2,000 ಅಪಾರ್ಟ್‌ಮೆಂಟ್ಸ್‌ ಹೊಂದಿರುವ ಕಟ್ಟದಲ್ಲಿ ಭೀಕರ ಅಗ್ನಿ ಅವಘಡ – ಸಾವಿನ ಸಂಖ್ಯೆ 44ಕ್ಕೆ ಏರಿಕೆ

2,000 ಅಪಾರ್ಟ್‌ಮೆಂಟ್ಸ್‌ ಹೊಂದಿರುವ ಕಟ್ಟದಲ್ಲಿ ಭೀಕರ ಅಗ್ನಿ ಅವಘಡ – ಸಾವಿನ ಸಂಖ್ಯೆ 44ಕ್ಕೆ ಏರಿಕೆ

ಹಾಂಗ್‌ಕಾಂಗ್‌ನಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ತೈಪೊ ಜಿಲ್ಲೆಯಲ್ಲಿ 2000 ಅಪಾರ್ಟ್‌ಮೆಂಟ್‌ಗಳನ್ನ ಹೊಂದಿರುವ ಕಟ್ಟಡಕ್ಕೆ  ಬುಧವಾರ ಬೆಂಕಿ ತಗುಲಿದ್ದು, ಈ ಅವಘಡದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದೆ. ಅಗ್ನಿ ದುರಂತದಲ್ಲಿ 44 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಅಯ್ಯಯ್ಯೋ.. ಕಾರ್‌ ವಾಶ್‌ ಮಾಡಿದ್ದಕ್ಕೆ 10 ಸಾವಿರ ಫೈನ್‌! – ಕಾರಣವೇನು ಗೊತ್ತಾ?

ಬುಧವಾರ ಮಧ್ಯಾಹ್ನ ವಾಂಗ್ ಫುಕ್ ಕೋರ್ಟ್ ಎಂಬ 8 ಬಹುಮಹಡಿ ಕಟ್ಟಡಗಳ ಸಂಕೀರ್ಣದಲ್ಲಿ  ಬೆಂಕಿ ಕಾಣಿಸಿಕೊಂಡಿದೆ. ಸುಮಾರು 2,000 ಅಪಾರ್ಟ್‌ಮೆಂಟ್‌ಗಳನ್ನ ಹೊಂದಿರುವ ಈ ಬೃಹತ್ ವಸತಿ ಸಮುಚ್ಚಯದಲ್ಲಿ ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳು ನಡೆಯುತ್ತಿದ್ದವು. ಇದಕ್ಕಾಗಿ ಕಟ್ಟಡಗಳ ಹೊರಭಾಗದಲ್ಲಿ ಬಿದಿರಿನ ಅಟ್ಟಣಿಗೆ ರಚಿಸಲಾಗಿತ್ತು. ಈ ಬಿದಿರಿನ ರಚನೆಗಳಿಗೆ ಮೊದಲು ಬೆಂಕಿ ಹೊತ್ತಿಕೊಂಡಿದ್ದು, ಬಲವಾದ ಗಾಳಿ ಮತ್ತು ಉರಿಯುತ್ತಿದ್ದ ಅವಶೇಷಗಳು ತೂರಿಬಂದ ಪರಿಣಾಮ, ಪಕ್ಕದ 7 ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿದೆ.  ಕಟ್ಟಡದ ದುರಸ್ತಿ ಕಾರ್ಯ ನಡೆಯುತ್ತಿದ್ದರಿಂದ ಹಲವು ನಿವಾಸಿಗಳು ಕಿಟಕಿಗಳನ್ನು ಮುಚ್ಚಿಕೊಂಡಿದ್ದರು. ಹೀಗಾಗಿ ಹೊರಗೆ ಬೆಂಕಿ ಬಿದ್ದಿರುವುದು ಹಲವರಿಗೆ ತಡವಾಗಿ ಅರಿವಿಗೆ ಬಂದಿದೆ. ಫೋನ್ ಕರೆಗಳ ಮೂಲಕ ನೆರೆಹೊರೆಯವರು ಎಚ್ಚರಿಸಿದ ನಂತರವಷ್ಟೇ ಕೆಲವರು ಹೊರಬಂದಿದ್ದಾರೆ. ಇನ್ನೂ ಹಲವರು ಒಳಗೇ ಸಿಲುಕಿರುವ ಪರಿಣಾಮ ಸಾವು-ನೋವು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ 900ಕ್ಕೂ ಹೆಚ್ಚು ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ಎಲ್ಲಾ ರೀತಿಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇನ್ನೂ ನೂರಾರು ಜನರು ನಾಪತ್ತೆಯಾಗಿದ್ದು, ಮೃತರ ಸಂಖ್ಯೆ ದೊಡ್ಡ ಮಟ್ಟಕ್ಕೆ ಏರಿಕೆಯಾಗುವ ಆತಂಕವಿದೆ. ಕಟ್ಟಡಗಳ ಒಳಗೆ ಉಷ್ಣಾಂಶ ವಿಪರೀತವಾಗಿರುವುದರಿಂದ ಸಹಾಯ ಕೋರಿದ ಕೆಲವು ಮಹಡಿಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಅಗ್ನಿಶಾಮಕ ದಳದ ಉಪ ನಿರ್ದೇಶಕ ಡೆರೆಕ್ ಆರ್ಮ್‌ಸ್ಟ್ರಾಂಗ್ ಚಾನ್ ತಿಳಿಸಿದ್ದಾರೆ.

ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಹಾಂಗ್‌ಕಾಂಗ್ ಪೊಲೀಸರು ತ್ವರಿತ ತನಿಖೆ ಆರಂಭಿಸಿದ್ದು, ನಿರ್ಲಕ್ಷ್ಯದ ನರಹತ್ಯೆ ಆರೋಪದ ಮೇಲೆ ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಆದರೆ ಇವರು ನಿರ್ದಿಷ್ಟವಾಗಿ ಯಾವ ರೀತಿಯ ನಿರ್ಲಕ್ಷ್ಯ ತೋರಿದ್ದಾರೆ ಎಂಬ ವಿವರಗಳನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.

Shwetha M