ರಾಮಮಂದಿರ ನಿರ್ಮಾಣಕಾರ್ಯ ಮುಕ್ತಾಯ – ಅಯೋಧ್ಯೆಯಲ್ಲಿ ಮೋದಿ ಕೈಯಿಂದ ರಾರಾಜಿಸಲಿದೆ ಧರ್ಮ ಧ್ವಜ!

ರಾಮಮಂದಿರ ನಿರ್ಮಾಣಕಾರ್ಯ ಮುಕ್ತಾಯ – ಅಯೋಧ್ಯೆಯಲ್ಲಿ ಮೋದಿ ಕೈಯಿಂದ ರಾರಾಜಿಸಲಿದೆ ಧರ್ಮ ಧ್ವಜ!

ಅಯೋಧ್ಯೆಯ ಭವ್ಯ ಶ್ರೀ ರಾಮ ಮಂದಿರದ ನಿರ್ಮಾಣಕಾರ್ಯ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಇಂದು ಅಯೋಧ್ಯೆಗೆ ಆಗಮಿಸಿದ್ದು, ದೇಗುಲದ ಶಿಖರದ ಮೇಲೆ 10 ಅಡಿ ಎತ್ತರದ ಭಗವಾಧ್ವಜವನ್ನು ಹಾರಿಸಲಿದ್ದಾರೆ.

ನಿನ್ನೆಯಿಂದಲೇ  ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿವೆ. ಇಂದು ( ಮಂಗಳವಾರ)  ಬೆಳಗ್ಗೆ 11:58ರಿಂದ ಮಧ್ಯಾಹ್ನ 1 ಗಂಟೆ ನಡುವಿನ ಶುಭ ಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಲಿದೆ.  ಸರಿಯಾಗಿ 12 ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಈ ದಿನ ಮಾರ್ಗಶಿರ ಶುಕ್ಲ ಪಂಚಮಿ ತಿಥಿಯಾಗಿದ್ದು, ಇದೇ ದಿನ ಶ್ರೀರಾಮ ಮತ್ತು ಸೀತೆಯರ ವಿವಾಹವಾಗಿತ್ತು. ಅಯೋಧ್ಯೆಯಲ್ಲಿ 48 ಗಂಟೆಗಳ ಕಾಲ ಅಖಂಡ ತಪಸ್ಸು ಕೈಗೊಂಡ ಸಿಖ್‌ ಗುರು ತೇಗಬಹದ್ದೂರರ ಬಲಿದಾನ ದಿನವೂ ಇವತ್ತೇ ಬಂದಿದೆ. ಹಾಗಾಗಿ ಇದೇ ದಿನ ಈ ಮಂಗಳಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ .

ಇದನ್ನೂ ಓದಿ: ಇನ್ಮುಂದೆ 9 ತಿಂಗಳ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ – ರೂಲ್ಸ್‌ ಬ್ರೇಕ್‌ ಮಾಡಿದ್ರೆ ದಂಡ ಫಿಕ್ಸ್!‌

ಶಿಖರದ ಮೇಲೆ ಸ್ಥಾಪಿಸಲಾದ 42 ಅಡಿ ಎತ್ತರದ ಧ್ವಜಸ್ತಂಭವನ್ನು 360 ಡಿಗ್ರಿ ತಿರುಗುವಂತೆ ವಿನ್ಯಾಸಗೊಳಿಸಲಾಗಿದೆ. ಧ್ವಜವು ಕೇಸರಿ ಬಣ್ಣ ಹಾಗೂ ತ್ರಿಕೋನಾಕೃತಿಯಲ್ಲಿದೆ. 10 ಅಡಿ ಎತ್ತರ ಮತ್ತು 20 ಅಡಿ ಉದ್ದವಿದೆ. ಇದರ ಮೇಲೆ ಸೂರ್ಯ, ‘ಓಂ’ ಹಾಗೂ ಕೋವಿದಾರ ಮರವನ್ನು ಚಿತ್ರಿಸಲಾಗಿದೆ. ಸೂರ್ಯನ ಚಿತ್ರ ರಾಮನ ವಂಶವಾದ ಸೂರ್ಯವಂಶವನ್ನು ಸೂಚಿಸುತ್ತದೆ. ‘ಓಂ’ ಶುಭಸೂಚಕವಾಗಿದ್ದು, ಕೋವಿದಾರ ಮರವು ಅಯೋಧ್ಯೆಯ ಪ್ರಾಚೀನ ಸಂಪ್ರದಾಯಗಳನ್ನು ಪ್ರತಿನಿಧಿಸುತ್ತದೆ.

ಇನ್ನು ಅಯೋಧ್ಯೆ ಭೇಟಿ ವೇಳೆ ಪ್ರಧಾನಿ ಮೋದಿಯವರು ಶೇಷಾವತಾರ ಮಂದಿರ, ಸಪ್ತಮಂದಿರ, ಮಾತಾ ಅನ್ನಪೂರ್ಣ ಮಂದಿರಗಳಿಗೆ ತೆರಳಿ ದರ್ಶನ ಪಡೆಯಲಿದ್ದಾರೆ. ಬಾಲರಾಮನ ದರ್ಶನ ಪಡೆದ ಬಳಿಕ ರಾಮದರ್ಬಾರ್‌ನಲ್ಲಿ ಪೂಜೆ ನೆರವೇರಿಸಲಿದ್ದಾರೆ. ಮಧ್ಯಾಹ್ನ ಧ್ವಜಾರೋಹಣ ನೆರವೇರಿಸಿದ ನಂತರ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಸಿದ್ಧ ಕಾಶಿ ವಿದ್ವಾಂಸ ಗಣೇಶ್ವರ್ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಅಯೋಧ್ಯೆ, ಕಾಶಿ ಮತ್ತು ದಕ್ಷಿಣ ಭಾರತದ 108 ಆಚಾರ್ಯರು ಈ ಆಚರಣೆಗಳನ್ನು ನೆರವೇರಿಸಲಿದ್ದಾರೆ. ಮಧ್ಯಾಹ್ನ 2:30 ರವರೆಗೆ QR-ಕೋಡೆಡ್ ಪಾಸ್‌ಗಳನ್ನು ಹೊಂದಿರುವ ಆಹ್ವಾನಿತ ಅತಿಥಿಗಳಿಗೆ ಮಾತ್ರ ದೇವಾಲಯ ಪ್ರವೇಶಿಸಬಹುದು.

ನಗರವನ್ನು ಅಲಂಕರಿಸಲಾಗಿದೆ, ರಸ್ತೆಗಳನ್ನು ಸ್ವಚ್ಛಗೊಳಿಸಲಾಗಿದೆ, ಹೊಸ ನಿಲ್ದಾಣ ಫಲಕಗಳನ್ನು ಸ್ಥಾಪಿಸಲಾಗಿದೆ, ನೈರ್ಮಲ್ಯ ತಂಡಗಳು ವ್ಯಾಪಕವಾದ ನಿರ್ವಹಣಾ ಕಾರ್ಯವನ್ನು ಕೈಗೊಂಡಿವೆ. ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಟ್ರಸ್ಟ್ ಸುಮಾರು 6,000 ಅತಿಥಿಗಳನ್ನು ಆಹ್ವಾನಿಸಿದೆ.

Kishor KV