ತನ್ನ ಮಕ್ಕಳನ್ನು ಹಿಂಪಡೆಯಲು ಲಿಂಗವನ್ನೇ ಬದಲಾಯಿಸಿಕೊಂಡ ವಿಚ್ಚೇದಿತ
ಹೆತ್ತವರು ಮಕ್ಕಳಿಗಾಗಿ ಏನು ಬೇಕಾದರೂ ಮಾಡುತ್ತಾರೆ. ತಮಗೆ ಎಷ್ಟೇ ಕಷ್ಟ ಬಂದರೂ ಅದನ್ನು ಲೆಕ್ಕಿಸದೆ ತಮ್ಮ ಮಕ್ಕಳ ಶ್ರೇಯಸ್ಸಿಗಾಗಿ ಹಗಲು ರಾತ್ರಿ ದುಡಿಯುತ್ತಾರೆ. ತಾನು ಕಷ್ಟಪಟ್ಟರೂ, ತಮ್ಮ ಮಕ್ಕಳು ಖುಷಿಯಿಂದ ಬಾಳಬೇಕು ಎಂದು ಬಯಸುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ಇಲ್ಲೊಬ್ಬ ವಿಚ್ಛೇದಿತ ವ್ಯಕ್ತಿ ತನ್ನ ಹೆಣ್ಣುಮಕ್ಕಳನ್ನು ಮರಳಿ ಪಡೆಯಲು ತನ್ನ ಲಿಂಗವನ್ನೇ ಬದಲಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಕೊರೆಯುವ ಚಳಿ ಮಧ್ಯೆ ರಾಹುಲ್ ಗಾಂಧಿ ಹೆಜ್ಜೆ
ದಕ್ಷಿಣ ಅಮೆರಿಕಾದ ರೆನೆ ಸಲಿನಾಸ್ ರಾಮೋಸ್(47), ಕೆಲ ವರ್ಷಗಳ ಹಿಂದೆ ಪತ್ನಿಗೆ ವಿಚ್ಚೇದನ ನೀಡಿದ್ದಾರೆ. ರಾಮೋಸ್ ಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ವಿಚ್ಚೇದನ ವೇಳೆ ಕಾನೂನಾತ್ಮಕವಾಗಿ ಮಕ್ಕಳನ್ನು ತಾಯಿಯ ಕಸ್ಟಡಿಗೆ ಒಪ್ಪಿಸಲಾಗಿತ್ತು. ಆದರೆ ಆತನ ಪತ್ನಿ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಹಾಗಾಗಿ ರಾಮೋಸ್ ಮಕ್ಕಳನ್ನು ತನ್ನ ಕಸ್ಟಡಿಗೆ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ. ಕಾನೂನಾತ್ಮಕವಾಗಿ ಮಕ್ಕಳನ್ನು ತನ್ನ ಕಸ್ಟಡಿಗೆ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಅದಕ್ಕಾಗಿ ಆತ ತನ್ನ ಲಿಂಗವನ್ನೇ ಬದಲಾಯಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಮಕ್ಕಳ ಕಸ್ಟಡಿ ವಿಚಾರಕ್ಕೆ ಬಂದಾಗ ಅವರ ದೇಶದ ಕಾನೂನುಗಳು ಪುರುಷರಿಗಿಂತ ತಾಯಂದಿರನ್ನು ಹೆಚ್ಚು ಬೆಂಬಲಿಸುತ್ತದೆ. ಆದ್ದರಿಂದ, ರಾಮೋಸ್ ಕಾನೂನುಬದ್ಧವಾಗಿ ಮಹಿಳೆಯಾಗಲು ನಿರ್ಧರಿಸಿದ್ದಾರೆ. ಅಧಿಕೃತ ದಾಖಲೆಗಳು ಈಗ ರಾಮೋಸ್ ಅನ್ನು ಮಹಿಳೆ ಎಂದೇ ಗುರುತಿಸುತ್ತಿವೆ.
ಈ ಬಗ್ಗೆ ಮಾತನಾಡಿದ ರಾಮೋಸ್, “ಈ ದೇಶದಲ್ಲಿ ತಂದೆಯಾದವನಿಗೆ ಶಿಕ್ಷೆ ಹೆಚ್ಚು. ಗಂಡಸನ್ನು ಕೇವಲ ಪೂರೈಕೆದಾರನಂತೆ ಮಾತ್ರ ನೋಡಲಾಗುತ್ತದೆ. ಮಕ್ಕಳನ್ನು ಸಾಕುವ ಹಕ್ಕು ಇರುವುದು ಮಹಿಳೆಗೆ ಮಾತ್ರ ಎಂದು ಕಾನೂನು ಹೇಳುತ್ತದೆ. ಈ ಕ್ಷಣಕ್ಕೆ ನಾನು ಹೆಣ್ಣಾಗಿದ್ದೇನೆ. ಈಗ ನಾನು ತಂದೆ ಮಾತ್ರ ಅಲ್ಲ, ತಾಯಿಯೂ ಆಗಿದ್ದೇನೆ. ಇದರಿಂದ ನಾನು ನನ್ನ ಮಕ್ಕಳಿಗೆ ತಾಯಿಯ ಪ್ರೀತಿ ಮತ್ತು ರಕ್ಷಣೆಯನ್ನು ನೀಡಬಹುದು” ಎಂದು ಹೇಳಿದ್ದಾರೆ.