ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ – ಮೋದಿ ಬಗ್ಗೆ ಕಾಂಗ್ರೆಸ್ ಟೀಕೆ

ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ – ಮೋದಿ ಬಗ್ಗೆ ಕಾಂಗ್ರೆಸ್ ಟೀಕೆ

ರೂಪಾಯಿ ಅಮೆರಿಕನ್ ಡಾಲರ್ ಎದುರು 98 ಪೈಸೆ ಕುಸಿದು, 89.66ರ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿತ್ತು. ದೇಶೀಯ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ಗೆ ಭಾರೀ ಬೇಡಿಕೆ, ಸ್ಥಳೀಯ ಮತ್ತು ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ವ್ಯಾಪಕ ಮಾರಾಟದ ಒತ್ತಡ, ಮತ್ತು ವ್ಯಾಪಾರ ಸಂಬಂಧಿತ ಅನಿಶ್ಚಿತತೆಗಳು ಈ ಕುಸಿತಕ್ಕೆ ಕಾರಣವಾಗಿವೆ. ಸೋಮವಾರ, ರೂಪಾಯಿ 89.46ರಲ್ಲಿ ವಹಿವಾಟು ಆರಂಭಿಸಿ, 89.17ರ ವರೆಗೆ ಏರಿತು. ಇದು ಹಿಂದಿನ ದಿನಕ್ಕಿಂತ 49 ಪೈಸೆ ಏರಿಕೆಯಾಗಿದೆ.

ಇದನ್ನೂ ಓದಿ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ  ಕಡ್ಡಾಯಕ್ಕೆ ವಿರೋಧ – ದೆಹಲಿಯಲ್ಲಿ ಶಿಕ್ಷಕರ ಪ್ರತಿಭಟನೆ

ಈ ಬಗ್ಗೆ ಕಾಂಗ್ರೆಸ್ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ” ರೂಪಾಯಿ ಡಾಲರ್ ಎದುರು ನಿರಂತರವಾಗಿ ಕುಸಿಯುತ್ತಿದೆ. ಇದು 90 ರೂಪಾಯಿಗಳ ಗಡಿಯನ್ನು ದಾಟುವ ಹಂತದಲ್ಲಿದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು 2013 ರ ತಮ್ಮ ಹೇಳಿಕೆಗಳನ್ನು ನೆನಪಿಸಿಕೊಳ್ಳುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಆಗ ಮೋದಿ ಅವರು, “ನೋಡಿ, ರೂಪಾಯಿ ಎಷ್ಟು ವೇಗವಾಗಿ ಕುಸಿಯುತ್ತಿದೆ. ಕೆಲವೊಮ್ಮೆ ರೂಪಾಯಿ ಮತ್ತು ದೆಹಲಿಯ ಸರ್ಕಾರ, ಯಾರ ಘನತೆ ವೇಗವಾಗಿ ಕಡಿಮೆಯಾಗುತ್ತದೆ ಎಂಬ ಸ್ಪರ್ಧೆ ನಡೆಯುತ್ತಿದೆ ಅನಿಸುತ್ತದೆ” ಎಂದು ಹೇಳಿದ್ದರು. ಈ ವಿಡಿಯೋವನ್ನು ಸಹ ಅವರು ಹಂಚಿಕೊಂಡಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಇದು ಅತಿ ದೊಡ್ಡ ಕುಸಿತವಾಗಿದೆ. ಫೆಬ್ರವರಿ 24, 2022 ರಂದು ರೂಪಾಯಿ 99 ಪೈಸೆ ಕುಸಿದಿತ್ತು. ಇದು ಇಲ್ಲಿಯವರೆಗಿನ ಅತಿ ದೊಡ್ಡ ಒಂದು ದಿನದ ಕುಸಿತವಾಗಿತ್ತು. ಈಗ ರೂಪಾಯಿ 89.66ಕ್ಕೆ ತಲುಪಿರುವುದು ಆತಂಕಕ್ಕೆ ಕಾರಣವಾಗಿದೆ. ರೂಪಾಯಿಯ ಈ ಕುಸಿತವು ದೇಶದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿದೇಶಿ ಹೂಡಿಕೆದಾರರು ಭಾರತದಿಂದ ಹಣವನ್ನು ಹಿಂಪಡೆಯುತ್ತಿರುವುದು ಕೂಡ ರೂಪಾಯಿ ಕುಸಿತಕ್ಕೆ ಒಂದು ಕಾರಣವಾಗಿದೆ. ಸರ್ಕಾರದ ಆರ್ಥಿಕ ನೀತಿಗಳು ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಗಳು ರೂಪಾಯಿಯ ಭವಿಷ್ಯವನ್ನು ನಿರ್ಧರಿಸಲಿವೆ. ಈ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Kishor KV