ಚಿನ್ನಸ್ವಾಮಿ ಸ್ಪೇಡಿಯಂ ವಿಷ್ಯದಲ್ಲಿ ಎಡವುತ್ತಿದ್ಯಾ ರಾಜ್ಯ ಸರ್ಕಾರ? – ಐಪಿಎಲ್ ಪಂದ್ಯ ನಡೆಸೋಕೆ ಯಾಕೆ ಈ ಆಟ?

ಚಿನ್ನಸ್ವಾಮಿ ಸ್ಪೇಡಿಯಂ ವಿಷ್ಯದಲ್ಲಿ ಎಡವುತ್ತಿದ್ಯಾ ರಾಜ್ಯ ಸರ್ಕಾರ? –  ಐಪಿಎಲ್ ಪಂದ್ಯ ನಡೆಸೋಕೆ ಯಾಕೆ ಈ ಆಟ?

 

ಆರ್‌ಸಿಬಿ ಕಪ್ ಗೆದ್ದ ವೇಳೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದ ಘಟನೆಯನ್ನ ಯಾರು ಕೂಡ ಮರೆಯಲ್ಲ.. 18 ವರ್ಷದ ಬಳಿಕ ಕಪ್ ಗೆದ್ದ ಖುಷಿ 18 ಗಂಟೆ ಕೂಡ ಇರಲಿಲ್ಲ. ಕಪ್ ಗೆದ್ದ  ಖುಷಿಯಲ್ಲಿ ತೇಲುತ್ತಿದ್ದ 11 ಫ್ಯಾನ್ಸ್‌ ಚಿನ್ನಸ್ವಾಮಿ ಸ್ಪೇಡಿಯಂ ಬಳಿ ಪ್ರಾಣ ಬಿಟ್ಟಿದ್ರು. ಈ ಘಟನೆ ಚಿನ್ನಸ್ವಾಮಿ ಸ್ಪೇಡಿಯಂಗೆ ಕಪ್ಪು ಚುಕ್ಕೆ ಆಗಿದೆ. ಈ ಘಟನೆ ಯಾಕ್ ಆಯ್ತು ಹೇಗ್ ಆಯ್ತು ಅಂತ ಗೊತ್ತಿದ್ದರು ಕೂಡ ಈ ಸ್ಪೇಡಿಯಂಗೆ ಕಪ್ಪು ಮಸಿ ಬಳಿಯುವ ಕೆಲಸ ಆಗುತ್ತಲೇ ಇದೆ. ಈ ಘಟನೆ ಆದ ಮೇಲೆ ಒಂದೇ ಒಂದು ಪಂದ್ಯ ಕೂಡ ಈ ಸ್ಟೇಡಿಯಂನಲ್ಲಿ ನಡೆದಿಲ್ಲ. ಮುಂದೆ ನಡೆಯುವುದು ಕೂಡ ಡೌಟ್ ಅನ್ನೋ ಮಾತು ಕೇಳಿ ಬರ್ತಿದೆ.

ಎಲ್ಲರು ಕಾತುರದಿಂದ ಕಾಯುತ್ತಿರೋ 2026ರ ಐಪಿಎಲ್‌ ಪಂದ್ಯಗಳೂ ಬೇರೆ ಕಡೆ ಶಿಫ್ಟ್ ಆಗುವ  ಸಾಧ್ಯತೆಯಿದೆ. ನಗರದ ಹೃದಯಭಾಗದಲ್ಲಿರುವ ಪಿಡಬ್ಲ್ಯೂಡಿ ಗುತ್ತಿಗೆ ಪಡೆದ 17 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿರುವ ಈ ಕ್ರೀಡಾಂಗಣವು, ಅದರ ವೀಕ್ಷಕ ಗ್ಯಾಲರಿಗಳು ಮತ್ತು ಒಟ್ಟಾರೆ ರಚನೆಯು ದೊಡ್ಡ ಜನಸಂದಣಿಯನ್ನು ಸರಿಹೊಂದಿಸಲು ಸುರಕ್ಷಿತವಾಗಿದೆ ಎಂಬುದನ್ನು ಈಗ ಪ್ರದರ್ಶಿಸಬೇಕು. ತಜ್ಞರು ಕ್ರೀಡಾಂಗಣದ ರಚನಾತ್ಮಕ ಫಿಟ್ನೆಸ್ ಅನ್ನು ಪ್ರಮಾಣೀಕರಿಸಿದ ನಂತರವೇ 2026 ರಲ್ಲಿ ಐಪಿಎಲ್ ಪಂದ್ಯಗಳನ್ನು ಚಿನ್ನಸ್ವಾಮಿಗೆ ಹಿಂತಿರುಗಿಸಲು ಅನುಮತಿ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಜೈಲಿನಲ್ಲಿದ್ದುಕೊಂಡೇ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟ ದಾಸ! – ಡೆವಿಲ್‌ ಟ್ರೈಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್!‌

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಕಾಲ್ತುಳಿತಕ್ಕೆ 11 ಮಂದಿ ಮೃತಪಟ್ಟಿದ್ದರು. ಆ ಬಳಿಕ ಇಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ನಡೆದಿಲ್ಲ. ಮಹಿಳಾ ಏಕದಿನ ವಿಶ್ವಕಪ್‌ ಬೇರೆಡೆ ಸ್ಥಳಾಂತರಗೊಂಡಿದ್ದರೆ, ಮುಂದಿನ ಪುರುಷರ ಟಿ20 ವಿಶ್ವಕಪ್‌ ಪಂದ್ಯಗಳೂ ಇಲ್ಲಿ ನಡೆಯುವುದಿಲ್ಲ. ಈಗ ಐಪಿಎಲ್ ಕೂಡ ನಡೆದಿಲ್ಲ ಅಂದ್ರೆ ಕರ್ನಾಟಕದ ಫ್ಯಾನ್ಸ್‌  ತಮ್ಮ ತವರು ಪಂದ್ಯಗಳನ್ನ ಬೇರೆ ರಾಜ್ಯಕ್ಕೆ ಹೋಗಿ ನೋಡಬೇಕಾಗುತ್ತೆ.

ಇತ್ತೀಚೆಗಷ್ಟೇ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯು ಪಂದ್ಯಗಳನ್ನು ಪುಣೆಯಲ್ಲಿ ನಡೆಸಲು ಆರ್‌ಸಿಬಿಗೆ ಆಫರ್‌ ನೀಡಿತ್ತು. ಇದೀಗ ರಾಜ್ಯ ಸರ್ಕಾರದ ನಡೆ ನೋಡುವಾಗ ಆರ್‌ಸಿಬಿ ಪಂದ್ಯಗಳು ಬೆಂಗಳೂರಿನಿಂದ ಹೊರಗೆ ನಡೆಯುವುದು ಖಚಿತ ಎನ್ನುವಂತಿದೆ. ಇಲ್ಲಿ ಈ ಕಾಲ್ತುಳಿತ ಆಗುವುದ್ದಕ್ಕೆ ರಾಜ್ಯ ಸರ್ಕಾರದ ಪಾಲು ದೊಡ್ಡದಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೂ ಕೂಡ  ಚಿನ್ನಸ್ವಾಮಿ ಸ್ಪೇಡಿಯಂ ಅನ್ನ ಅನುಮಾನಿಸುವುದು ಸರಿಯಲ್ಲ.

 

Kishor KV