಸಂಸ್ಥೆಗಳಿಗೆ ನೀಡಲು ನಿರ್ಧರಿಸಿದೆ. ಕಡಿತಗೊಳಿಸಿದ ವೇಳಾಪಟ್ಟಿ ಹಲವು ವಲಯಗಳಿಗೆ ಅನ್ವಯಿಸುತ್ತದೆ. ಬುಧವಾರ ಸಂಜೆ 5 ಗಂಟೆಯೊಳಗೆ ಪರಿಷ್ಕೃತ ಕಾರ್ಯಾಚರಣೆಯ ವೇಳಾಪಟ್ಟಿಯನ್ನು ಸಲ್ಲಿಸುವಂತೆ DGCA ಇಂಡಿಗೋಗೆ ವಿಪ್ ಜಾರಿ ಮಾಡಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸರ್ಕಾರವು ಇಂಡಿಗೋ ವಿಮಾನಯಾನ ಸಂಸ್ಥೆಯ ಸ್ಲಾಟ್ ಹಂಚಿಕೆಯನ್ನು ಖಂಡಿತವಾಗಿಯೂ ಕಡಿತಗೊಳಿಸುತ್ತದೆ. ಇಂಡಿಗೋದ ಚಳಿಗಾಲದ ವೇಳಾಪಟ್ಟಿಯಿಂದ ಕೆಲವು ಮಾರ್ಗಗಳನ್ನು ಕಡಿತಗೊಳಿಸಲು ನಾವು ಆದೇಶ ಹೊರಡಿಸುತ್ತೇವೆ. ಇವುಗಳನ್ನು ಇತರ ವಿಮಾನಯಾನ ಸಂಸ್ಥೆಗಳಿಗೆ ಮರು ನಿಯೋಜಿಸಲಾಗುತ್ತದೆ ಮತ್ತು ಅವುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದಾಗ ಮತ್ತೆ ಇಂಡಿಗೋಗೆ ಹಿಂತಿರುಗಿಸಲಾಗುತ್ತದೆ ಎಂದು ನಾಯ್ಡು ತಿಳಿಸಿದ್ದಾರೆ.

ನೋಡಿರಿ

