‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆಗೆ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ
ಬೆಂಗಳೂರು: ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆಗೆ ಸಿಟಿ ಸಿವಿಲ್ ಕೋರ್ಟ್ ತಡೆ ನೀಡಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಗುರಿಯಾಗಿಸಿಕೊಂಡು ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ ಮಾಡಲು ಬಿಜೆಪಿ ಮುಂದಾಗಿತ್ತು. ಆದರೆ ಬಿಜೆಪಿಯ ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆಗೆ ಬೆಂಗಳೂರಿನ 60ನೇ ಸಿಸಿಹೆಚ್ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಮತ್ತು ಸಚಿವ ಡಾ.ಅಶ್ವತ್ಥ ನಾರಾಯಣ ಮತ್ತಿತರರಿಗೆ ಕೋರ್ಟ್, ನೋಟಿಸ್ ನೀಡಿದೆ. ಪುಸ್ತಕ ಬಿಡುಗಡೆಗೆ ತಡೆ ಕೋರಿ ಸಿದ್ದರಾಮಯ್ಯ ಪುತ್ರ, ವರುಣಾ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅರ್ಜಿ ಸಲ್ಲಿಸಿದ್ದರು. ತಂದೆಯ ವಿರುದ್ಧ ಮಾನಹಾನಿಕರ ವಿಷಯಗಳು ಪುಸ್ತಕದಲ್ಲಿವೆ. ಪುಸ್ತಕ ಬಿಡುಗಡೆ ಮಾಡಿದರೆ ತಂದೆಯ ಘನತೆಗೆ ಧಕ್ಕೆಯಾಗುತ್ತೆದೆ. ಸಿದ್ದರಾಮಯ್ಯನವರ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ವಿಷಯಗಳಿವೆ. ಹೀಗಾಗಿ ಇದಕ್ಕೆ ತಡೆಯಾಜ್ಞೆ ನೀಡುವಂತೆ ಡಾ.ಯತೀಂದ್ರ ಸಿದ್ದರಾಮಯ್ಯ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಟ್ರಾಫಿಕ್ ಕಿರಿಕಿರಿ – ಸದ್ಯದಲ್ಲೇ ಶುರುವಾಗಲಿದೆ ಫ್ರೀ ಕಾರಿಡಾರ್ ರಸ್ತೆ ಕಾಮಗಾರಿ
ಈ ಪುಸ್ತಕ ಬಿಡುಗಡೆಯಾಗುತ್ತಿದೆ ಎಂಬ ವಿಚಾರ ತಿಳಿದು ಪುರಭವವನದ ಬಳಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ಒಂದು ಹಂತದಲ್ಲಿ ಪ್ರತಿಭಟನೆ ಕಾವೇರಿತ್ತು. ಪೊಲೀಸರು ಮಧ್ಯೆ ಪ್ರವೇಶಿಸಬೇಕಾಯ್ತು. ಇನ್ನೊಂದೆಡೆ , ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆಗೆ ಬೆಂಗಳೂರಿನ 60ನೇ ಸಿಸಿಹೆಚ್ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿರುವ ಪ್ರತಿ ನಮಗೆ ಸಿಕ್ಕಿಲ್ಲ ಎಂದು ಕಾರ್ಯಕ್ರಮ ಆಯೋಜಕರು ಹೇಳಿದ್ದಾರೆ. ಪುಸ್ತಕ ಬಿಡುಗಡೆ, ಮಾರಾಟ ಅಲ್ಲದೇ ಮಾಧ್ಯಮ ಪ್ರಸಾರಕ್ಕೂ ಕೋರ್ಟ್ ತಡೆಯಾಜ್ಞೆ ನೀಡಿದೆ. ಮುಂದಿನ ವಿಚಾರಣೆಯನ್ನು ಫೆ.9ಕ್ಕೆ ಮುಂದೂಡಿದೆ.