ಮಾರ್ಕೆಟ್‌ಗೆ ಕಾಲಿಟ್ಟ ನಕಲಿ ನಂದಿನಿ ತುಪ್ಪ! – ತಮಿಳುನಾಡಿನಲ್ಲಿ ಕಲಬೆರಕೆ ಮಾಡಿ ಕರ್ನಾಟಕದಲ್ಲಿ ಮಾರಾಟ!

ಮಾರ್ಕೆಟ್‌ಗೆ ಕಾಲಿಟ್ಟ ನಕಲಿ ನಂದಿನಿ ತುಪ್ಪ! – ತಮಿಳುನಾಡಿನಲ್ಲಿ ಕಲಬೆರಕೆ ಮಾಡಿ ಕರ್ನಾಟಕದಲ್ಲಿ ಮಾರಾಟ!

ನಾವು ಇಂದು ಸೇವಿಸುವ ಆಹಾರಗಳ ಪೈಕಿ ಬಹುತೇಕ ವಸ್ತುಗಳು ಕಲಬೆರಕೆಯಿಂದ ಕೂಡಿರುತ್ತವೆ. ಹಾಲು, ಮೊಸರಿನಿಂದ ಹಿಡಿದು ದಿನೋಪಯೋಗಿ ವಸ್ತುಗಳವರೆಗೆ ಕಲಬೆರಕೆ ಎಂಬುದು ಮಾಮೂಲು ಎಂಬಂತಾಗಿದೆ. ಇದರ ಜೊತೆಗೆ ನಕಲಿ ಬ್ರ್ಯಾಂಡ್​ ಗಳ ಹಾವಳಿಯೂ ಹೆಚ್ಚಿದ್ದು, ಯಾವುದು ಅಸಲಿ ಮತ್ತು ಯಾವುದು ನಕಲಿ ಎಂದು ಪತ್ತೆ ಮಾಡುವುದೇ ಗ್ರಾಹಕರಿಗೆ ತಲೆನೋವಾಗಿ ಮಾರ್ಪಟ್ಟಿದೆ. ಇದೀಗ ನಕಲಿ ನಂದಿನಿ ತುಪ್ಪ ಮಾರಾಟ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನ ಅರೆಸ್ಟ್‌ ಮಾಡಲಾಗಿದೆ.

ಇದನ್ನೂ ಓದಿ: ಬವುಮಾಗೆ ಕುಬ್ಜ ಎಂದು ಅವಮಾನ – ಬ್ಯಾನ್ ಆಗ್ತಾರಾ ಬುಮ್ರಾ?

ಕೆಎಂಎಫ್ ಡಿಸ್ಟ್ರಿಬ್ಯೂಟರ್ ಮಹೇಂದ್ರ ಎಂಬುವವರು ಒರಿಜಿನಲ್ ತುಪ್ಪ ಖರೀದಿಸಿ, ಬಳಿಕ ತುಪ್ಪವನ್ನ ತುಪ್ಪ ತಮಿಳುನಾಡಿಗೆ ಕಳುಹಿಸುತ್ತಿದ್ದರು. ಅದನ್ನ ತಮಿಳುನಾಡಿನಲ್ಲಿ ಕಲಬೆರಕೆ ಮಾಡುತ್ತಿದ್ದರು. ಒಂದು ಲೀಟರ್ ತುಪ್ಪಕ್ಕೆ 4 ಲೀಟರ್ ನಕಲಿ ತುಪ್ಪ ಬೆರೆಸುತ್ತಿದ್ದರು. ಫಾರ್ಮ್ ಆಯಿಲ್, ತೆಂಗಿನ ಎಣ್ಣೆ ಮತ್ತು ಡಾಲ್ಡಾ ಬೆರೆಸುತ್ತಿದ್ದರು. ಅದನ್ನ ಮತ್ತೆ ಕರ್ನಾಟಕಕ್ಕೆ ತಂದು ಮಾರಾಟ ಮಾಡುತ್ತಿದ್ದರು. ಇದೀಗ ಸಿಸಿಬಿ ಪೊಲೀಸರು ಮತ್ತು ಕೆಎಂಎಫ್ ಜಾಗೃತ ದಳ ಜಂಟಿ ಕಾರ್ಯಾಚರಣೆ ನಡೆಸಿ ಬೃಹತ್ ಜಾಲ ಪತ್ತೆ ಮಾಡಿದ್ದು, ಕೆಎಂಎಫ್ ಡಿಸ್ಟ್ರಿಬ್ಯೂಟರ್ ಮಹೇಂದ್ರ, ಪುತ್ರ ದೀಪಕ್, ಸಪ್ಲೈರ್‌ಗಳಾದ ಮುನಿರಾಜು ಹಾಗೂ ಅಭಿ ಅರಸು ಎಂಬ ನಾಲ್ವರ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಸೇರಿಕೊಂಡು ಬೆಂಗಳೂರಿನಲ್ಲಿದ್ದ ನಂದಿನಿ ಪಾರ್ಲರ್‌ಗಳಿಗೆ ನಕಲಿ ತುಪ್ಪವನ್ನು ಸರಬರಾಜು ಮಾಡುತ್ತಿದ್ದರು. ಹೊರ ರಾಜ್ಯದಲ್ಲಿ ಕಲಬೆರಕೆ ತುಪ್ಪವನ್ನು ತಯಾರಿಸಿ, ಪ್ಯಾಕೆಟ್ ಹಾಗೂ ಪ್ಲ್ಯಾಸ್ಟಿಕ್‌ ಬಾಟಲ್‌ನಲ್ಲಿ ಸಪ್ಲೈ ಮಾಡುತ್ತಿದ್ದರು.

ಓರ್ವ ತಯಾರಿಸಿದ ತುಪ್ಪವನ್ನು ತಮಿಳುನಾಡಿನಿಂದ ಸಪ್ಲೈ ಮಾಡಿದರೆ, ಇನ್ನೋರ್ವ ಅದನ್ನು ಬೆಂಗಳೂರಿಗೆ ಕಳುಹಿಸುತ್ತಿದ್ದ. ಈ ಜಾಲದಲ್ಲಿ ಕೆಎಂಎಫ್ ಡಿಸ್ಟ್ರಿಬ್ಯೂಟರ್ ಹಾಗೂ ಅವರ ಪುತ್ರ ಕೂಡ ಭಾಗಿಯಾಗಿರುವುದು ತಿಳಿದುಬಂದಿದೆ. ಸದ್ಯ ಪೊಲೀಸರು ನಾಲ್ವರ ಮುಖವಾಡ ಕಳಚಿ ಅರೆಸ್ಟ್ ಮಾಡಿದ್ದು, ಬರೋಬ್ಬರಿ 1.50 ಕೋಟಿ ರೂ. ಮೌಲ್ಯದ 8 ಸಾವಿರ ಲೀಟರ್ ನಕಲಿ ತುಪ್ಪವನ್ನು ಜಪ್ತಿ ಮಾಡಿದ್ದಾರೆ.

Shwetha M