ಅಂತಿಮ ಮುಡಾ ರಿಪೋರ್ಟ್ ಸಲ್ಲಿಸಿ – ಪೊಲೀಸರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕೋರ್ಟ್

ಅಂತಿಮ ಮುಡಾ ರಿಪೋರ್ಟ್ ಸಲ್ಲಿಸಿ –   ಪೊಲೀಸರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಕ್ರಮ ನಿವೇಶನ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಪತ್ನಿ ಬಿ ಎಂ ಪಾರ್ವತಿ ಹಾಗೂ ಇನ್ನಿತರರ ವಿರುದ್ಧದ ಅಂತಿಮ ತನಿಖಾ ವರದಿಯನ್ನು ಡಿಸೆಂಬರ್ 18ರ ಒಳಗೆ ಸಲ್ಲಿಸುವಂತೆ ಮೈಸೂರು ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರ್ದೇಶಿಸಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಖಾಸಗಿ ದೂರಿನ ಕುರಿತು  ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು, ಅಂತಿಮ ವರದಿ ಸಲ್ಲಿಸಲು ಲೋಕಾಯುಕ್ತ ತ‌ನಿಖಾಧಿಕಾರಿಗಳಿಗೆ ಕೊನೇ ಅವಕಾಶವಾಗಿ ಡಿಸೆಂಬರ್ 18ರ ವರೆಗೆ ಗಡುವು ನೀಡಿದರು. ಒಂದೊಮ್ಮೆ ಮುಂದಿನ ವಿಚಾರಣಾ ದಿನಾಂಕದೊಳಗೆ ಅಂತಿಮ ವರದಿ ಸಲ್ಲಿಸದಿದ್ದರೆ, ಬಿ ರಿಪೋರ್ಟ್ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಮೇಲೆಯೇ ಆದೇಶ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: Devil ಬರ್ತಿದೆ ಚಿನ್ನ – D BOSS ಗ್ರಹಣ ಬಿಡ್ತಾ? – ಜೈಲಿನ TVಯಲ್ಲಿ ಡೆವಿಲ್ ‘ದರ್ಶನ’

ಲೋಕಾಯುಕ್ತ ಪರ ವಿಶೇಷ ಅಭಿಯೋಜಕರು (ಎಸ್‌ಪಿಪಿ) ವಸ್ತುಸ್ಥಿತಿ ವರದಿ ಸಲ್ಲಿಸಿದ್ದು, ವರದಿಯ ಪ್ರತಿಯನ್ನು ದೂರುದಾರರಿಗೂ ಒದಗಿಸಲಾಗಿದೆ. ಈ ನ್ಯಾಯಾಲಯವು 2025ರ ಅಕ್ಟೋಬರ್ 10ರಂದು ಪ್ರಕರಣದ ತನಿಖೆ ಪೂರ್ಣಗೊಳಿಸಲು ಗರಿಷ್ಠ ಎರಡು ತಿಂಗಳ ಕಾಲಾವಕಾಶ ನೀಡಿತ್ತು. ತನಿಖೆಯನ್ನು ಸಾಧ್ಯವಾದಷ್ಟು ಶೀಘ್ರವಾಗಿ ಹಾಗೂ ಎರಡು ತಿಂಗಳ ಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಹಾಗೆಂದ ಮಾತ್ರಕ್ಕೆ ನ್ಯಾಯಾಲಯ ನೀಡಿರುವ ಗಡುವಿನ ಕೊನೆಯ ದಿನಾಂಕದಂದೇ ತನಿಖಾ ಸಂಸ್ಥೆಯು ತನಿಖೆಯನ್ನು ಪೂರ್ಣಗೊಳಿಸಬೇಕು ಎಂದರ್ಥವಲ್ಲ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ತನಿಖಾಧಿಕಾರಿಗಳು ಸಮರೋಪಾದಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಎಸ್‌ಪಿಪಿ ಹೇಳಿದ್ದಾರೆ.

ಈ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಮತ್ತಾವುದೇ ಕಾರಣಕ್ಕೂ ಪ್ರಕರಣವನ್ನು ಮುಂದೂಡಲು ಸಾಧ್ಯವಿಲ್ಲ. ಒಂದೊಮ್ಮೆ ಮುಂದಿನ ವಿಚಾರಣೆ ವೇಳೆಗೆ ಅಂತಿಮ ವರದಿ ಸಲ್ಲಿಸದಿದ್ದರೆ, ಲಭ್ಯವಿರುವ ದಾಖಲೆಗಳ ಆಧಾರದಲ್ಲಿ ಬಿ ರಿಪೋರ್ಟ್ ಮೇಲಿನ ಆದೇಶ ಹೊರಡಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

Kishor KV