ಬಿಹಾರದಲ್ಲಿ ನಾಳೆ ಹೊಸ ಸರ್ಕಾರದ ಪ್ರಮಾಣ ವಚನ – ಸಚಿವ ಸ್ಥಾನ ಹಂಚಿಕೆ ಫೈನಲ್

ಬಿಹಾರದಲ್ಲಿ ಹೊಸ ಸರ್ಕಾರ ರಚನೆಗೆ ಸಿದ್ಧತೆಗಳು ಆರಂಭವಾಗಿದ್ದು, ( ನಾಳೆ ) ನವೆಂಬರ್ 20 ರಂದು ಗಾಂಧಿ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ನಿತೀಶ್ ಕುಮಾರ್ ಮತ್ತೊಮ್ಮೆ ಸಿಎಂ ಆಗಲಿದ್ದಾರೆ. ಆದರೆ ಡಿಸಿಎಂ ಯಾರಾಗಲಿದ್ದಾರೆ ಎಂಬುದನ್ನು ಔಪಚಾರಿಕವಾಗಿ ಇನ್ನೂ ಘೋಷಣೆ ಮಾಡಲಾಗಿಲ್ಲ.
ಎನ್‌ಡಿಎ ಶಾಸಕರ ಸಭೆ ನಡೆಯುತ್ತಿದ್ದು ಹೊಸ ಸರ್ಕಾರದಲ್ಲಿ ಮೈತ್ರಿ ಪಕ್ಷಗಳ ನಡುವೆ ಹಂಚಿಕೆಯಾಗುವ ಸಚಿವ ಸ್ಥಾನಗಳ ಬಗ್ಗೆ ಅಂತಿಮ ತೀರ್ಮಾನವಾಗಲಿದೆ. ಈ ಸಭೆಯ ನಂತರ ನಿತೀಶ್ ಕುಮಾರ್ ರಾಜಭವನಕ್ಕೆ ಹೋಗಲಿದ್ದು, ಈ ವೇಳೆ ಹೊಸ ಶಾಸಕರ ಪಟ್ಟಿಯೊಂದಿಗೆ ಸರ್ಕಾರ ರಚಿಸಲು ತಮ್ಮ ಹಕ್ಕು ಮಂಡಿಸಲಿದ್ದಾರೆ. ಸಂಜೆ ರಾಜ್ಯಪಾಲರೊಂದಿಗಿನ ಸಭೆ ನಿಗದಿಯಾಗಿದ್ದು, ಸರ್ಕಾರ ರಚನೆ ಪ್ರಕ್ರಿಯೆಯು ಪ್ರಾರಂಭವಾಗಲಿದೆ. ಗುರುವಾರ ಬೆಳಗ್ಗೆ 11.30 ಕ್ಕೆ ಗಾಂಧಿ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ..
ಇದನ್ನೂ ಓದಿ: ಸರ್ಕಾರಿ ಶಾಲೆ ಶಿಕ್ಷಕರಿಗೆ ಗುಡ್‌ನ್ಯೂಸ್! – ಶಾಲೆಯಲ್ಲಿ ದಾಖಲಾತಿ ಹೆಚ್ಚಿಸಿದ್ರೆ ಫಾರಿನ್ ಟ್ರಿಪ್ ಭಾಗ್ಯ!
ಚುನಾವಣೆಯಲ್ಲಿ ಎನ್ಡಿಯ ಮೈತ್ರಿ ಕೂಟದ ಐದು ಪಕ್ಷದ ನಾಯಕರಿಗೆ ಸಚಿವ ಸ್ಥಾನದ ಹಂಚಿಕೆ ಹೇಗೆ ನಡೆಯಲಿದೆ ಎಂಬ ಕುತೂಹಲ ಮೂಡಿದೆ. ಮೂಲಗಳ ಪ್ರಕಾರ, ಪ್ರತಿ ಆರು ಶಾಸಕರಿಗೆ ಒಂದು ಸ್ಥಾನದಂತೆ ಸಚಿವ ಸ್ಥಾನದ ಹಂಚಿಕೆ ಸೂತ್ರ ಹೆಣೆಯಲಾಗಿದೆ. ಅಂದರೆ, 85 ಸ್ಥಾನಗಳನ್ನು ಗೆದ್ದಿರುವ ಜೆಡಿಯುಗೆ 14, 89 ಸ್ಥಾನಗಳಲ್ಲಿ ಜಯ ಸಾಧಿಸಿರುವ ಬಿಜೆಪಿಗೆ 15, 19 ಸ್ಥಾನಗೆದ್ದಿರುವ ಎಲ್ಜೆಪಿ ರಾಮ್ ವಿಲಾಸ್ಗೆ 3, 5 ಸ್ಥಾನಗಳಲ್ಲಿ ಗೆದ್ದಿರುವ ಎಚ್ಎಎಂ (ಎಸ್) 1, 4 ಸ್ಥಾನಗಳಲ್ಲಿ ವಿಜಯ ಸಾಧಿಸಿರುವ ರಾಷ್ಟ್ರೀಯ ಲೋಕ ಮೋರ್ಚಾಗೆ 1 ಸಚಿವ ಸ್ಥಾನದ ಅವಕಾಶ ನೀಡಲು ನಿರ್ಧರಿಸಲಾಗಿದೆ.
ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಮತ್ತು ಕೆಲವೇ ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಮುಂದಿನ ಹಂತದಲ್ಲಿ ಸಚಿವ ಸಂಪುಟದ ವಿಸ್ತರಣೆ ಕಾರ್ಯ ಸಾಗಲಿದೆ ಎಂದು ತಿಳಿದು ಬಂದಿದೆ. ಇಂದಿನ ಸಭೆಯಲ್ಲಿ ಸಚಿವರ ಹೆಸರುಗಳನ್ನು ಸಹ ಅಂತಿಮಗೊಳಿಸಲಾಗುವುದು. ಜೆಡಿಯು ತನ್ನ ಹಳೆಯ ಸಚಿವರಲ್ಲಿ ಹೆಚ್ಚಿನವರನ್ನು ಮತ್ತೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಹುದ್ದೆ ಇತರ ಮೈತ್ರಿ ಪಕ್ಷಗಳ ಪಾಲಾಗಲಿದ್ದು, ಯಾರು ಡಿಸಿಎಂ ಆಗಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.

ನೋಡಿರಿ

