ಇಂಡಿಗೋ ವಿಮಾನ ಹಾರಾಟ ರದ್ದು ಬೆನ್ನಲ್ಲೇ ಪ್ರಯಾಣಿಕರ ಆಕ್ರೋಶ – ಪೈಲಟ್‌ ರಜೆ ನಿಯಮಗಳನ್ನು ಸಡಿಲಿಸಿದ DGCA

ಇಂಡಿಗೋ ವಿಮಾನ ಹಾರಾಟ ರದ್ದು ಬೆನ್ನಲ್ಲೇ ಪ್ರಯಾಣಿಕರ ಆಕ್ರೋಶ – ಪೈಲಟ್‌ ರಜೆ ನಿಯಮಗಳನ್ನು ಸಡಿಲಿಸಿದ DGCA

ಕಳೆದ ಕೆಲವು ದಿನಗಳಿಂದ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯ ಅಂದರೆ ಅದು ವಿಮಾನ ರದ್ದು ವಿಚಾರ. ಅದರಲ್ಲೂ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದಲ್ಲಿ ದೊಡ್ಡ ಅಡೆಚಣೆ ಉಂಟಾಗಿದೆ. ಇದ್ರಿಂದಾಗಿ ಲಕ್ಷಾಂತರ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಸಾವಿರಾರು ವಿಮಾನಗಳ ರದ್ದು, ಗಂಟೆಗಟ್ಟಲೆ ವಿಳಂಬ ಮತ್ತು ಪ್ರಯಾಣಿಕರ ಆಕ್ರೋಶ ತಾರಕಕ್ಕೇರಿದೆ. ಈ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಶುಕ್ರವಾರ ಮಹತ್ವದ ನಿರ್ಧಾರ ತೆಗೆದುಕೊಂಡು ಸಿಬ್ಬಂದಿ ಕರ್ತವ್ಯ ನಿಯಮಗಳನ್ನು ತಾತ್ಕಾಲಿಕವಾಗಿ ಸಡಿಲಗೊಳಿಸಿದೆ.

ಇದನ್ನೂ ಓದಿ: ಇಂಡಿಗೋ ವಿಮಾನಗಳ ಹಾರಾಟ ರದ್ದು – ತಮ್ಮದೇ ಆರತಕ್ಷತೆಗೆ ಆನ್‌ಲೈನ್‌ನಲ್ಲಿ ಭಾಗಿಯಾದ ವಧು, ವರ!

ಬೇರೆ ಕಂಪನಿಗಳಿಗೆ ಹೋಲಿಸಿದರೆ ಇಂಡಿಗೋ ಕಡಿಮೆ ವೆಚ್ಚದ ವಿಮಾನ ಸೇವೆಗಳನ್ನು ನೀಡುತ್ತಿದೆ. ರಾತ್ರಿ ಸಮಯದಲ್ಲೇ ಹೆಚ್ಚಿನ ವಿಮಾನಗಳನ್ನು ಹಾರಿಸುತ್ತದೆ. ಹೀಗಾಗಿ ಲಕ್ಷಾಂತರ ಮಂದಿ ಇಂಡಿಗೋದಲ್ಲೇ ಪ್ರಯಾಣಿಸುತ್ತಾರೆ. ಇದ್ರಿಂದಾಗಿ ಭಾರತದ ವಿಮಾನ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಬಹಳ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೈಲಟ್‌ಗಳ ಕೊರತೆ ಇದ್ದರೂ ಇರುವ ಪೈಲಟ್‌ಗಳ ಮೇಲೆ ಕಂಪನಿಗಳು ಹೆಚ್ಚಿನ ಒತ್ತಡ ಹಾಕಿಸುತ್ತವೆ ಎಂಬ ದೂರುಗಳು ಬರುತ್ತಿದ್ದವು. ಸಿಬ್ಬಂದಿ ಆರೋಗ್ಯ, ಮಾನಸಿಕ ಆರೋಗ್ಯ.. ಇತ್ಯಾದಿ ಸಮಸ್ಯೆಯನ್ನು ಪರಿಗಣಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಪೈಲಟ್‌ಗಳು ಮತ್ತು ಸಿಬ್ಬಂದಿಗೆ ಸಾಕಷ್ಟು ವಿಶ್ರಾಂತಿ ನೀಡಲು ಹೊಸ ನಿಯಮಗಳನ್ನು ಜಾರಿ ಮಾಡಿದೆ. ಈ ನಿಯಮವನ್ನು ಕಂಪನಿಗಳು ಈಗ ಕಡ್ಡಾಯವಾಗಿ ಪಾಲನೆ ಮಾಡಬೇಕಾದ ಕಾರಣ ಇಂಡಿಗೋ ಕಾರ್ಯಾಚರಣೆಯಲ್ಲಿ ಸಮಸ್ಯೆ ಆರಂಭವಾಗಿದೆ.  ಇದ್ರಿಂದಾಗ ಸಾವಿರಾರು ವಿಮಾನ ಹಾರಾಟ ರದ್ದಾಗಿದೆ. ಲಕ್ಷಾಂತರ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ. ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾದ ಬೆನ್ನ್ಲಲೇ DGCA ತನ್ನ ನಿಯಮಗಳನ್ನು ಸಡಿಲಿಸಿದೆ.

ಯಾವ ನಿಯಮಗಳು ಏನು ಬದಲಾವಣೆಯಾಗಿದೆ?

ಪೈಲಟ್ ಅಥವಾ ಕ್ಯಾಬಿನ್ ಸಿಬ್ಬಂದಿಗೆ ಒಂದು ದಿನದಲ್ಲಿ ಒಟ್ಟು 10-13 ಗಂಟೆ ಕರ್ತವ್ಯ ಮಾಡಬಹುದಿತ್ತು. ಆದರೆ ವಿಮಾನಯಾನ ರೋಸ್ಟರ್ ಮಾನದಂಡಗಳ ಪ್ರಕಾರ ಈಗ ಗರಿಷ್ಠ 10 ಗಂಟೆ ಮಾತ್ರ ನಿಗದಿ ಮಾಡಲಾಗಿದೆ.

ಈ ಮೊದಲು ವಾರದಲ್ಲಿ ಕನಿಷ್ಠ 36 ಗಂಟೆ ವಿಶ್ರಾಂತಿ ನೀಡಲಾಗುತ್ತಿತ್ತು. ಆದರೆ ಈಗ ಕನಿಷ್ಠ 48 ಗಂಟೆ ವಿಶ್ರಾಂತಿ ಪಡೆಯಬೇಕೆಂದು ಸೂಚಿಸಲಾಗಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದ ಬಳಿಕ 10 ಗಂಟೆ ವಿಶ್ರಾಂತಿ ಪಡೆಯಬಹುದಾಗಿತ್ತು. ಆದರೆ ಈಗ ಈ ಅವಧಿಯನ್ನು12 ಗಂಟೆಗೆ ವಿಸ್ತರಿಸಲಾಗಿದೆ.

ಮೊದಲು ರಾತ್ರಿ ಸಮಯದಲ್ಲಿ 6 ಬಾರಿ ಲ್ಯಾಂಡಿಂಗ್‌ ಮಾಡಲು ಅವಕಾಶವಿತ್ತು. ಆದರೆ ಈಗ 2 ಬಾರಿ ಮಾತ್ರ ಲ್ಯಾಂಡಿಂಗ್‌ಗೆ ಅವಕಾಶ ನೀಡಲಾಗಿದೆ.

ದಿನಕ್ಕೆ 8-10 ಗಂಟೆಗಳು, ವಾರಕ್ಕೆ 30 ಗಂಟೆಗಳು ಅಥವಾ 28 ದಿನಗಳಲ್ಲಿ ಗರಿಷ್ಠ100 ಗಂಟೆ ವಿಮಾನ ಹಾರಾಟಕ್ಕೆ ಸಮಯ ಮಿತಿಯನ್ನು ಹಾಕಲಾಗಿದೆ. ಇದು ವಾರ್ಷಿಕವಾಗಿ 1,000 ಗಂಟೆಗಳಿಗಿಂತ ಹೆಚ್ಚಿರಬಾರದು. ಯಾವುದೇ ವಿಮಾನಯಾನ ಸಂಸ್ಥೆಯು ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಯನ್ನು ಈ ಮಿತಿಗಳಿಗಿಂತ ಹೆಚ್ಚಿನ ಅವಧಿ ಕೆಲಸ ಮಾಡಿಸುವಂತಿಲ್ಲ.

Shwetha M