ಕಾಂಗ್ರೆಸ್ ಹೈಕಮಾಂಡ್ ಅಸಹಾಯಕ ಸ್ಥಿತಿಯಲ್ಲಿದೆ – ಸಿಎಂ ಗದ್ದುಗೆ ಗುದ್ದಾಟದ ಬಗ್ಗೆ ಬಸವರಾಜ್ ಬೊಮ್ಮಾಯಿ ಟಾಂಗ್

ಕಾಂಗ್ರೆಸ್ ಹೈಕಮಾಂಡ್  ಅಸಹಾಯಕ ಸ್ಥಿತಿಯಲ್ಲಿದೆ –  ಸಿಎಂ ಗದ್ದುಗೆ ಗುದ್ದಾಟದ ಬಗ್ಗೆ ಬಸವರಾಜ್ ಬೊಮ್ಮಾಯಿ ಟಾಂಗ್

ಸಿಎಂ ಗದ್ದುಗೆ ಗುದ್ದಾಟ ಬಗೆಹರಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೂಡಾ ಅಸಹಾಯಕ ಸ್ಥಿತಿಯಲ್ಲಿರುವುದನ್ನು ನಾನು ನೋಡಿದ್ದೇನೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯ ವಿದ್ಯಮಾನ ನೋಡಿದರೆ ಇಬ್ಬರು ಕೂಡಾ ಯಾರೂ ಹಿಂದೆ ಸರಿಯೋದಿಲ್ಲ ಎಂಬ ಪ್ರತಿಷ್ಠೆಗೆ ಬಿದ್ದಿದ್ದಾರೆ ಎಂದು ತಿಳಿಸಿದರು.

 ಇಬ್ಬರನ್ನು ಬಿಟ್ಟು ಬೇರೆಯ ಸೂತ್ರ ತಯಾರು ಮಾಡೋ ಸಾಧ್ಯತೆ ಇದೆ ಎಂದು ನನಗೆ ತಿಳಿದು ಬಂದಿದೆ. ಈಗ ನಮಗೆ ಕಾಣ್ತಿರೋ ಎರಡು ಕುದುರೆಗಳ ಜೊತೆ ಇನ್ನೊಂದು ಕಾಣದೇ ಇರೋ ಮೂರನೆ ಕುದುರೆ ರೇಸಿಗೆ ಬಂದ್ರೂ ಆಶ್ಚರ್ಯ ಇಲ್ಲ ಎಂದು ತಿಳಿಸಿದರು. ಮೂರನೇ ಕುದುರೆ ಬಗ್ಗೆ ಕೇಂದ್ರದಲ್ಲಿ ಚರ್ಚೆ ಆಗ್ತಾ ಇದೆ. ಫೋಟೋದಲ್ಲಿ ನಾಲ್ಕೈದು ಕುದುರೆ ಕಾಣುತ್ತವೆ. ಆದರೆ, ಓಡೋ ಕುದುರೆ ಯಾವುದು? ಫೋಟೋದಲ್ಲಿ ಇರೋ ಕುದುರೆಗಳು ಓಡಲ್ಲ. ಇದೇ ತರ ಮುಂದುವರೆದರೆ ಬಿಜೆಪಿಯಿಂದ ಅವಿಶ್ವಾಸ ನಿರ್ಣಯ ಮಂಡನೆ ಮಾಡಬೇಕಾಗಬಹುದು ಎಂದರು.

1969 ರಿಂದಲೇ ಕಾಂಗ್ರೆಸ್​​ನವರು ಕುದುರೆ ವ್ಯಾಪಾರ ಪ್ರಾರಂಭ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ ಅವಾಗ ಎಲ್ಲಿದ್ರು? ಆಗಿನ್ನೂ ಅವರು ರಾಜಕೀಯದಲ್ಲಿ ಇರಲೇ ಇಲ್ಲ ಎಂದು ಬೊಮ್ಮಾಯಿ ತಿಳಿಸಿದರು. ಕಾಂಗ್ರೆಸ್ ಇತಿಹಾಸ ತೆಗೆದು ನೋಡಿದರೆ ಗೊತ್ತಾಗುತ್ತೆ, ಮಹಾರಾಷ್ಟ್ರದ ಕೆಲ ಶಾಸಕರನ್ನ, ವಿಲಾಸ್ ರಾವ್ ದೇಶಮುಖ್​ರನ್ನು ಬೆಂಗಳೂರಿನಲ್ಲಿ ಇಟ್ಟುಕೊಂಡಿದ್ದು ಕಾಂಗ್ರೆಸ್​​ನವರು ಎಂಬುದನ್ನು ಮರೆತು ಬಿಟ್ಟರಾ? ಎಂದು ಪ್ರಶ್ನಿಸಿದರು. ಮೆಕ್ಕೆಜೋಳ ಖರೀದಿ ಕುರಿತು ಮಾತನಾಡಿದ ಅವರು, ಈ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೊಟ್ಟು ಮಾಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ರಾಜ್ಯ ಸರ್ಕಾರದಲ್ಲಿ ಹಣವಿಲ್ಲ, ಘೋಷಣೆ ಮಾಡಿದ ನಂತರ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕಿತ್ತು, ಏಜೆನ್ಸಿಗೆ ನೀಡಬೇಕಿತ್ತು ಎಂದಿದ್ದಾರೆ. ರಾಜ್ಯ ಸರ್ಕಾರ ತಾನೇ ಆದೇಶ ಮಾಡಿ ತಾನೇ ಪಾಲಿಸುತ್ತಿಲ್ಲ ಅಂದರೆ ಕಾಂಗ್ರೆಸ್ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದೇ ಅರ್ಥ. ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗುವ ಕಾರಣವಾದರೂ ಏನು?. ಇವರು ಮಾಡುವ ಕೆಲಸಕ್ಕೆ‌ ನಿಯೋಗ ಏಕೆ? ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.

Kishor KV