ನನ್ನಂತ ವೃದ್ಧರಿಗೆ ತೊಂದರೆ ಆಗ್ತಿದೆ! – ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ ಸೋನಿಯಾ ಗಾಂಧಿ

ನನ್ನಂತ ವೃದ್ಧರಿಗೆ ತೊಂದರೆ ಆಗ್ತಿದೆ! – ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ ಸೋನಿಯಾ ಗಾಂಧಿ

ದೆಹಲಿಯ ಇತಿಹಾಸದಲ್ಲೇ ಈ ಬಾರಿ ವಾಯುಮಾಲಿನ್ಯ ಪ್ರಮಾಣವು ತೀವ್ರ ಸ್ವರೂಪ ಪಡೆದುಕೊಂಡಿದೆ. ದೆಹಲಿಯ ಜನರು ಪ್ರತಿನಿತ್ಯ ಹಾನಿಕಾರಕ ಗಾಳಿಯನ್ನು ಉಸಿರಾಡುತ್ತಿದ್ದು, ಇದು ದಿನಕ್ಕೆ 14 ಸಿಗರೇಟ್ ಸೇದುವುದಕ್ಕೆ ಸಮನಾಗಿದೆ ಎಂದು ಡೇಟಾ ಬಹಿರಂಗಪಡಿಸಿದೆ. ಈ ಬೆನ್ನಲ್ಲೇ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಬಗ್ಗೆ ಸಂಸತ್ ಭವನದ ಆವರಣದಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ದೈವಕ್ಕೆ ಅಪಮಾನ ಮಾಡಿದ ರಣವೀರ್‌ ಸಿಂಗ್‌ಗೆ ಎದುರಾಯ್ತು ಕಾನೂನು ಸಂಕಷ್ಟ! – ಅರೆಸ್ಟ್‌ ಆಗ್ತಾರಾ ಬಾಲಿವುಡ್‌ ನಟ?

ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಂಸತ್ ಭವನದ ಆವರಣದಲ್ಲಿ ವಿರೋಧ ಪಕ್ಷದ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಸೋನಿಯಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕಗಾಂಧಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಮಕರ ದ್ವಾರದ ಹೊರಗೆ ಸಾಂಕೇತಿಕವಾಗಿ ಮಾಸ್ಕ್ ಧರಿಸಿ, ಘೋಷಣೆ ಕೂಗಿದರು. ಪ್ರಧಾನಮಂತ್ರಿ ಅವರು ಹೇಳಿಕೆ ನೀಡುವುದನ್ನು ನಿಲ್ಲಿಸಿ, ಕ್ರಮ ಕೈಗೊಳ್ಳುವಂತೆ ವಿಪಕ್ಷ ನಾಯಕರು ಆಗ್ರಹಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸೋನಿಯಾ ಗಾಂಧಿ, ಮಕ್ಕಳು ಸಾಯುತ್ತಿದ್ದಾರೆ. ನನ್ನಂತಹ ವೃದ್ಧರಿಗೆ ತೊಂದರೆಯಾಗುತ್ತಿದೆ. ಸರ್ಕಾರ ಕ್ರಮ ಕೈಗೊಳ್ಳಬೇಕು. ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಏನನ್ನಾದರು ಮಾಡಬೇಕಾಗಿರುವುದು ಸರ್ಕಾರ ಜವಾಬ್ದಾರಿಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿ, ಹೊರಗಿನ ಪರಿಸ್ಥಿತಿಯನ್ನು ನೋಡಿ. ಸೋನಿಯಾ ಗಾಂಧಿ ಹೇಳಿದಂತೆ ಮಕ್ಕಳಿಗೆ ಉಸಿರಾಡೋಕೆ ಆಗುತ್ತಿಲ್ಲ. ಸೋನಿಯಾ ಗಾಂಧಿ ಅವರಿಗೆ ಅಸ್ತಮಾ ಇದೆ ಮತ್ತು ಅವರಂತಹ ಹಿರಿಯ ನಾಗರಿಕರಿಗೆ ಉಸಿರಾಟದ ತೊಂದರೆಯಿರುತ್ತದೆ. ಅದಲ್ಲದೇ ವರ್ಷದಿಂದ ವರ್ಷಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಪ್ರತಿ ವರ್ಷ ಕೇವಲ ಹೇಳಿಕೆಗಳನ್ನು ಮಾತ್ರ ನೀಡುತ್ತಾರೆ, ಆದರೆ ಯಾವುದೇ ನಿರ್ದಿಷ್ಟ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸರ್ಕಾರ ಕ್ರಮ ಕೈಗೊಳ್ಳಬೇಕು. ನಾವೆಲ್ಲರೂ ಅವರೊಂದಿಗೆ ನಿಲ್ಲುತ್ತೇವೆ. ಇದು ರಾಜಕೀಯ ವಿಷಯವಲ್ಲ ಎಂದಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ವಾಯುಮಾಲಿನ್ಯದ ವಿಷಯ ರಾಜಕೀಯವಲ್ಲ. ಇದರ ಕುರಿತು ಚರ್ಚೆಯಾಗಬೇಕು ಮತ್ತು ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ದೆಹಲಿಯಲ್ಲಿ AQI 400, ಜನರು ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ. ಮಕ್ಕಳು ಉಸಿರಾಡೋಕೆ ತೊಂದರೆ ಅನುಭವಿಸುತ್ತಿದ್ದಾರೆ. ಇದು ಒಂದು ದೊಡ್ಡ ಆರೋಗ್ಯ ಬಿಕ್ಕಟ್ಟು. ಇದನ್ನು ಸದನದಲ್ಲಿ ಚರ್ಚಿಸಬೇಕು ಎಂದು ಸಂಸದ ಮನೀಶ್ ತಿವಾರಿ ಹೇಳಿದ್ದಾರೆ.

Shwetha M