ರೋಸ್ಟ್ ಮಾಡಿ ಅಂದವರೇ ಗಿಲ್ಲಿಯಿಂದ ಟೋಸ್ಟ್ – ಗಿಲ್ಲಿ ಮಾತಿಗೆ ರೊಚ್ಚಿಗೆದ್ದ ಉಗ್ರಂ ಮಂಜು, ರಜತ್

ಬಿಗ್ ಬಾಸ್ ಮನೆಯಲ್ಲಿ ಲಾಸ್ಟ್ ಸೀಸನ್ ಸ್ಪರ್ಧಿಗಳು ಅತಿಥಿಗಳಾಗಿ ಆಗಮಿಸಿದ್ದಾರೆ. ಬಂದ ಅತಿಥಿಗಳು ಕೂಡಾ ಸ್ಪರ್ಧಿಗಳಿಗೆ ಕಿರಿಕಿರಿ ಮಾಡಲೇಬೇಕು ಎಂದು ಹಠ ತೊಟ್ಟವರಂತೆ ಬಂದಿದ್ದಾರೆ. ಯಾರೂ ಕೂಡಾ ಮನರಂಜನೆಯಂತೂ ನೀಡುತ್ತಿಲ್ಲ. ಅಧಿಕಾರ, ದರ್ಪ, ಅತಿಥಿ ಅನ್ನೋ ನೆಪದಲ್ಲಿ ಸೇವೆ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಉರಿಸಲೇಬೇಕು ಎಂದು ಬಂದವರನ್ನು ಗಿಲ್ಲಿ ಮಾತ್ರ ಸಖತ್ತಾಗಿಯೇ ಉರಿಸುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಅತಿಥಿಗಳಾಗಿ ಉಗ್ರಂ ಮಂಜು, ರಜತ್, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ತ್ರಿವಿಕ್ರಮ್ ಬಂದಿದ್ದಾರೆ. ಇವರೆಲ್ಲರಿಗೂ ಮನೆಯವರಿಂದ ಒಳ್ಳೆಯ ಸ್ವಾಗತ ಸಿಕ್ಕಿದೆ. ಆದರೆ, ಗಿಲ್ಲಿ ಮಾತ್ರ ಇವರಿಗೆ ಕ್ಯಾರೇ ಎನ್ನುತ್ತಿಲ್ಲ. ಉಳಿದ ಸ್ಪರ್ಧಿಗಳು ಅತಿಥಿಗಳ ಎದುರು ತಲೆಬಾಗಿ ಅವರ ಆದೇಶ ಪಾಲಿಸುತ್ತಿದ್ದಾರೆ. ಆದರೆ, ಬಂದ ಅತಿಥಿಗಳು ಬರೀ ಅಧಿಕಾರ ಚಲಾಯಿಸುತ್ತಿದ್ದರೆ, ಮನೆಯಲ್ಲಿರುವ ಸ್ಪರ್ಧಿಗಳು ಬರೀ ಸೇವೆ ಮಾಡುವುದು ನಮ್ಮ ಕರ್ತವ್ಯ ಅನ್ನೋ ರೀತಿ ಆಡುತ್ತಿದ್ದಾರೆ. ಇದೊಂಥರಾ ಬೋರಿಂಗ್ ಎಪಿಸೋಡ್ ಅಷ್ಟೇ. ಆದರೆ, ಗಿಲ್ಲಿ ಮಾತ್ರ ವೀಕ್ಷಕರಿಗೆ ಸದ್ಯಕ್ಕೆ ಮನರಂಜನೆ ನೀಡುತ್ತಿದ್ದಾರೆ.
ಗಿಲ್ಲಿ ಅವರು ಯಾರೇ ಬಂದರು ಕೇರ್ ಮಾಡೋದಿಲ್ಲ. ಅವರು ತಮ್ಮ ಆಟವನ್ನು ತಾವು ಮುಂದುವರಿಸುತ್ತಾರೆ. ಕೆಲವೊಮ್ಮೆ ಅವರ ಮಾತು ಅತಿ ಎನಿಸಿದ್ದೂ ಇದೆ. ಈಗ ನವೆಂಬರ್ 25ರ ಎಪಿಸೋಡ್ನಲ್ಲಿ ಹಾಗೆಯೇ ಆಗಿದೆ. ಗಿಲ್ಲಿ ಅವರು ಬಂದ ಅತಿಥಿಗಳಿಗೆ ಕಿರಿಕಿರಿ ಮಾಡಿದ್ದಾರೆ. ಖುಷಿಯಿಂದ ಸಮಯ ಕಳೆಯಲು ಬಂದ ಅತಿಥಿಗಳು ಅಸಮಧಾನಗೊಂಡಿದ್ದಾರೆ. ರಜತ್ ಹಾಗೂ ಮಂಜು ಪಿತ್ತ ನೆತ್ತಿಗೇರಿದೆ. ಮಂಜು ಅವರ ಮದುವೆ ಎಂದು ಬಿಗ್ ಬಾಸ್ ಘೋಷಣೆ ಮಾಡಿದರು. ಇದಕ್ಕೆ ಗಿಲ್ಲಿ, ‘ಎರಡನೆಯದೋ ಅಥವಾ ಮೂರನೆಯದೋ’ ಎಂದು ಪ್ರಶ್ನೆ ಮಾಡಿದರು. ರಜತ್ ಬಳಿ, ‘ನೀವು ಬಿಟ್ಟಿ ಊಟ ಮಾಡೋಕೆ ಬಂದಿದೀರಾ’ ಎಂದರು. ಈ ಎಲ್ಲಾ ವಿಚಾರಗಳು ಅತಿಥಿಗಳ ಪಿತ್ತ ನೆತ್ತಿಗೇರಿಸಿದೆ. ರಜತ್ ಹಾಗೂ ಮಂಜು ಕರೆದು ಕಿವಿಮಾತು ಹೇಳಿದ್ದಾರೆ. ‘ಬಿಟ್ಟಿ ಊಟ ಮಾಡೋಕೆ ಬಂದೆ ಅಂತೆಲ್ಲ ಹೇಳಬೇಡ. ನನಗೆ ಸಿಟ್ಟು ಬರುತ್ತದೆ. ಊಟದ ವಿಚಾರದಲ್ಲಿ ಯಾರೂ ಮಾತನಾಡಬಾರದು. ಮಂಜುಗೆ ಎಷ್ಟನೇ ಮದುವೆ ಎಂದೆಲ್ಲ ಕೇಳ್ತಾ ಇದೀಯಾ. ಇದು ಸರಿ ಅಲ್ಲ’ ಎಂದು ರಜತ್ ಅವರು ಗಿಲ್ಲಿಗೆ ಕಿವಿಮಾತು ಹೇಳಿದರು. ಆ ಬಳಿಕ ಮಂಜು ಅವರು ಕರೆದು, ಗಿಲ್ಲಿಗೆ ಬುದ್ಧಿವಾದ ಹೇಳಿದರು. ‘ಎಲ್ಲರ ಪೇಮೆಂಟ್ ನೀನೆ ತೆಗೆದುಕೊಳ್ತಾ ಇದೀಯಾ? ಇಲ್ಲ ತಾನೇ? ಚೆನ್ನಾಗಿ ಆಡ್ತಾ ಇದೀಯಾ. ಆದರೆ, ಅವರವರ ಸ್ಪೇಸ್ನ ಅವರವರಿಗೆ ನೀಡಬೇಕು’ ಎಂದು ಗಿಲ್ಲಿಗೆ ಬುದ್ಧಿವಾದ ಹೇಳಿದರು.
ಇದಾದ ನಂತರ ಬಂದ ಅತಿಥಿಗಳಿಗೆ ರೋಸ್ಟ್ ಮಾಡಬೇಕು ಅನ್ನೋ ಟಾಸ್ಕ್ ಇರುತ್ತದೆ. ಇದನ್ನು ಗಿಲ್ಲಿ ಬಿಡುವ ಚಾನ್ಸೇ ಇಲ್ಲ. ಬಂದವರನ್ನು ಮಾತಲ್ಲೇ ರೋಸ್ಟ್ ಮಾಡಿ ಸರಿಯಾಗಿಯೇ ಉರಿಸಿದ್ದಾರೆ ಗಿಲ್ಲಿ. ಇದರಿಂದ ರಜತ್ ಅಂತೂ ಫುಲ್ ರೋಸ್ಟ್ ಆಗಿ ಟೋಸ್ಟ್ ಆಗಿ ಗಿಲ್ಲಿ ವಿರುದ್ಧ ತಿರುಗಿಬಿದ್ದಿದ್ದಾರೆ.

ನೋಡಿರಿ

