ದೆಹಲಿ ಪೊಲೀಸರ ಯಶಸ್ವಿ ಕಾರ್ಯಾಚರಣೆ – ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ನಾಲ್ವರು ಅರೆಸ್ಟ್

ದೆಹಲಿ ಪೊಲೀಸರ ಯಶಸ್ವಿ ಕಾರ್ಯಾಚರಣೆ – ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ನಾಲ್ವರು ಅರೆಸ್ಟ್

ದೆಹಲಿಯ ಕೆಂಪು ಕೋಟೆ ಸಮೀಪದಲ್ಲಿ ನಡೆದ ಕಾರ್ ಸ್ಫೋಟ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಇದರ ಬೆನ್ನಲ್ಲೇ ದೆಹಲಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ಕಳ್ಳಸಾಗಣೆ ಜಾಲ ಪತ್ತೆ ಹಚ್ಚಿದ್ದಾರೆ. ಕಾರ್ಯಾಚರಣೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ, ಬಂಧಿತರಿಂದ ವಿದೇಶಿ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಡ್ರೋನ್ ಮೂಲಕ ಈ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಿಂದ ತರಿಸಿಕೊಳ್ಳಲಾಗಿತ್ತು ಎಂಬ ಮಾಹಿತಿ ಬಹಿರಂಗಗೊಂಡಿದೆ. ದಿಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದಿಲ್ಲಿ ಪೊಲೀಸರು ನಡೆಸಿದ ಈ ಕಾರ್ಯಾಚರಣೆಯಲ್ಲಿ, ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ದೊಡ್ಡ ಪ್ರಮಾಣದ ವಿದೇಶಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಈ ಶಸ್ತ್ರಾಸ್ತ್ರಗಳನ್ನು ಭಾರತದಲ್ಲಿ ಅಕ್ರಮವಾಗಿ ಹಂಚುವ ಉದ್ದೇಶ ಹೊಂದಿದ್ದರು. ಈ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಡಿಸಿಪಿ ಸಂಜೀವ್ ಕುಮಾರ್ ಯಾದವ್ ನೇತೃತ್ವದ ದೆಹಲಿ ತಂಡ ಕಾರ್ಯಾಚರಣೆಯನ್ನು ನಡೆಸಿತ್ತು.

ಇದನ್ನೂ ಓದಿ: ಮದುವೆ ದಿನವೇ ವಧುಗೆ ಅಪಘಾತ! – ICUನಲ್ಲೇ ತಾಳಿ ಕಟ್ಟಿದ ವರ

ದೆಹಲಿ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಇಷ್ಟೊಂದು ಅಪಾರ ಪ್ರಮಾಣದ ಆಧುನಿಕ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಿಂದ ಡ್ರೋನ್ ಮೂಲಕ ಸಾಗಾಟ ಮಾಡಲಾಗಿತ್ತು. ಇದು ನಿಜಕ್ಕೂ ಕಳವಳಕಾರಿ ವಿಧಾನವಾಗಿದೆ. ಪೊಲೀಸರು ವಶಕ್ಕೆ ಪಡೆದುಕೊಂಡ ಶಸ್ತ್ರಾಸ್ತ್ರಗಳಲ್ಲಿ 10 ಅತ್ಯಾಧುನಿಕ ವಿದೇಶಿ ಸೆಮಿ-ಆಟೋಮ್ಯಾಟಿಕ್ ಪಿಸ್ತೂಲುಗಳು ಮತ್ತು 92 ಜೀವಂತ ಗುಂಡುಗಳು ಒಳಗೊಂಡಿವೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಕಾರ್ಯಾಚರಣೆಯ ಸಂದರ್ಭದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಟರ್ಕಿಯಲ್ಲಿ ತಯಾರಾದ PX-5.7 ಪಿಸ್ತೂಲನ್ನು ವಶಕ್ಕೆ ಪಡೆಯಲಾಗಿದೆ. ಈ ಪಿಸ್ತೂಲು ಅತ್ಯಂತ ದುಬಾರಿ ಶಸ್ತ್ರಾಸ್ತ್ರವಾಗಿದೆ. ಇದನ್ನು ಕೇವಲ ವಿಶೇಷ ಪಡೆಗಳು ಮಾತ್ರ ಬಳಸುತ್ತವೆ. ಆದರೆ ಇಂತಹ ಆಧುನಿಕ ಶಸ್ತ್ರಾಸ್ತಗಳನ್ನೇ ಕಳ್ಳಸಾಗಣೆ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.

ಬಂಧಿತ ಆರೋಪಿಗಳು ಇಂತಹ ಆಧುನಿಕ ಶಸ್ತ್ರಾಸ್ತ್ರಗಳನ್ನು ಯಾವ ಉದ್ದೇಶಕ್ಕಾಗಿ ಸಾಗಾಟ ಮಾಡುತ್ತಿದ್ದರು ಹಾಗೂ ಯಾರಿಗೆ ಇದನ್ನು ಪೂರೈಕೆ ಮಾಡುತ್ತಿದ್ದರು ಎಂಬುವುದು ಬಹಿರಂಗವಾಗಬೇಕಾಗಿದೆ. ಆದರೆ ಪೊಲೀಸರು ನಡೆಸಿದ ಈ ಯಶಸ್ವಿ ಕಾರ್ಯಾಚರಣೆಯಿಂದಾಗಿ, ದೇಶವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆಗೆ ಮಾಡುವ ದುಷ್ಕರ್ಮಿಗಳಿಗೆ ದೊಡ್ಡ ಹೊಡೆತ ನೀಡಿದೆ.

Kishor KV