ಸೋಲಿನ ಹೊಣೆ ಹೊತ್ತ ನಾಯಕ ಕೆ.ಎಲ್ ರಾಹುಲ್ – ಗೆಲ್ಲದಿದ್ದರೂ ಅಭಿಮಾನಿಗಳ ಮನ ಗೆದ್ದ ಹೃದಯವಂತ ಕನ್ನಡಿಗ

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತಿದೆ. ಇದರಿಂದಾಗಿ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಈ ಮಧ್ಯೆ ಸೋಲಿನ ಹೊಣೆಯನ್ನು ತಾನೇ ಹೊತ್ತುಕೊಂಡಿದ್ದಾರೆ ನಾಯಕ ಕೆ.ಎಲ್ ರಾಹುಲ್. ಈ ಮೂಲಕ ಗೆಲ್ಲದಿದ್ದರೂ ಅಭಿಮಾನಿಗಳ ಮನ ಗೆದ್ದಿದ್ದಾರೆ ಕನ್ನಡಿಗ ಕೆ.ಎಲ್ ರಾಹುಲ್.
ಇದನ್ನೂ ಓದಿ:ಬೊಂಬಾಟ್ ಬ್ಯಾಂಟಿಗ್, ಫ್ಲಾಪ್ ಬೌಲಿಂಗ್ – ಗೆಲ್ಲೋ ಪಂದ್ಯ ಟೀಂ ಇಂಡಿಯಾ ಕೈ ಬಿಟ್ಟಿದ್ದು ಹೇಗೆ ಗೊತ್ತಾ?
ದಕ್ಷಿಣ ಆಫ್ರಿಕಾ ಆಟಗಾರರ ಆರ್ಭಟಕ್ಕೆ ಟೀಮ್ ಇಂಡಿಯಾ ಸೋತಿದೆ. ಋತುರಾಜ್ ಗಾಯಕ್ವಾಡ್ ಚೊಚ್ಚಲ ಶತಕ, ಮತ್ತು ವಿರಾಟ್ ಕೊಹ್ಲಿ ಅದ್ಭುತ ಶತಕ ವ್ಯರ್ಥವಾಗಿದೆ. ಭಾರತದ ಬೌಲರ್ಸ್ ನೀಡಿದ ಕಳಪೆ ಪ್ರದರ್ಶನ ಜೊತೆಗೆ ಕಳಪೆ ಫೀಲ್ಡಿಂಗ್‌ಗೆ ಸೋಲಿನ ಬೆಲೆ ಕಟ್ಟಿಯಾಗಿದೆ. ಮಾರ್ಕ್ರಮ್ ಜವಾಬ್ದಾರಿಯುತ ಶತಕ, ಬ್ರೆವಿಸ್ ಸ್ಫೋಟಕ ಆಟವೇ ಗೆಲುವಿಗೆ ಕಾರಣವಾಗಿದ್ದಂತೂ ಸತ್ಯ. ಇದೀಗ ಟೀಮ್ ಇಂಡಿಯಾ ಕ್ಯಾಪ್ಟನ್ ಕೆ.ಎಲ್. ರಾಹುಲ್ ಈ ಸೋಲಿನ ಹೊಣೆ ತಾನೇ ಹೊರುವುದಾಗಿ ಹೇಳಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದಾಗ ನಾವು ಈ ಪಂದ್ಯವನ್ನ ಗೆಲ್ಲುತ್ತೇವೆ ಎಂದೇ ಭಾವಿಸಿದ್ದೆವು, ಆದರೆ ಇಂತಹ ಪಂದ್ಯವನ್ನ ಸೋಲು ಕಂಡಿದ್ದಕ್ಕೆ ತುಂಬಾ ಬೇಸರವಿದೆ ಎಂದು ಭಾವುಕರಾಗಿ ಮಾತನಾಡಿದ್ದಾರೆ ಕೆ.ಎಲ್ ರಾಹುಲ್. ಇಂತಹ ಸೋಲನ್ನು ಸಹಿಸಿಕೊಳ್ಳುವುದು ಕಷ್ಟ. ಸತತ ಎರಡು ಟಾಸ್‌ಗಳನ್ನು ಕಳೆದುಕೊಳ್ಳುವುದು ನಮ್ಮ ದುರದೃಷ್ಟಕರ. ಇದಕ್ಕೆ ನಾನು ನನ್ನನ್ನೇ ದೂಷಿಸುತ್ತೇನೆ. ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವುದು ತುಂಬಾ ಕಷ್ಟ ಮತ್ತು ಬೌಲರ್‌ಗಳು ಒದ್ದೆಯಾದ ಚೆಂಡಿನೊಂದಿಗೆ ಎದುರಿಸುವ ತೊಂದರೆಗಳನ್ನು ಈ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ ಎಂದು ಸೋಲಿಗೆ ಟಾಸ್ ಹಾಗೂ ಇಬ್ಬನಿ ಕಾರಣ ಎಂದು ತಿಳಿಸಿದ್ದಾರೆ. ಅಂಪೈರ್‌ಗಳು ಚೆಂಡನ್ನು ಬದಲಾಯಿಸಿದರೂ, ಇಬ್ಬನಿಯ ಪರಿಣಾಮ ಕಡಿಮೆಯಾಗಲಿಲ್ಲ. ಜೊತೆಗೆ ಈ ಮೈದಾನದಲ್ಲಿ ಇನ್ನೂ 20-25 ರನ್ ಗಳಿಸಿದ್ದರೆ, ಬೌಲರ್‌ಗಳು ಸ್ವಲ್ಪ ಹಿಡಿತ ಸಾಧಿಸುತ್ತಿದ್ದರು. ಅವರು ತಮ್ಮ ಎಲ್ಲಾ ಶಕ್ತಿಯಿಂದ ಹೋರಾಡಿದರೂ, ಫೀಲ್ಡಿಂಗ್‌ನಲ್ಲಿ ಮಾಡಿದ ಕೆಲವು ತಪ್ಪುಗಳು ನಮ್ಮ ಸೋಲಿಗೆ ಕಾರಣವಾದವು. ಒಟ್ಟಾರೆಯಾಗಿ, ಟಾಸ್ ಮತ್ತು ಇಬ್ಬನಿ ನಮ್ಮ ಸೋಲಿಗೆ ಕಾರಣವಾಯಿತು ಎಂದಿದ್ದಾರೆ.
ಸೋತರೂ ಕೂಡಾ ಕೆ. ಎಲ್ ರಾಹುಲ್ ಋತುರಾಜ್ ಆಡಿದ ಇನ್ನಿಂಗ್ಸ್ ನ್ನು ಮೆಚ್ಚಿಕೊಂಡಿದ್ದಾರೆ. ಅವರು ಸ್ಪಿನ್ನರ್‌ಗಳನ್ನು ಅದ್ಭುತವಾಗಿ ಎದುರಿಸಿದರು. ಅರ್ಧಶತಕದ ನಂತರ, ಅವರು ವೇಗವನ್ನು ಹೆಚ್ಚಿಸಿದರು ಮತ್ತು ತಂಡಕ್ಕೆ ಹೆಚ್ಚುವರಿ ರನ್‌ಗಳನ್ನು ನೀಡಿದರು. ಇದೇ ವೇಳೆ ವಿರಾಟ್ ಆಟದ ವೈಖರಿಯನ್ನು ಮೆಚ್ಚಿಕೊಂಡಿದ್ದಾರೆ. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಇನ್ನೂ ಸ್ವಲ್ಪ ಹೆಚ್ಚಿನ ಕೊಡುಗೆ ನೀಡಿದ್ದರೆ ಮತ್ತು ಎರಡು ಅಥವಾ ಮೂರು ಬೌಂಡರಿಗಳನ್ನು ಹೊಡೆದಿದ್ದರೆ. ಆ 20-25 ರನ್‌ಗಳು ಬರುತ್ತಿದ್ದವು. ಆದರೆ ನಾವು ಆ ಅವಕಾಶ ಮಿಸ್ ಮಾಡಿಕೊಂಡೆವು. ನಾನು ಐದನೇ ಕ್ರಮಾಂಕದಲ್ಲಿ ಬಂದಿದ್ದು ಸಾಂದರ್ಭಿಕ ನಿರ್ಧಾರವಾಗಿತ್ತು ಎಂದು ತಿಳಿಸಿದ್ದಾರೆ.
ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿ 1-1ರಲ್ಲಿ ಸಮಬಲವಾಗಿದೆ. ಮೂರನೇ ಪಂದ್ಯ ವಿಶಾಖಪಟ್ಟಣದಲ್ಲಿ ಶನಿವಾರ ನಡೆಯಲಿದೆ. ಈ ಪಂದ್ಯ ಎರಡೂ ತಂಡಗಳಿಗೂ ನಿರ್ಣಾಯಕವಾಗಲಿದೆ.

ನೋಡಿರಿ

