ಹಸೀನಾನನ್ನ ಬಾಂಗ್ಲಾಕ್ಕೆ ಒಪ್ಪಿಸುತ್ತಾ ಭಾರತ? ಗಲ್ಲು ಶಿಕ್ಷೆಯಾದ್ರೂ ಸೇಫ್ ಆದ್ರಾ?
ಮತ್ತಷ್ಟು ಹಳಸುತ್ತಾ ದೇಶಗಳ ಸಂಬಂಧ?

ಹಸೀನಾನನ್ನ ಬಾಂಗ್ಲಾಕ್ಕೆ ಒಪ್ಪಿಸುತ್ತಾ ಭಾರತ?  ಗಲ್ಲು ಶಿಕ್ಷೆಯಾದ್ರೂ ಸೇಫ್ ಆದ್ರಾ?ಮತ್ತಷ್ಟು ಹಳಸುತ್ತಾ ದೇಶಗಳ ಸಂಬಂಧ?

ಕಳೆದ ವರ್ಷ ಬಾಂಗ್ಲಾದೇಶದಲ್ಲಿ  ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ದಂಗೆ ಎದ್ದಿದ್ದರು.. ಈ ಪ್ರತಿಭಟನೆಯಲ್ಲಿ ಸಾಕಷ್ಟು ಜನ ಪ್ರತಿಭಟನಾಕಾರರು ಪ್ರಾಣ ಕಳೆದುಕೊಂಡ್ರೆ, ಶೇಖ್ ಹಸೀನಾ ಸರ್ಕಾರ ಬಿದ್ದು ಹೋಯ್ತು.. ನಂತ್ರ ಹಸೀನಾ ರಾತ್ರೋರಾತ್ರಿ ಭಾರತವನ್ನ ಸೇರಿದ್ರು, ಈಗ ಭಾರತದಲ್ಲೇ ಆಶ್ರಯ ಪಡೆಯುತ್ತಿದ್ದಾರೆ.  ಆದ್ರೆ ಭಾರತಕ್ಕೆ ಒಂದು ದೊಡ್ಡ ಸಂಕಟ ಎದುರಾಗಿದೆ. ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾಗೆ ದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಸೋಮವಾರ ಗಲ್ಲುಶಿಕ್ಷೆ ವಿಧಿಸಿದೆ. ಪ್ರತಿಭಟನೆ ಹತ್ತಿಕ್ಕಲು ಕಠಿಣ ಕ್ರಮದ ಆದೇಶ, ಸಾವಿರಾರು ಜನರ ಮಾರಣಹೋಮ ಸೇರಿದಂತೆ ಮಾನವ ಹಕ್ಕು ಉಲ್ಲಂಘನೆ ಪ್ರಕರಣ ಸಂಬಂಧ ಈ ಗಲ್ಲು ಶಿಕ್ಷೆ ನೀಡಲಾಗಿದೆ. ಒಂದು ವೇಳೆ ಹಸೀನಾ ಬಾಂಗ್ಲಾದಲ್ಲೇ ಇದಿದ್ದರೆ ಜೈಲು ಶಿಕ್ಷೆ ಅನುಭವಿಸುತ್ತಿದ್ದರು. ಮರಣದಂಡನೆ ಶಿಕ್ಷೆಗೆ ಒಳಗಾಗುತ್ತಿದ್ದರು. ಆದ್ರೆ ಈ ಇವರು ಭಾರತದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇವರನ್ನ ಬಾಂಗ್ಲಾ ಅಷ್ಟು ಸುಲಭವಾಗಿ ಗಲ್ಲು ಶಿಕ್ಷೆಗೆ ಗುರಿ ಮಾಡೋಕೆ ಆಗಲ್ಲ. ಯಾಕಂದ್ರೆ ಇವರನ್ನ ಭಾರತದಿಂದ ಕಳುಹಿಸಿದ್ರೆ ಮಾತ್ರ ಅವರಿಗೆ ಶಿಕ್ಷೆ ಆಗುತ್ತೆ.. ಹೀಗಾಗಿ ಭಾರತಕ್ಕೆ ಈ ತೀರ್ಪು ದೊಡ್ಡ ತಲೆನೋವು ಆಗಿದೆ. ಕಳುಹಿಸಿಲ್ಲ ಅಂದ್ರೆ ಈಗಾಗಲೇ ಹಳಸಿ ಹೋಗಿರೋ ಭಾರತ ಮತ್ತು ಬಾಂಗ್ಲಾ ಸಂಬಂಧ ಮತ್ತಷ್ಟು ಹಳಸಿ ಹೋಗುತ್ತೆ.. ಹೀಗಾಗಿ ಭಾರತದ ಮುಂದಿನ ನಡೆ  ಬಗ್ಗೆ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ವಿಸ್ತರಣೆಯಿಂದ ತುಮಕೂರು ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ- ಸಚಿವ ಡಾ. ಜಿ.ಪರಮೇಶ್ವರ್‌ 

ಈಗಾಗಲೇ ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯವು ಭಾರತಕ್ಕೆ ಪತ್ರ ಬರೆದು, ಹಸೀನಾ ಅವರನ್ನು ಹಸ್ತಾಂತರಿಸುವಂತೆ ಆಗ್ರಹಿಸಿದೆ. ಉಭಯ ದೇಶಗಳ ನಡುವಿನ ಹಸ್ತಾಂತರ ಒಪ್ಪಂದದ ಕಾಯಿದೆ ಅನುಸಾರ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದು ಪತ್ರದಲ್ಲಿ ಬಾಂಗ್ಲಾಸರಕಾರ ಹೇಳಿದೆ. ಭಾರತ ಕೂಡ ಬಾಂಗ್ಲಾದೇಶದ ಜನರ ಉತ್ತಮ ಹಿತಾಸಕ್ತಿಗಳಿಗೆ ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆದ್ರೆ ಎಲ್ಲೂ ಕೂಡ ಭಾರತ ನಾವು ಶೇಖ್ ಹಸೀನಾ ಅವರನ್ನ ಕಳುಹಿಸಿ ಕೊಡುತ್ತೇವೆ ಅಂತ ಸ್ಪಷ್ಟ ಉತ್ತರ ನೀಡಿಲ್ಲ.   ಕಳೆದ ಡಿಸೆಂಬರ್‌ನಿಂದಲೂ ಬಾಂಗ್ಲಾದೇಶ ಈ ಮನವಿಯನ್ನು ಮಾಡುತ್ತಿದ್ದರು ಸಹ ಭಾರತ ಈವರೆಗೂ ಈ ಮನವಿಗೆ ಸ್ಪಂದಿಸಿಲ್ಲ. ಹಾಗೇ ಭಾರತ ಈಗಲೂ ಬಾಂಗ್ಲಾದ ಆಂತರಿಕ ವಿಷಯದಲ್ಲಿ ಯಾವುದೇ ನಿಲುವನ್ನು ಕಾಯ್ದುಕೊಂಡಿಲ್ಲ.

  ಭಾರತ ಗಡಿಪಾರು ಮಾಡದಿದ್ದರೆ ಏನಾಗುತ್ತದೆ?

ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಇದನ್ನು “ಅನುಬಂಧದ ವಿರುದ್ಧದ ಕೃತ್ಯ” ಎಂದು ಕರೆದಿದ್ದು, ಇದು ಎರಡು ದೇಶಗಳ ನಡುವಿನ ಸಹಕಾರವನ್ನು ಹೆಚ್ಚು ಒತ್ತಡಕ್ಕೆ ಒಳಪಡಿಸಬಹುದು. ಉದಾಹರಣೆಗೆ, ವಾಣಿಜ್ಯ, ನೀರು ಹಂಚಿಕೆ  ಮತ್ತು ಗಡಿ ಭದ್ರತೆಯಂತಹ ವಿಷಯಗಳಲ್ಲಿ ತೊಡಾಕುಗಳು ಸೃಷ್ಟಿಯಾಗಬಹುದು. ಬಾಂಗ್ಲಾದೇಶ ಇದೇ ಸಂದರ್ಭದಲ್ಲಿ ಪಾಕಿಸ್ಥಾನದೊಂದಿಗಿನ ಸಂಬಂಧಗಳನ್ನು ಬಲಪಡಿಸುತ್ತಿದ್ದು, ಇದು ಭಾರತದ ರಣನೈತಿಕ ಹಿತಾಸಕ್ತಿಗಳನ್ನು  ಚುಚ್ಚುವಂತೆ ಮಾಡಬಹುದು. ಭಾರತ ಬಾಂಗ್ಲಾದೇಶದೊಂದಿಗಿನ ಸಹಕಾರವನ್ನು ಕಳೆದುಕೊಂಡ್ರೆ  ತುಂಬಾ ಹಾನಿಯಾಗುತ್ತೆ ಅಂತ ತಜ್ಞರು ಎಚ್ಚರಿಕೆ ನೀಡಿದ್ದಾರೆೆ.

ಇನ್ನು, ಬಾಂಗ್ಲಾದೇಶ ಹಾಗೂ ಭಾರತದ ನಡುವೆ 2013ರಲ್ಲಿ ಗಡಿಪಾರು ಒಪ್ಪಂದವೊಂದು ಇದೆ. ಈ ಒಪ್ಪಂದದ ಪ್ರಕಾರ, ರಾಜಕೀಯ ಕಾರಣಗಳಿಗಾಗಿ ನೀಡುವ ಶಿಕ್ಷೆಗಳಿಗೆ ಗಡಿಪಾರು ನಿರಾಕರಿಸಬಹುದು. ಹತ್ಯೆಯಂತಹ ಪ್ರಕರಣಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಬಾಂಗ್ಲಾದೇಶ ವಾದಿಸಬಹುದು. ಆದರೆ, ಆರೋಪಗಳು ನ್ಯಾಯದ ಹಿತಾಸಕ್ತಿಗಾಗಿ ಮಾಡಿಲ್ಲ ಎಂದು ಸಾಬೀತುಪಡಿಸಿದರೆ ಗಡಿಪಾರು ನಿರಾಕರಿಸಬಹುದು ಎಂದು ಒಪ್ಪಂದದ 8ನೇ ವಿಧಿ ಹೇಳುತ್ತದೆ. ಹೀಗಾಗಿ, ಹಸೀನಾ ಅವರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಬಹಳ ಸಂಕೀರ್ಣ ಮತ್ತು ಸುದೀರ್ಘವಾಗಿರುತ್ತದೆ.  ಇನ್ನು ಹಸೀನಾ ಅವರು ಭಾರತದ ಸುಪ್ರೀಂ ಕೋರ್ಟ್‌ಗೆ  Article 21 – ಜೀವನ ಹಕ್ಕು  ಅರ್ಜಿ ಸಲ್ಲಿಸಿ ರಕ್ಷಣೆ ಕೋರಬಹುದು  ಅಥವಾ ಬಾಂಗ್ಲಾದೇಶ ಸುಪ್ರೀಂ ಕೋರ್ಟ್ ಮೂಲಕ ಆಪೀಲ್ ಮಾಡಬಹುದು..  ಆದರೆ ಇದಕ್ಕೆ ಇವರ ಉಪಸ್ಥಿತಿ ಅಗತ್ಯ.

ಇನ್ನು, ಹಸೀನಾ ವಿರುದ್ದ ಬಾಂಗ್ಲಾದೇಶ ಹೊರಡಿಸಿರುವ ತೀರ್ಪು ಭಾರತಕ್ಕೆ ಮುಳ್ಳಾಗಿದ್ದು, ಭಾರತ ಹೇಗೆ ಈ ಪ್ರಕರಣವನ್ನು ನಿಭಾಯಿಸುತ್ತದೆ ಜೊತೆಗೆ ಬಾಂಗ್ಲಾದೊಂದಿಗೆ ಈಗಾಗಲೇ ಹದಗೆಟ್ಟಿರುವ ಸಂಬಂಧವನ್ನು ಮತ್ತೆ ಪುನಶ್ಚೇತನಗೊಳಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಇವೆಲ್ಲದರ ಜೊತೆಗೆ ಹಸೀನಾರ ವಿಷಯದಲ್ಲಿ ಭಾರತದ ಮುಂದಿನ ಹೆಜ್ಜೆ ಏನು ಎಂಬುದು ಕಾದು ನೋಡಬೇಕಿದೆ.

Kishor KV