ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೌಂಟರ್ – ಭಾನುವಾರ ಬೆಂಗಳೂರಿನಲ್ಲಿ ಜನ ಸಾಹಿತ್ಯ ಸಮ್ಮೇಳನ
ಬೆಂಗಳೂರು: ಹಾವೇರಿಯಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಆದರೆ ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ಪಾರದರ್ಶಕವಾಗಿ ನಡೆಯುತ್ತಿಲ್ಲ. ಮುಸ್ಲಿಂ ಸಾಹಿತಿಗಳನ್ನು ಕಡೆಗಣಿಸಲಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ಇದೀಗ ಹಾವೇರಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ಕೌಂಟರ್ ಆಗಿ ಬೆಂಗಳೂರಿನಲ್ಲಿ ಭಾನುವಾರ ಜನ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಹಾವೇರಿ ಸಮ್ಮೇಳನದಲ್ಲಿ ಮುಸ್ಲಿಮರನ್ನು ಕಡೆಗಣಿಸಲಾಗಿದೆ ಎಂಬುದು ಜನ ಸಾಹಿತ್ಯ ಸಮ್ಮೇಳನದ ಆಯೋಜಕರ ಆರೋಪವಾಗಿದೆ. ಪ್ರಗತಿಪರರು, ಚಿಂತಕರು ಹಾಗೂ ಕೆಲವು ಕನ್ನಡ ಪರ ಸಂಘಟನೆಗಳು ಒಗ್ಗೂಡಿ ಈ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದ್ದಾರೆ. ಜ.8ರಂದು ಬೆಂಗಳೂರಿನ ಕೆ.ಆರ್. ವೃತ್ತದ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ಸಂತ ಶಿಶುನಾಳ ಶರೀಫ ಮತ್ತು ಗುರುಗೋವಿಂದ ಭಟ್ಟ ಸಭಾಂಗಣದಲ್ಲಿ ನಡೆಯುವ ಜನ ಸಾಹಿತ್ಯ ಸಮ್ಮೇಳನ ಬೆಳಗ್ಗೆ 9 ಗಂಟೆಯಿಂದಲೇ ಆರಂಭವಾಗಲಿದೆ.
ಇದನ್ನೂ ಓದಿ: ಕನಕನ ನಾಡಿನಲ್ಲಿ ಮೊಳಗಿದ ಕನ್ನಡ ಡಿಂಡಿಮ – ಪುಟಿದೆದ್ದ ಸಾಹಿತ್ಯಾಭಿಮಾನ
ವಾಟಾಳ್ ನಾಗರಾಜ್, ಶಿವರಾಮೇಗೌಡ, ಬಿ.ಎನ್. ಜಗದೀಶ್ ಅವರು ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಾದಲ್ ನಂಜುಂಡಸ್ವಾಮಿ, ಸತೀಶ್ ಆಚಾರ್ಯ, ಪಂಜುಗಂಗೊಳ್ಳಿ ಸೇರಿದಂತೆ ಹಲವು ಕಲಾವಿದರು ವ್ಯಂಗ್ಯಚಿತ್ರ ಮತ್ತು ಪೋಸ್ಟರ್‌ಗಳ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಚಂಪಾ ವೇದಿಕೆಯಲ್ಲಿ ಸಮ್ಮೇಳನವನ್ನು ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಉದ್ಘಾಟಿಸಲಿದ್ದಾರೆ. ಕವಿಯತ್ರಿ ಬಾನು ಮುಷ್ತಾಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕ ಪುರುಷೋತ್ತಮ ಬಿಳಿಮಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.. ಮಧ್ಯಾಹ್ನ 12.30ಕ್ಕೆ ಸಾಹಿತ್ಯ, ಪ್ರಭುತ್ವ ಮತ್ತು ಬಹುತ್ವ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಇದೇ ವೇಳೆ ‘ಧೀರ ಟಿಪ್ಪು ಲಾವಣಿಗಳು’, ‘ನಮ್ಮ ಟಿಪ್ಪು -ವದಂತಿ ಮತ್ತು ಸತ್ಯ ಸಂಗತಿ’ ಪುಸ್ತಕಗಳು ಬಿಡುಗಡೆಯಾಗಲಿವೆ. ಮಧ್ಯಾಹ್ನ 1.30ಕ್ಕೆ ಆಹಾರ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಬಂಜಗೆರೆ ಜಯಪ್ರಕಾಶ್ ಅಧ್ಯಕ್ಷತೆ ಯಲ್ಲಿ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ‘ಸೌಹಾರ್ದ ಮತ್ತು ಕನ್ನಡತನ’ ಕುರಿತು ರಾಜೇಂದ್ರ ಚೆನ್ನಿ ಅವರಿಂದ ವಿಚಾರಗೋಷ್ಠಿ ನಡೆಯಲಿದೆ. ಬಳಿಕ ಅಲ್ಪಸಂಖ್ಯಾ¬ತರು ಮತ್ತು ದಲಿತರ ಮೇಲಿನ ದಾಳಿ: ಸಾಹಿತ್ಯ ಲೋಕದ ಜವಾಬ್ದಾರಿಗಳು ಕುರಿತು ಮಾವಳ್ಳಿ ಶಂಕರ್ ಮತ್ತು ಮುನೀರ್ ಕಾಟಿಪಳ್ಳ ಅವರು ಮಾತನಾಡುವರು. ‘ಕನ್ನಡವನ್ನು ಬೆಳಗಿಸಿದ ಕ್ರೈಸ್ತ ಮಿಷನರಿಗಳು’ ಕುರಿತು ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ ನಡೆಸಿಕೊಡುವರು. ಸಮ್ಮೇಳನದ ಸಮಾರೋಪ ಸಂಜೆ 5ಕ್ಕೆ ನಡೆಯಲಿದ್ದು, ಕೆ. ಮರುಳಸಿದ್ದಪ್ಪ ಸಮಾರೋಪ ಭಾಷಣ ಮಾಡುವರು. ಜಿ. ರಾಮಕೃಷ್ಣ ಅಧ್ಯಕ್ಷತೆ ವಹಿಸುವರು.