ಗಿಡ-ಮರಗಳನ್ನೇ ಮಕ್ಕಳಂತೆ ಪ್ರೀತಿಸಿದ ಮಹಾತಾಯಿ ಸಾಲುಮರದ ತಿಮ್ಮಕ್ಕ – ‘ವೃಕ್ಷ ಮಾತೆ’ಯಾದ ಕಥೆಯಿದು!

ರಸ್ತೆ ಬದಿಯಲ್ಲಿ ಸಾವಿರಾರು ಗಿಡಗಳನ್ನ ನೆಟ್ಟು ಪೋಷಿಸಿದ ಮಹಾತಾಯಿ, ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ, ಸಾಲುಮರದ ತಿಮ್ಮಕ್ಕ ನಮ್ಮನ್ನ ಅಗಲಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸಾಲುಮರದ ತಿಮ್ಮಕ್ಕ ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಸಾವಿರಾರು ಗಿಡಗಳನ್ನ ನೆಟ್ಟು ಪರಿಸರಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ತಿಮ್ಮಕ್ಕ ವೃಕ್ಷಮಾತೆ ಆಗಿರೋದ್ರ ಹಿಂದೆ ರೋಚಕ ಕಥೆಯಿದೆ.
ಇದನ್ನೂ ಓದಿ: ಐಟಿಬಿಟಿ ಕಂಪನಿಗಳ ಟೆಕ್ಕಿಗಳಿಗೆ ಗುಡ್‌ನ್ಯೂಸ್! – ನಮ್ಮ ಮೆಟ್ರೋದಲ್ಲಿ ಆಫೀಸ್‌ಗೆ ಬಂದ್ರೆ ಫ್ರೀ ಪಾಸ್!
ಸಾಲುಮರದ ತಿಮ್ಮಕ್ಕ ಹಟ್ಟಿದ್ದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ. ತಂದೆ ಚಿಕ್ಕರಂಗಯ್ಯ, ತಾಯಿ ವಿಜಯಮ್ಮ. ತಿಮ್ಮಕ್ಕ ಬಡತನದ ಕುಟುಂಬದಲ್ಲಿ ಕಾರಣ ಶಾಲೆ ಮೆಟ್ಟಿಲು ಹತ್ತಲು ಸಾಧ್ಯವಾಗಿಲ್ಲ. ಹೀಗಾಗಿ ದನಕರುಗಳನ್ನ ಮೇಯಿಸುತ್ತಾ ಬಾಲ್ಯದ ದಿನಗಳನ್ನ ಕಳೆದ್ರು. ನಂತರ ತಮ್ಮ ಮನೆ ಹತ್ತಿರವಿರುವ ಕಲ್ಲು ಗಣಿಯಲ್ಲಿ ದಿನಗೂಲಿ ಕೆಲಸ ಮಾಡಲು ಆರಂಭಿಸಿದ್ರು. ಇದೇ ಹೊತ್ತಲ್ಲಿ ತಿಮ್ಮಕ್ಕ ಅವರಿಗೆ ಮದುವೆಯಾಯಿತು. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದ ಚಿಕ್ಕಯ್ಯ ಎಂಬುವವರನ್ನ 12ನೇ ವಯಸ್ಸಿಯನಲ್ಲಿ ತಿಮ್ಮಕ್ಕ ಮದುವೆಯಾದರು. ಆದ್ರೆ ಮದುವೆ ಆಗಿ ಅದೆಷ್ಟೋ ವರ್ಷಗಳಾದ್ರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಗಿಡಮರಗಳನ್ನೇ ಮಕ್ಕಳನ್ನ ಕಾಣುತ್ತಿದ್ದರು.
ಹೌದು, ತಿಮ್ಮಕ್ಕ ಮಕ್ಕಳಿಲ್ಲ ಅನ್ನೋ ಕೊರಗಿನಿಂದ ಹೊರಬರಲು, ರಸ್ತೆ ಬದಿಯಲ್ಲಿ ನೂರಾರು ಆಲದ ಸಸಿಗಳನ್ನು ನೆಡಲು ಆರಂಭಿಸಿದರು. ಕುದೂರಿನಿಂದ ಹುಲಿಕಲ್ ತನಕ ಇರುವ ರಾಜ್ಯ ಹೆದ್ದಾರಿ 94ರಲ್ಲಿ ತಿಮ್ಮಕ್ಕರವರು ಆಲದ ಸಸಿಗಳನ್ನು ನೆಟ್ಟು ನಿತ್ಯ ಅವುಗಳನ್ನ ಬೆಳೆಸಿದರು. ಇವರ ಈ ಕೆಲಸಕ್ಕೆ ಪತಿ ಚಿಕ್ಕಯ್ಯ ಕೂಡ ಕೈಜೋಡಿಸುತ್ತಾರೆ. ತಿಮ್ಮಕ್ಕ ಮತ್ತು ಅವರ ಪತಿ ಈ ಮರಗಳಿಂದ ಸಸಿಗಳನ್ನು ಕಸಿ ಮಾಡಲು ಆರಂಭಿಸಿದರು. ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ನೆರೆಯ ಕುದೂರು ಹಳ್ಳಿಯ ಬಳಿ 4 ಕಿ.ಮೀ. ಉದ್ದಳತೆಯಲ್ಲಿ ಸಸಿಗಳನ್ನು ನೆಟ್ಟರು. 2ನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ 20 ಸಸಿ, ಹೀಗೆ ಹಂತ ಹಂತವಾಗಿ ಗಿಡಗಳನ್ನ ನೆಡುತ್ತಾ ಬಂದ್ರು ಈ ದಂಪತಿ. ಆದ್ರೆ ತಿಮ್ಮಕ್ಕ ಅವರ ಪತಿ 1991ರಲ್ಲಿ ಮೃತಪಟ್ಟರು. ದುಃಖದಿಂದ ಹೊರಬಂದ ತಿಮ್ಮಕ್ಕ ಅವರು ಮತ್ತೆ ಮರಗಳಲ್ಲಿ ಸಾಂತ್ವನವನ್ನು ಕಂಡುಕೊಂಡರು. ಬಳಿಕ ಹೊಸ ಚೈತನ್ಯದಿಂದ ಅವುಗಳನ್ನು ಪೋಷಿಸುವುದನ್ನು ಮತ್ತೆ ಮುಂದುವರೆಸಿದರು.
ಅಂದ್ಹಾಗೆ ತಿಮ್ಮಕ್ಕ ಹಾಗೂ ಚಿಕ್ಕಯ್ಯ ಸಸಿಗಳನ್ನ ನೆಡಲು ಯಾರಿಂದಲೂ ಸಹಾಯ ಕೇಳಿಲ್ಲ. ತಮ್ಮ ಅತ್ಯಲ್ಪ ಅದಾಯವನ್ನೇ ಬಳಸಿ ಆಲದ ಸಸಿಗಳನ್ನ ನೆಟ್ಟು ಪೋಷಿಸುತ್ತಾ ಬಂದ್ರು. ಗಂಡ-ಹೆಂಡತಿ ಇಬ್ಬರೂ ಸಸಿಗಳಿಗೆ ನೀರುಣಿಸಲು ಬಿಂದಿಗೆ ಕೊಳಗಗಳಲ್ಲಿ ನಾಲ್ಕು ಕಿ.ಮೀ ವರೆಗೆ ನೀರನ್ನು ಹೊತ್ತು ಕೊಂಡೊಯ್ಯುತ್ತಿದ್ದರು. ಸಸಿಗಳನ್ನು ಮೇವಿನ ಜಾನುವಾರುಗಳ ಕಾಟದಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸುತ್ತಿದ್ದರು. ನೀರಿನ ಅಭಾವ ಉಂಟಾಗಿ ಗಿಡಗಳಿಗೆ ತೊಂದರೆಯಾಗುತ್ತದೆ ಎಂದು ಅನಿಸಿದಾಗ, ಮತ್ತೆ ಹೆಚ್ಚಾಗಿ ಮುಂಗಾರು ಮಳೆಯ ಕಾಲದಲ್ಲಿ ಗಿಡವನ್ನು ನೆಡಲು ಶುರು ಮಾಡಿದರು. ಸಾಲು ಮರದ ತಿಮ್ಮಕ್ಕ ಈ ರೀತಿ ತಮ್ಮ ಸ್ವಂತ ಖರ್ಚಿನಲ್ಲಿ 8000ಕ್ಕೂ ಅಧಿಕ ಸಸಿಗಳನ್ನು ನೆಟ್ಟಿದ್ದಾರೆ. ಇಂದಿಗೆ ಅವುಗಳ ಮೌಲ್ಯವು ಸುಮಾರು 20 ಲಕ್ಷಕ್ಕೂ ಅಧಿಕ ರೂಪಾಯಿಗಳೆಂದು ಅಂದಾಜು ಮಾಡಲಾಗಿದೆ. ಮರಗಳ ನಿರ್ವಹಣೆಯನ್ನು ಈಗ ಕರ್ನಾಟಕ ಸರ್ಕಾರವು ವಹಿಸಿಕೊಂಡಿದೆ.
ತಿಮ್ಮಕ್ಕ ಅವರಿಗೆ ಸಂದ ಪ್ರತಿಷ್ಠಿತ ಗೌರವ
- ಪದ್ಮಶ್ರೀ ಪ್ರಶಸ್ತಿ – 2019
- ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ – 2010
- ರಾಷ್ಟ್ರೀಯ ನಾಗರಿಕ ಪ್ರಶಸ್ತಿ – 1995
- ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿಗಳು – 1997
- ವೀರಚಕ್ರ ಪ್ರಶಸ್ತಿ – 1997
- ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೌರವ ಪ್ರಮಾಣಪತ್ರ
- ಬೆಂಗಳೂರಿನ ಭಾರತೀಯ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ ಸಂಸ್ಥೆಯಿಂದ ಮೆಚ್ಚುಗೆಯ ಪ್ರಮಾಣಪತ್ರ.
- ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ – 2000
- ಗಾಡ್ಫ್ರೇ ಫಿಲಿಪ್ಸ್ ಶೌರ್ಯ ಪ್ರಶಸ್ತಿ – 2006
- ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ
- ಹೂವಿನಹೊಳೆ ಪ್ರತಿಷ್ಠಾನದಿಂದ ವಿಶ್ವಾತ್ಮ ಪ್ರಶಸ್ತಿ -2015
- ಬಿಬಿಸಿಯ 100 ಮಹಿಳೆಯರ ಪಟ್ಟಯಲ್ಲಿ ಸ್ಥಾನ – 2016

ನೋಡಿರಿ

