ಟೆಸ್ಟ್‌ನಲ್ಲಿ ವೈಟ್‌ವಾಶ್ ಮುಖಭಂಗ – ಶಾಕಿಂಗ್ ಹೇಳಿಕೆ ಕೊಟ್ಟ ಗೌತಮ್ ಗಂಭೀರ್

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ 408 ರನ್‌ಗಳ ಹೀನಾಯ ಸೋಲಿನೊಂದಿಗೆ ಸರಣಿಯಲ್ಲಿ 2-0 ವೈಟ್‌ವಾಶ್ ಮುಖಭಂಗ ಅನುಭವಿಸಿತು. ಇದು 12 ತಿಂಗಳ ಅಂತರದಲ್ಲಿ ಭಾರತ ತವರಿನಲ್ಲಿ ಸೋತ ಎರಡನೇ ಸರಣಿ ಸೋಲಾಗಿದೆ. ಈ ಸೋಲಿನ ಬೆನ್ನಲ್ಲೇ ಕೋಚ್ ಗೌತಮ್ ಗಂಭೀರ್ ತಂಡವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತಿಲ್ಲ ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಬೇಕು ಎಂಬ ಒತ್ತಾಯಗಳು ಬಲವಾಗಿ ಕೇಳಿಬಂದಿದೆ. ಅಲ್ಲದೆ ಗಂಭೀರ್ ತಲೆದಂಡ ಸಾಧ್ಯತೆಯೂ ಗೋಚರಿಸಿದೆ.
ಗಂಭೀರ್ ಕೋಚ್ ಆದ ಬಳಿಕ ಭಾರತ 19 ಟೆಸ್ಟ್ ಆಡಿದ್ದು, ಕೇವಲ 7ರಲ್ಲಿ ಗೆದ್ದಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿದೆ. ಇಂಗ್ಲೆಂಡ್ ಪ್ರವಾಸದಲ್ಲಿ 2-2 ಸಮಬಲ ಸಾಧಿಸಿದ್ದೇ ಅವರ ದೊಡ್ಡ ಸಾಧನೆ. ಗಂಭೀರ್‌ರನ್ನು ಟೆಸ್ಟ್ ತಂಡದ ಕೋಚ್ ಆಗಿ ಮುಂದುವರಿಸಬೇಕೇ ಬೇಡವೆ ಎನ್ನುವ ಬಗ್ಗೆ ಬಿಸಿಸಿಐನ ನೂತನ ಕಾರ್ಯದರ್ಶಿ ದೇವ್‌ಜಿತ್ ಅವರು ಪ್ರಧಾನ ಆಯ್ಕೆಗಾರ ಅಜಿತ್ ಅಗರ್ಕರ್ ಜೊತೆ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಪೋಕ್ಸೊ ಕೇಸ್‌ನಲ್ಲಿ ಮುರುಘಾ ಶ್ರೀಗಳಿಗೆ ಬಿಗ್ ರಿಲೀಫ್! – ಮೊದಲ ಪ್ರಕರಣದಲ್ಲಿ ಖುಲಾಸೆಗೊಳಿಸಿದ ಚಿತ್ರದುರ್ಗ ಕೋರ್ಟ್
ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 0-3ರಲ್ಲಿ ವೈಟ್‌ವಾಶ್ ಮುಖಭಂಗ ಅನುಭವಿಸಿದಾಗಲೇ ಗೌತಮ್ ಗಂಭೀರ್‌ರನ್ನು ಕೇವಲ ಸೀಮಿತ ಓವರ್ ತಂಡಗಳಿಗೆ ಕೋಚ್ ಆಗಿ ಉಳಿಸಿ, ಟೆಸ್ಟ್ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಅಥವಾ ಮತ್ತಿನ್ಯಾರಾದರೂ ಹೊಸಬರನ್ನು ನೇಮಿಸುವ ಕುರಿತು ಬಿಸಿಸಿಐ ಚಿಂತನೆ ಶುರು ಮಾಡಿತ್ತು ಎನ್ನಲಾಗಿತ್ತು. ಹರಿಣಗಳ ವಿರುದ್ಧದ ಟೂರ್ನಿಯಲ್ಲಿ ಎದುರಾದ ಸೋಲು, ಕೋಚ್ ಗಂಭೀರ್‌ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದಂತೆ ಕಾಣುತ್ತಿದೆ. ಕೆಲ ಮೂಲಗಳ ಪ್ರಕಾರ ರೆಡ್ ಬಾಲ್ ಕ್ರಿಕೆಟ್‌ಗೆ ಬೇರೊಬ್ಬ ಕೋಚ್ ನೇಮಿಸಲು ಬಿಸಿಸಿಐ ಚಿಂತಿಸುತ್ತಿದೆ ಎನ್ನಲಾಗಿದೆ.
ಭಾರತ ತಂಡದ ಸತತ ಸೋಲಿನ ಬೆನ್ನಲ್ಲೇ ಟೀಕೆಗಳು ಕೇಳಿಬರುತ್ತಿರುವ ಬೆನ್ನಲ್ಲೇ ಕೋಚ್ ಗಂಭೀರ್ ಗುವಾಹಟಿ ಟೆಸ್ಟ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ “ಕ್ರೀಡೆಗೆ ಯಾವುದೇ ಹಿನ್ನೋಟವಿಲ್ಲ. ನಾವು ಯಾವುದೇ ನಿರ್ಧಾರ ತೆಗೆದುಕೊಂಡಿದ್ದರೂ, ತಂಡದ ಹಿತದೃಷ್ಟಿಯಿಂದ ನಾವು ತೆಗೆದುಕೊಂಡಿದ್ದೇವೆ ಮತ್ತು ದೇಶ ಮತ್ತು ತಂಡಕ್ಕಾಗಿ ಕೆಲಸ ಮಾಡಲು ಅವು ಸರಿಯಾದ ನಿರ್ಧಾರಗಳಾಗಿದ್ದವು ಎಂದು ನಾವು ಸಂಪೂರ್ಣವಾಗಿ ನಂಬಿದ್ದೇವೆ. ಅಂತಿಮ ನಿರ್ಧಾರ ಬಿಸಿಸಿಐಗೆ ಬಿಟ್ಟದ್ದು ಎಂದು ಹೇಳಿದರು. ನಾನು ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗ ನನ್ನ ಮೊದಲ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೆ, ಭಾರತೀಯ ಕ್ರಿಕೆಟ್ ಮುಖ್ಯ. ನಾನು ಮುಖ್ಯನಲ್ಲ. ಮತ್ತು ನಾನು ಇಲ್ಲಿ ಕುಳಿತು ನಿಖರವಾಗಿ ಅದೇ ಮಾತನ್ನು ಹೇಳುತ್ತೇನೆ ಎಂದು ಅವರು ಹೇಳಿದರು.

ನೋಡಿರಿ

