ಯಕ್ಷಗಾನ ಕಲಾವಿದರಲ್ಲಿ ಹಲವರು ಸಲಿಂಗಿಗಳು ಹೇಳಿಕೆ ವಿವಾದ – ಕ್ಷಮೆ ಕೇಳಿದ ಪುರುಷೋತ್ತಮ ಬಿಳಿಮಲೆ!

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಕಾಮಿಗಳು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಪುರುಷೋತ್ತಮ ಬಿಳಿಮಲೆ ಕ್ಷಮೆ ಕೇಳಿದ್ದಾರೆ. ಯಕ್ಷಗಾನ ಕಲಾವಿದರಿಗೆ ನಾನು ಅವಮಾನ ಮಾಡಿಲ್ಲ. ನನ್ನ ಹೇಳಿಕೆಯಿಂದ ಬೇಸರವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಇದನ್ನೂ ಮುಳ್ಳಯ್ಯನಗಿರಿ ಪ್ರವಾಸಿಗರಿಗೆ ಶಾಕ್ – ಮುಳ್ಳಯ್ಯನಗಿರಿ ತಪ್ಪಲು 4 ದಿನ ಬಂದ್
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಪುರುಷೋತ್ತಮ ಬಿಳಿಮಲೆ, ಈಗ ಸಲಿಂಗಕಾಮ ಇಲ್ಲ. 60-70 ರ ದಶಕದಲ್ಲಿದ್ದಾಗ ಇದು ಯಕ್ಷಗಾನದಲ್ಲಿ ಇತ್ತು. ನಾನು ವಿದ್ಯಾರ್ಥಿಯಾಗಿದ್ದಾಗ ನೋಡಿದ್ದನ್ನು ಹೇಳಿದ್ದೇನೆ. ಯಾರನ್ನೂ ನೋಯಿಸುವ ಉದ್ದೇಶವನ್ನು ಈ ಹೇಳಿಕೆಯನ್ನು ನಾನು ನೀಡಿಲ್ಲ. ನಾನು ಕಳೆದ 30 ವರ್ಷಗಳಿಂದ ಯಕ್ಷಗಾನವನ್ನು ಮಾಡುತ್ತಾ ಬಂದಿದ್ದೇನೆ. ಈಗಲೂ ತಾಳಮದ್ದಳೆ ಅರ್ಥವನ್ನು ಹೇಳುತ್ತಿದ್ದೇನೆ. ನನಗೆ ಯಕ್ಷಗಾನದ ಬಗ್ಗೆ ಬಹಳಷ್ಟು ಗೌರವವಿದೆ ಎಂದು ಸ್ಪಷ್ಟನೆ ನೀಡಿದರು.
ಹಿಂದೆ ರಾತ್ರಿಯಿಡಿ ಯಕ್ಷಗಾನ ನಡೆಯುತ್ತಿತ್ತು. ಒಮ್ಮೆ ಮೇಳಕ್ಕೆ ಹೊರಟರೆ 6 ತಿಂಗಳ ನಂತರ ಕಲಾವಿದರು ಮನೆಗೆ ಬರುತ್ತಿದ್ದರು. ಸ್ತ್ರೀ ವೇಷಧಾರಿಗಳಿಗೆ ಆಗುತ್ತಿದ್ದ ನೋವನ್ನು ಹೇಳಿದ್ದೇನೆ. ಈಗ ಯಕ್ಷಗಾನ ಸಂಜೆ ಆರಂಭವಾಗಿ ರಾತ್ರಿ ಮುಕ್ತಾಯವಾಗುತ್ತದೆ. ಕಾಲಮಿತಿಯಲ್ಲಿ ಯಕ್ಷಗಾನ ಮುಕ್ತಾಯವಾಗುತ್ತಿರುವ ಕಾರಣ ಕಲಾವಿದರು ರಾತ್ರಿಯೇ ಮನೆಗೆ ಬರುತ್ತಿದ್ದಾರೆ ಎಂದು ವಿವರಿಸಿದರು.
ಬಿಳಿಮಲೆ ಹೇಳಿದ್ದೇನು?
ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ಮಂಗಳವಾರ ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು ಹಾಗೂ ನಾವು ಕೂಗುವ ಕೂಗು ಕೃತಿಗಳನ್ನು ಬಿಡುಗಡೆ ಮಾಡಿ ಪುರುಷೋತ್ತಮ ಬಿಳಿಮಲೆ ಮಾತನಾಡಿದ್ದರು. ಈ ವೇಳೆ, ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು ಇರುತ್ತಿದ್ದರು. ಅಲ್ಲಿ ಅಂತಹ ಅನಿವಾರ್ಯತೆ ಇತ್ತು. ಯಕ್ಷಗಾನದೊಳಗೆ ಎಷ್ಟೋ ಬಾರಿ ಹೋಮೋಸೆಕ್ಸ್ ಬೆಳೆಯುತ್ತಿದ್ದವು. ಸಲಿಂಗಕಾಮವನ್ನು ಸ್ತ್ರೀವೇಷದ ಕಲಾವಿದ ನಿರಾಕರಿಸುತ್ತಿದ್ದರೆ, ಭಾಗವತರು ಮರು ದಿವಸ ಅವರಿಗೆ ಪದ್ಯವನ್ನೇ ನೀಡುತ್ತಿರಲಿಲ್ಲ. ಮುಂದಿನ ವರ್ಷ ಆ ಕಲಾವಿದರಿಗೆ ಮೇಳ ಸಿಗುತ್ತಿರಲಿಲ್ಲ. ವೇದಿಕೆಯ ಮೇಲೆ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲಾಗುತ್ತಿತ್ತು. ಮೇಳದಲ್ಲಿ ಅವಕಾಶ ಇಲ್ಲದೆ ಹೋದರೆ ಬದುಕೇ ಇಲ್ಲವೆಂಬ ಒತ್ತಡದಲ್ಲಿ ಕಲಾವಿದರು ಇರುತ್ತಿದ್ದರು ಎಂದಿದ್ದರು. ಇದೀಗ ಈ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಕ್ಷಮೆ ಕೇಳಿದ್ದಾರೆ.

ನೋಡಿರಿ

