ಸಿಕ್ಕ ಸಿಕ್ಕಲ್ಲಿ ಕಸ ಹಾಕಿದ್ರೆ ಹುಷಾರ್!‌ – ನಿಮ್ಮ ಮೇಲೆ ಬೀಳುತ್ತೆ ಕ್ರಿಮಿನಲ್‌ ಕೇಸ್!‌

ಸಿಕ್ಕ ಸಿಕ್ಕಲ್ಲಿ ಕಸ ಹಾಕಿದ್ರೆ ಹುಷಾರ್!‌ – ನಿಮ್ಮ ಮೇಲೆ ಬೀಳುತ್ತೆ ಕ್ರಿಮಿನಲ್‌ ಕೇಸ್!‌

ಸಿಕ್ಕ ಸಿಕ್ಕಲ್ಲಿ ಕಸ ಹಾಕುವವರೇ ಹೆಚ್ಚು. ಸ್ಥಳೀಯ ಆಡಳಿತ ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದ್ರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಇನ್ನೂ ಹೆಚ್ಚು ಕಸ ಹಾಕಿ ಪರಿಸರವನ್ನ ಹಾಳು ಮಾಡ್ತಿದ್ದಾರೆ. ಇದೀಗ ಸಿಲಿಕಾನ್‌ ಸಿಟಿ ಮಂದಿಗೆ ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ನಿಗಮದ ಅಧಿಕಾರಿಗಳು ಬಿಸಿ ಮುಟ್ಟಿಸೋದಿಕ್ಕೆ ಮುಂದಾಗಿದ್ದಾರೆ. ಇದೀಗ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕೃಷ್ಣನೂರಲ್ಲಿ ಮೋದಿ ಹವಾ! – ಕನಕನ ಕಿಂಡಿ ಸ್ವರ್ಣ ಲೇಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ

ಬೆಂಗಳೂರಿನಲ್ಲಿ ಕಸ ಹಾಕುವವರ ವಿರುದ್ಧ ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ನಿಗಮದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಸಿಕ್ಕ ಸಿಕ್ಕಲ್ಲಿ ಕಸ ಹಾಕುವವರ ಮನೆ ಮುಂದೆ ಕಸ ಸುರಿದು ಫೈನ್‌ ಹಾಕಿದ್ರು. ಇದೀಗ ಕಸ ಹಾಕುವವರು ಹಾಗೂ ಕಸ ಸುಡುವವರ ಮೇಲೆ ಎಫ್ಐಆರ್ ಫೈಲ್ ಮಾಡಿ ಜೈಲಿಗೆ ಕಳಿಸುವ ಎಚ್ಚರಿಕೆ ನೀಡುತ್ತಿದ್ದಾರೆ.

ಹೌದು, ಕಸ ವಿಂಗಡಿಸಿ ಕೊಡಬೇಕು ಎಂಬ ನಿಯಮ ಜಾರಿಯಲ್ಲಿದೆ. ಆದರೂ ಕೂಡ ಜನ ಕಸ ಸುರಿದು ಬೆಂಕಿ ಇಡುತ್ತಿದ್ದಾರೆ. ಇದರಿಂದಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಈಗಾಗಲೇ ಇದನ್ನು ತಡೆಗಟ್ಟಲು BSWML ಕಠಿಣ ಕ್ರಮಕ್ಕೆ ಮುಂದಾಗಿದ್ದು, ಒಂದು ವೇಳೆ ಕಸ ಸುರಿದು ಬೆಂಕಿ ಹಾಕಿದರೆ ಮೊದಲು ದಂಡ ಪ್ರಯೋಗ ಮಾಡಲಿದೆ. ನಂತರ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗಟ್ಟಲಿದೆ. ಮೊದಲ ಬಾರಿ ಕಸಕ್ಕೆ ಬೆಂಕಿಯಿಟ್ಟರೆ 10 ಸಾವಿರ ರೂ. ದಂಡ. ಎರಡನೇ ಬಾರಿ 20 ಸಾವಿರ ರೂಪಾಯಿ ದಂಡ. ನಂತರ 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಇದಕ್ಕೂ ಕ್ಯಾರೇ ಎನ್ನದಿದ್ದರೆ ಎಫ್ಐಆರ್ ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು ಎಂದು BSWML ಸಿಇಒ ಕರಿಗೌಡ ಮಾಹಿತಿ ನೀಡಿದ್ದಾರೆ.

ಕಸ ಸುಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಘನತ್ಯಾಜ್ಯ ಘಟಕದ ಹೆಲ್ತ್‌ ಇನ್ಸ್​ಪೆಕ್ಟರ್​​ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಎಲ್ಲೆಂದರಲ್ಲಿ ಕಸ ಸುರಿದು ಬೆಂಕಿ ಹಚ್ಚಿದ ವಿಡಿಯೋ ಮಾಡಿ ಕ್ರಿಮಿನಲ್ ಮೊಕದ್ದಮೆ ಹೂಡಿ, ಪುರಾವೆಗಳ ಅಧಾರದ ಮೇಲೆ ಪರಿಸರ ಸಂರಕ್ಷಣಾ ಕಾಯ್ದೆ ಅಡಿ ಕೇಸ್ ದಾಖಲಿಸಿ. ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ 1981 ಸೆಕ್ಷನ್ 5ರ ಅಡಿ ಕೇಸ್ ದಾಖಲಿಸಿ ಎಂದು ಸೂಚನೆ ನೀಡಲಾಗಿದೆ.

ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ 1981 ಸೆಕ್ಷನ್ 5ರ ಅಡಿಯಲ್ಲಿ ಕೇಸ್ ದಾಖಲಾದರೆ 6 ತಿಂಗಳಿಂದ 6 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಸದ್ಯ ಕಸ ಸುರಿದು ಬೆಂಕಿ ಹಚ್ಚಿದ ಪ್ರಕರಣಗಳನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ವರ್ಗವಣೆ ಮಾಡಲು ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ನಿಗಮ ಮುಂದಾಗಿದೆ ಎನ್ನಲಾಗಿದೆ.

Shwetha M