ಸಿಂಧ್ ಭಾರತಕ್ಕೆ ಮರಳಬಹುದು ಎಂದ ರಾಜನಾಥ್ ಸಿಂಗ್ ಹೇಳಿಕೆಗೆ ಉರಿದುಬಿದ್ದ ಪಾಕ್

ಸಿಂಧ್ ಭಾರತಕ್ಕೆ ಮರಳಬಹುದು ಎಂದ ರಾಜನಾಥ್ ಸಿಂಗ್ ಹೇಳಿಕೆಗೆ ಉರಿದುಬಿದ್ದ ಪಾಕ್

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು   ‘ ಗಡಿಗಳು ಬದಲಾಗಬಹುದು ‘ ಮತ್ತು ‘ಸಿಂಧ್ ಭಾರತಕ್ಕೆ ಮರಳಬಹುದು’ ಎಂದು ನೀಡಿದ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದರಲ್ಲೂ ಮುಖ್ಯವಾಗಿ ಭಾರತ-ಪಾಕಿಸ್ತಾನದ ನಡುವೆ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ನಿರೀಕ್ಷೆಯಂತೆಯೇ ಪಾಕಿಸ್ತಾನ ಇದನ್ನು ‘ಪ್ರಚೋದನಕಾರಿ’ ಎಂದು ಖಂಡಿಸಿದರೆ, ಭಾರತದಲ್ಲಿ ಈ ಹೇಳಿಕೆ ರಾಜಕೀಯ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಗಂಭೀರ ಚರ್ಚೆಗೆ ನಾಂದಿ ಹಾಡಿದೆ.

ಇದನ್ನೂ ಓದಿ : ನ.28ಕ್ಕೆ ಉಡುಪಿಗೆ ಮೋದಿ ಭೇಟಿ, ವೇಳಾ ಪಟ್ಟಿ ಪ್ರಕಟ – ರೋಡ್‌ ಶೋ ಕ್ಯಾನ್ಸಲ್

ಇದು ಕೇವಲ ಒಬ್ಬ ಸಚಿವರ ರಾಜಕೀಯ ಹೇಳಿಕೆಯಾಗಿರದೆ, ವಿಭಜನೆಯ ನೋವುಂಡ ಸಿಂಧಿ ಸಮುದಾಯದ ಭಾವನೆಗಳು ಮತ್ತು ಭಾರತದ ಪ್ರಾಚೀನ ನಾಗರಿಕತೆಯ ಸ್ಮರಣೆಯಾಗಿಯೂ ಮಾರ್ಪಟ್ಟಿದೆ. ಸಿಂಧ್ ಪ್ರಾಂತ್ಯವು ಪಾಕಿಸ್ತಾನದ ಒಂದು ಭಾಗವಾಗುವ ಎಷ್ಟೋ ಶತಮಾನಗಳ ಮೊದಲು, ಉಪಖಂಡದ ಸಂಸ್ಕೃತಿಯ ತಳಹದಿಯಾಗಿತ್ತು. ಮೊಹೆಂಜೊದಾರೊ ಮತ್ತು ಹರಪ್ಪಾದಂತಹ ಸಿಂಧೂ ಕಣಿವೆ ನಾಗರಿಕತೆಯ ಕುರುಹುಗಳು ಇದೇ ನೆಲದಲ್ಲಿವೆ. ಸಾವಿರಾರು ವರ್ಷಗಳಿಂದ ಈ ಪ್ರದೇಶವನ್ನು ‘ಸಿಂಧೂ ದೇಶ’ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಹರಿಯುವ ಸಿಂಧೂ ನದಿಯು ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಪವಿತ್ರ ಸ್ಥಾನವನ್ನು ಪಡೆದಿದೆ.

ರಾಜನಾಥ್ ಸಿಂಗ್ ಅವರು ತಮ್ಮ ಭಾಷಣದಲ್ಲಿ ಈ ಪರಂಪರೆಯನ್ನು ಬಹಳ ಜಾಣ್ಮೆಯಿಂದ ಉಲ್ಲೇಖಿಸಿದ್ದಾರೆ. ಸ್ವತಃ ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಿಂದ ವಲಸೆ ಬಂದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ಸ್ಮರಿಸುವ ಮೂಲಕ, ಸಿಂಗ್ ಅವರು ಕೇವಲ ಭೂಪ್ರದೇಶದ ಬಗ್ಗೆ ಮಾತನಾಡದೆ, ಹಂಚಿಹೋದ ನಾಗರಿಕತೆಯ ಪ್ರಜ್ಞೆಯನ್ನು ಎತ್ತಿ ಹಿಡಿದಿದ್ದಾರೆ. ಇದಕ್ಕೆ ಪೂರಕವಾಗಿ, ರವೀಂದ್ರನಾಥ ಠಾಗೋರರು ರಚಿಸಿದ ನಮ್ಮ ರಾಷ್ಟ್ರಗೀತೆಯಲ್ಲೂ “ಪಂಜಾಬ ಸಿಂಧು ಗುಜರಾತ ಮರಾಠ…” ಎಂಬ ಸಾಲುಗಳಿದ್ದು, ಸಿಂಧ್ ಇಂದಿಗೂ ಭಾರತದ ಸಾಂಸ್ಕೃತಿಕ ಭೂಗೋಳದ ಅವಿಭಾಜ್ಯ ಅಂಗ ಎಂಬುದನ್ನು ನೆನಪಿಸುತ್ತದೆ.

Kishor KV