ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಪ್ರತಿದಿನ 5,000 ಭಕ್ತರಿಗೆ ಮಾತ್ರ ಸ್ಪಾಟ್ ಬುಕ್ಕಿಂಗ್ಗೆ ಅವಕಾಶ

ಕೇರಳದ ಪ್ರಸಿದ್ಧ ದೇವಾಲಯ ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಮಂಡಲ ಮಕರವಿಳಕ್ಕು ಯಾತ್ರೆ ಆರಂಭವಾಗಿದ್ದು, ದೇಶಾದ್ಯಂತದ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ಇದರಿಂದ ದೇವಾಲಯ ಪರಿಸರದಲ್ಲಿ ಭಾರಿ ಜನ ಸಂದಣಿ ಕಂಡು ಬರುತ್ತಿದ್ದು, ನೂಕು ನುಗ್ಗಲು ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಜನಸಂದಣಿ ನಿಯಂತ್ರಿಸಲು ಟ್ರಾವಂಕೂರ್ ದೇವಸ್ವಂ ಬೋರ್ಡ್ ಮುಂದಾಗಿದ್ದು, ನವೆಂಬರ್ 20ರಿಂದ ಪ್ರತಿದಿನ 5,000 ಮಂದಿಗೆ ಮಾತ್ರ ಸ್ಪಾಟ್ ಬುಕ್ಕಿಂಗ್ಗೆ (ಸ್ಥಳದಲ್ಲೇ ಬುಕ್ಕಿಂಗ್) ಅವಕಾಶ ನೀಡಲಾಗುತ್ತಿದೆ ಎಂದು ಘೋಷಿಸಿದೆ. ಕೇರಳ ಹೈಕೋರ್ಟ್ ನಿರ್ದೇಶನದ ಮೇರೆಗೆ ಸ್ಪಾಟ್ ಬುಕ್ಕಿಂಗ್ ಅನ್ನು ಸೀಮಿತಗೊಳಿಸಲಾಗಿದೆ ಎಂದು ಟಿಡಿಬಿ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಪಾಟ್ ಬುಕ್ಕಿಂಗ್ ವ್ಯವಸ್ಥೆ ನಿಳಕ್ಕಲ್ ಮತ್ತು ವಂಡಿಪೆರಿಯಾರ್ ಕೇಂದ್ರದಲ್ಲಿ ಮಾತ್ರ ಇರಲಿದೆ. ಪಂಪ, ಎರುಮೆಲಿ ಮತ್ತು ಚೆಂಗನೂರ್ನಲ್ಲಿ ತಾತ್ಕಾಲಿಕವಾಗಿ ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಈ ನಿರ್ಬಂಧ ನವೆಂಬರ್ 24ರವರೆಗೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ನೇಪಾಳದಲ್ಲಿ ಮತ್ತೆ ಬೀದಿಗಿಳಿದ ಜೆನ್ ಝಿ ಹೋರಾಟಗಾರರು – ಕರ್ಫ್ಯೂ ಜಾರಿ
ಶಬರಿಮಲೆ ದರ್ಶನಕ್ಕಾಗಿ ಭಕ್ತರು ಸಾಧ್ಯವಾದಷ್ಟು ಆನ್ಲೈನ್ನಲ್ಲಿ ಬುಕ್ ಮಾಡುವಂತೆ ಟಿಡಿಬಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ನವೆಂಬರ್ 17ರಂದು ದೇವಾಲಯದ ಬಾಗಿಲು ತರೆದ 48 ಗಂಟೆಗಳಲ್ಲಿಸುಮಾರು 2 ಲಕ್ಷದಷ್ಟು ಭಕ್ತರು ಭೇಟಿ ನೀಡಿ ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕಾಗಿ ಕೇರಳ ಹೈಕೋರ್ಟ್ನ ವಿಭಾಗೀಯ ಪೀಠದ ಜಸ್ಟಿಸ್ ರಾಜ ವಿಜಯರಾಘವನ್ ವಿ. ಮತ್ತು ಕೆ.ವಿ. ಜಯಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ ಟಿಡಿಬಿಯ ಕ್ರಮವನ್ನು ಟೀಕಿಸಿದ್ದಾರೆ.
ಮಂಡಲ-ಮಕರವಿಳಕ್ಕು ಋತುವಿನಲ್ಲಿ ಪ್ರತಿದಿನ ಸುಮಾರು 1 ಲಕ್ಷ ಯಾತ್ರಾರ್ಥಿಗಳಿಗೆ ದರ್ಶನಕ್ಕೆ ಅವಕಾಶವಿದ್ದು, ವಾರ್ಷಿಕವಾಗಿ 50 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಾರೆ. ಪ್ರಸ್ತುತ ಇಷ್ಟು ಭಕ್ತರನ್ನು ನಿಭಾಯಿಸಲು ವ್ಯವಸ್ಥೆಗಳು ಸಾಕಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ನವೆಂಬರ್ 19ರಂದು ಕೇರಳ ಹೈಕೋರ್ಟ್ ಶಬರಿಮಲೆ ಸನ್ನಿಧಾನಂನಲ್ಲಿನ ತೀರಾ ಅಸಮರ್ಪಕ ಸೌಲಭ್ಯಗಳಿಗಾಗಿ ಟಿಡಿಬಿಯನ್ನು ಟೀಕಿಸಿದೆ. ವಸತಿ, ನೈರ್ಮಲ್ಯ, ಕುಡಿಯುವ ನೀರು ಮತ್ತು ಜನಸಂದಣಿ ನಿರ್ವಹಣೆಯಲ್ಲಿನ ವ್ಯಾಪಕ ಸುಧಾರಣೆಗೆ ಆದೇಶಿಸಿದೆ.

ನೋಡಿರಿ

