ಅರ್ಜುನನ ಸ್ಮಾರಕ ನಿರ್ಮಾಣವಾಗಿ 10 ತಿಂಗಳಾದ್ರೂ ಉದ್ಘಾಟನೆ ಭಾಗ್ಯ ಇಲ್ಲ! – ಸರ್ಕಾರದ ಈ ನಡೆ ಸರಿನಾ?

ಅರ್ಜುನನ ಸ್ಮಾರಕ ನಿರ್ಮಾಣವಾಗಿ 10 ತಿಂಗಳಾದ್ರೂ ಉದ್ಘಾಟನೆ ಭಾಗ್ಯ ಇಲ್ಲ! – ಸರ್ಕಾರದ ಈ ನಡೆ ಸರಿನಾ?

ಕ್ಯಾಪ್ಟನ್‌ ಅರ್ಜುನ.. ಮೈಸೂರಿನ ವಿಶ್ವವಿಖ್ಯಾತ ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತಿರುವ ಅರ್ಜುನ  ಕಾಡಾನೆ ಸೆರೆ ಕಾರ್ಯಾಚರಣೆಗಳಲ್ಲಿ ತನ್ನ ಶೌರ್ಯ ಪ್ರದರ್ಶಿಸಿದ್ದ. ತನ್ನ ಕೊನೆಯ ಕಾರ್ಯಾಚರಣೆಯಲ್ಲಿ ಕಾಡಾನೆ ವಿರುದ್ಧ ಹೋರಾಡುವ ವೇಳೆ ಅರ್ಜುನ ಮೃತಪಟ್ಟಿದ್ದಾನೆ. 2023ರ ಡಿಸೆಂಬರ್‌ 4 ರಂದು ಅರ್ಜುನ ಮೃತಪಟ್ಟಿದ್ದ ಅರ್ಜುನನ ಸ್ಮಾರಕ ನಿರ್ಮಾಣವಾಗಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಇದೀಗ ಅರ್ಜುನನ ಸ್ಮಾರಕ ನಿರ್ಮಾಣವಾಗಿದೆ. ಆದ್ರೆ ಇನ್ನೂ ಉದ್ಘಾಟನೆಗೆ ಮುಹೂರ್ತ ಫಿಕ್ಸ್‌ ಆಗಿಲ್ಲ.

ಇದನ್ನೂ ಓದಿ:  ಪೋಕ್ಸೋ ಕೇಸ್‌ನಲ್ಲಿ BSYಗೆ ಕೊಂಚ ರಿಲೀಫ್!‌ – ಸುಪ್ರೀಂಕೋರ್ಟ್​​ನಿಂದ ಮಹತ್ವದ ಆದೇಶ

ಕ್ಯಾಪ್ಟನ್‌ ಅರ್ಜುನ ಕಾಡಾನೆ ವಿರುದ್ಧ ಹೋರಾಡಿ ಮೃತಪಟ್ಟಿದ್ದ. ದಸರಾ ಆನೆ ಕ್ಯಾಪ್ಟನ್ ಅರ್ಜುನನಿಗೆ ಸ್ಮಾರಕ ನಿರ್ಮಿಸಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ಸರ್ಕಾರ ಪ್ರಾಜೆಕ್ಟ್‌ಗೆ ಅನುಮೋದನೆ ನೀಡಿತ್ತು. ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆಯ ಅರಣ್ಯದಲ್ಲಿ ಹುತಾತ್ಮ ಕಾಡಾನೆ ಅರ್ಜುನನ ಸ್ಮಾರಕ ನಿರ್ಮಾಣವಾಗಿದೆ. ದಕ್ಷಿಣ ಕನ್ನಡ ಮೂಲದ ಶಿಲ್ಪಿ ಧನಂಜಯ್ ಪಡು ಅವರ ತಂಡ 10 ತಿಂಗಳ ಹಿಂದೆಯೇ 9.8 ಅಡಿ ಎತ್ತರ, 12.4 ಅಡಿ ಉದ್ದದ ಅರ್ಜುನನ ಪುತ್ಥಳಿ ನಿರ್ಮಾಣ ಪೂರ್ಣಗೊಳಿಸಿದೆ. ಅರ್ಜುನನ ಸಮಾದಿ ಮೇಲೆಯೇ ಮೂರ್ತಿಯನ್ನು ನಿಲ್ಲಿಸಲಾಗಿದೆ.  ಆದ್ರೆ ಸರ್ಕಾರ ಮಾತ್ರ ಅರ್ಜುನ ಸ್ಮಾರಕ ಉದ್ಘಾಟನೆಗೆ ಯಾಕೋ ಮನಸ್ಸು ಮಾಡುತ್ತಿಲ್ಲ. ಇದೀಗ ಅರ್ಜುನನ ಸ್ಮಾರಕ ಉದ್ಘಾಟನೆ ಮಾಡಲು ಸ್ಥಳೀಯರು ಒತ್ತಾಯಿಸಿದ್ದಾರೆ.

ಇನ್ನು ಸ್ಥಳೀಯರು 5 ಕೋಟಿ ರೂ. ವೆಚ್ಚದಲ್ಲಿ ಭವ್ಯ ಸ್ಮಾರಕ ನಿರ್ಮಿಸಬೇಕೆಂದು ಆಗ್ರಹಿಸಿದ್ದರು. ಸರ್ಕಾರ ಮೊದಲ ಹಂತದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಶುರುಮಾಡಿತ್ತು. ಇದೀಗ ಮೂಲ ಸೌಲಭ್ಯಗಳ ಕೊರತೆ ಇದ್ದರೂ ಸ್ಮಾರಕ ಉದ್ಘಾಟನೆಗೆ ಸಿದ್ದವಾಗಿದೆ. ಡಿಸೆಂಬರ್ 6 ರಂದು ಹಾಸನಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸ್ಮಾರಕ ಲೋಕಾರ್ಪಣೆ ಮಾಡಬೇಕೆಂಬ ಆಗ್ರಹ ಹೊರಹೊಮ್ಮಿದೆ. ಅರ್ಜುನ ಹುತಾತ್ಮನಾಗಿ ಎರಡು ವರ್ಷ ಪೂರ್ತಿಯಾಗುತ್ತಿರುವುದರಿಂದ ಪುತ್ಥಳಿಯ ಉದ್ಘಾಟನೆ ವಿಳಂಬವಾಗಬಾರದೆಂದು ಸ್ಥಳೀಯರು ಹೇಳುತ್ತಿದ್ದಾರೆ.

ಸರ್ಕಾರ ಇದುವರೆಗೆ 50 ಲಕ್ಷ ರೂ. ವೆಚ್ಚದಲ್ಲಿ ಸ್ಮಾರಕದ ಪ್ರಮುಖ ಭಾಗಗಳನ್ನು ನಿರ್ಮಿಸಿದ್ದು, ಇನ್ನೂ ಶೌಚಾಲಯ, ವಿಶ್ರಾಂತಿ ಗೃಹ, ಭದ್ರತಾ ಸಿಬ್ಬಂದಿ ಕೊಠಡಿ ಸೇರಿದಂತೆ ಹಲವಾರು ಮೂಲ ಸೌಲಭ್ಯಗಳು ಬಾಕಿ ಇವೆ ಎಂದು ತಿಳಿದು ಬಂದಿದೆ. ಈ ಕುರಿತು ಮಾತನಾಡಿರುವ ಶಾಸಕ ಸಿಮೆಂಟ್ ಮಂಜು, ಅರ್ಜುನ ಈ ದೇಶದ ಆಸ್ತಿ. ಅದಕ್ಕೆ ಗೌರವ ಇದ್ದರೆ ಸರ್ಕಾರ ಶೀಘ್ರ ಸ್ಮಾರಕ ಉದ್ಘಾಟನೆ ಮಾಡಬೇಕು. ಕಂಚಿನ ಪ್ರತಿಮೆ ಬೇಡಿಕೆ ಇದ್ದರೂ ಫೈಬರ್ ಮೂರ್ತಿ ನಿರ್ಮಾಣವಾಗಿದೆ. ಈ ವಿಷಯವನ್ನು ಅರಣ್ಯ ಸಚಿವರ ಗಮನಕ್ಕೆ ತರುತ್ತೇನೆ ಎಂದು ಹೇಳಿದ್ದಾರೆ.

Shwetha M