ಬೆಂಗಳೂರು ಕೆಂಪೇಗೌಡ ಏರ್ಪೋಟ್ ನಲ್ಲಿ 62ಕ್ಕೂ ಹೆಚ್ಚು ಇಂಡಿಗೋ ವಿಮಾನ ಹಾರಾಟ ರದ್ದು!

ಬೆಂಗಳೂರು ಕೆಂಪೇಗೌಡ ಏರ್ಪೋಟ್ ನಲ್ಲಿ 62ಕ್ಕೂ ಹೆಚ್ಚು ಇಂಡಿಗೋ ವಿಮಾನ ಹಾರಾಟ ರದ್ದು!

ವಿಮಾನದಲ್ಲಿ ಪ್ರಯಾಣ ಮಾಡುವವರಿಗೆ ಮಹತ್ವದ ಸುದ್ದಿಯೊಂದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 62 ಇಂಡಿಗೋ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. ಇದ್ರಿಂದಾಗಿ ಪ್ರಯಾಣಿಕರು ಏರ್‌ಪೋರ್ಟ್‌ನಲ್ಲೇ ಪರದಾಡುವಂತಾಗಿದೆ.

ಇದನ್ನೂ ಓದಿ: ರಾಜ್ಯದ ಜನರಿಗೆ ಚಳಿ ಜೊತೆಗೆ ತರಕಾರಿ ಬೆಲೆ ಏರಿಕೆಯ ಬಿಸಿ! – 1 ಕೆಜಿ ನುಗ್ಗೆ ಬೆಲೆ 700 ರೂಪಾಯಿ!

ಕಳೆದ ಎರಡು ದಿನಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಇದೀಗ ಇಂಡಿಗೋ ವಿಮಾನ ಹಾರಾಟ ಕೂಡ ರದ್ದುಗೊಳಿಸಲಾಗಿದೆ. ವಿಪರೀತ ಮಂಜಿನ ವಾತಾವರಣದಿಂದಾಗಿ ಕಳೆದ ಕೆಲ ದಿನಗಳಿಂದ ವಿಮಾನ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ಆದರೆ, ಬುಧವಾರ ವಿಪರೀತ ಮಂಜು, ತಾಂತ್ರಿಕ ದೋಷ, ಸಿಬ್ಬಂದಿ ಕೊರತೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಸೇವೆ ನೀಡುವ 62 ವಿಮಾನಗಳ ಸೇವೆಯನ್ನು ರದ್ದು ಮಾಡಲಾಗಿದೆ. ಅದರಲ್ಲಿ ತಲಾ 31 ವಿಮಾನಗಳು ಬರುವ ಮತ್ತು ಹೋಗುವ ವಿಮಾನಗಳಾಗಿವೆ. ಇಂಡಿಗೋ ಸಂಸ್ಥೆಯು ಪ್ರತಿದಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಸರಾಸರಿ 750 ವಿಮಾನಗಳ ಮೂಲಕ ಸೇವೆ ನೀಡುತ್ತಿದೆ.

ವಿಮಾನ ಸೇವೆಗಳ ರದ್ದಿನ ಕುರಿತು ಸ್ಪಷ್ಟನೆ ನೀಡಿರುವ ಇಂಡಿಗೋ ಸಂಸ್ಥೆ, ಕಳೆದೆರಡು ದಿನಗಳಿಂದ ಉಂಟಾಗಿರುವ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ವಿಮಾನ ಸೇವೆಗಳನ್ನು ರದ್ದು ಮಾಡಲಾಗುತ್ತಿದೆ. ಇದು ಸಣ್ಣ ಸಮಸ್ಯೆಯಾಗಿದ್ದು, ಅದನ್ನು ಸರಿಪಡಿಸಲಾಗುತ್ತಿದೆ. ಮುಂದಿನ 48 ಗಂಟೆಗಳೊಳಗೆ ಸಮಸ್ಯೆ ಬಗೆಹರಿಯಲಿದ್ದು, ಈ ಅವಧಿಯಲ್ಲಿ ವಿಮಾನ ಸೇವೆ ರದ್ದು, ಸಮಯ ಮರು ನಿಗದಿ ಮಾಡಲಾಗುತ್ತಿದೆ. ಇದಕ್ಕೆ ಪ್ರಯಾಣಿಕರು ಸಹಕರಿಸಬೇಕು. ಪ್ರಯಾಣಿಕರ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಅಥವಾ ಟಿಕೆಟ್‌ ಮೊತ್ತ ಮರುಪಾವತಿಯಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

Shwetha M