ಟೆಸ್ಟ್ ಕ್ರಿಕೆಟ್ ನಲ್ಲಿ KL 2.O – ಓಪನರ್ ಸ್ಲಾಟ್ ಪ್ಲಸ್ ಆಯ್ತಾ?
ರಾಹುಲ್ ಸಕ್ಸಸ್ ಸೀಕ್ರೆಟ್ ರಿವೀಲ್

ಟೆಸ್ಟ್ ಕ್ರಿಕೆಟ್ ನಲ್ಲಿ KL 2.O – ಓಪನರ್ ಸ್ಲಾಟ್ ಪ್ಲಸ್ ಆಯ್ತಾ?ರಾಹುಲ್ ಸಕ್ಸಸ್ ಸೀಕ್ರೆಟ್ ರಿವೀಲ್

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧವಾಗ್ತಿರೋ ಟೀಂ ಇಂಡಿಯಾ ಎರಡಕ್ಕೆ ಎರಡೂ ಪಂದ್ಯಗಳನ್ನೂ ಗೆದ್ದು ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿಯೋ ಟಾರ್ಗೆಟ್​ನಲ್ಲಿದೆ. ಹೀಗಾಗ್ಬೇಕು ಅಂದ್ರೆ ತಂಡದ ಪ್ರತಿಯೊಬ್ಬರೂ ಬೆಸ್ಟ್ ಪರ್ಫಾಮೆನ್ಸ್ ಕೊಡ್ಲೇಬೇಕು. ಅದ್ರಲ್ಲೂ ಈ ಸರಣಿಯಲ್ಲಿ ಎಲ್ಲರ ಕಣ್ಣು ಇರೋದು ಕೆಎಲ್ ರಾಹುಲ್ ಮೇಲೆ. ಕಳೆದ ಆರು ತಿಂಗಳಿಂದ ರಾಹುಲ್ 2.O ಸ್ಟಾರ್ಟ್ ಆಗಿದ್ದು ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಡ್ತಿದ್ದಾರೆ. ಅದಕ್ಕೆ ಕಾರಣ ಸ್ಲಾಟ್ ಫಿಕ್ಸ್ ಇರೋದು.

ಇದನ್ನೂ ಓದಿ : RCB ಫ್ಯಾನ್ಸ್‌ಗೆ ಬಿಗ್ ಶಾಕ್ – ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ ನಡೆಯೋದು ಡೌಟ್

ಟೀಂ ಇಂಡಿಯಾದಲ್ಲಿ ವರ್ಷದ ಹಿಂದೆ ಕೆಎಲ್ ರಾಹುಲ್ ಅವಕಾಶ ಪಡೆಯೋದೇ ದೊಡ್ಡದಾಗಿತ್ತು. ಸೆಲೆಕ್ಟ್ ಆದ್ರೂ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಸಿಗೋದು ಇನ್ನೂ ದೊಡ್ಡ ಸವಾಲಾಗಿತ್ತು. ಆದ್ರೆ ಈಗ ಟೆಸ್ಟ್ ಟೀಮ್​ನಲ್ಲಿ ಖಾಯಂ ಓಪನರ್ ಆಗಿದ್ದಾರೆ. ಯಶಸ್ವಿ ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸೋ ರಾಹುಲ್ ಬಿಗ್ ಇನ್ನಿಂಗ್ಸ್​ಗಳ ಮೂಲಕವೇ ತಮ್ಮ ಸಾಮರ್ಥ್ಯ ಏನು ಅನ್ನೋದನ್ನ ಪ್ರೂವ್ ಮಾಡ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ರಾಹುಲ್ ಇಮೇಜ್ ಕಂಪ್ಲೀಟ್ ಚೇಂಜ್ ಆಗಿದೆ.

11 ವರ್ಷಗಳ ಟೆಸ್ಟ್ ಜೀವನ.. ಕಳೆದ 6 ತಿಂಗಳಲ್ಲಿ ಅದ್ಭುತ ಪ್ರದರ್ಶನ!

ಕಳೆದ 11 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ರಾಹುಲ್ ಸಾಕಷ್ಟು ಏರಿಳಿತಗಳನ್ನ ಕಂಡಿದ್ದಾರೆ. ನಂ. 3, 4 ಮತ್ತು 6 ಹೀಗೆ ಬೇರೆ ಬೇರೆ ಸ್ಲಾಟ್​ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಕಳೆದ ವರ್ಷದ ನ್ಯೂಜಿಲೆಂಡ್ ವಿರುದ್ಧದ ಒಂದು ಟೆಸ್ಟ್ ಪಂದ್ಯದ ನಂತರ ಅವರನ್ನು ಕೈಬಿಡಲಾಯಿತು. ಸರ್ಫರಾಜ್ ಖಾನ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಯ್ಕೆಯಾಗಿದ್ರು. ಬಟ್ ನೆಕ್ಸ್​ಟ್ ಆಸ್ಟ್ರೇಲಿಯಾ ಸಿರೀಸ್​ನಲ್ಲಿ ಬಿಗ್ ಇನ್ನಿಂಗ್ಸ್ ಬಂದಿರಲಿಲ್ಲ. ಆದರೆ ಕಳೆದ ಜೂನ್, ಜುಲೈ ಹಾಗೇ ಆಗಸ್ಟ್​ನಲ್ಲಿ ನಡೆದ ಇಂಗ್ಲೆಂಡ್ ಪ್ರವಾಸದಿಂದ ಈಚೆಗೆ ರಾಹುಲ್ 2.0 ಸ್ಟಾರ್ಟ್ ಆಗಿದೆ. ರೋಹಿತ್ ಶರ್ಮಾರ ನಿವೃತ್ತಿ ಬಳಿಕ ಕೆಎಲ್ ರಾಹುಲ್​ಗೆ ಟೆಸ್ಟ್ ತಂಡದ ಓಪನರ್ ಸ್ಲಾಟ್​ ಫಿಕ್ಸ್ ಆಗಿದೆ. ಹಾಗೇ ಅವ್ರ ಬ್ಯಾಟಿಂಗ್​ನಲ್ಲಿ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಬರ್ತಿದೆ. ಆಂಡರ್ಸನ್-ತೆಂಡೂಲ್ಕರ್ ಸರಣಿಯಲ್ಲಿ ಐದು ಟೆಸ್ಟ್‌ಗಳಲ್ಲಿ 532 ರನ್‌ಗಳನ್ನ ಬಾರಿಸಿದ್ರು. ಹಾಗೇ ವೆಸ್ಟ್ ಇಂಡೀಸ್ ವಿರುದ್ಧ ಶತಕ ಸಿಡಿಸಿ ಮಿಂಚಿದ್ರು. ಅಷ್ಟಕ್ಕೂ ರಾಹುಲ್ ರ ಈ ಸಕ್ಸಸ್ ಗೆ ಕಾರಣ ಅವ್ರ ಸಿಂಪ್ಲಿಸಿಟಿ ಌಂಡ್ ಡೆಡಿಕೇಷನ್.

ಭಾರತ ಎ ತಂಡದ ಪರ ಆಡೋಕೆ ರಾಹುಲ್ ಸದಾ ಸಿದ್ಧ!

ಯಾವುದೇ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಎ ತಂಡಗಳ ನಡುವೆ ಅನಧಿಕೃತ ಪಂದ್ಯಗಳು ನಡೆಯುತ್ತೆ. ಬಟ್ ಈ ಪಂದ್ಯಗಳಲ್ಲಿ ಬಿಗ್ ಸ್ಟಾರ್ಸ್ ಆಡೋದು ಕಡಿಮೆ. ಆದ್ರೆ ರಾಹುಲ್ ಮಾತ್ರ ತಮ್ಮನ್ನ ಯಾವತ್ತೂ ಸೂಪರ್ ಸ್ಟಾರ್ ಅಂತಾ ಪೊಟ್ರೇ ಮಾಡಿಕೊಳ್ಳೋದೇ ಇಲ್ಲ. ಅಧಿಕೃತ ಪಂದ್ಯಗಳ ಆರಂಭಕ್ಕೂ ಮುನ್ನ ಎ ತಂಡದ ಪರ ಆಡೋದಾಗಿ ತಾವೇ ಬಿಸಿಸಿಐ ಬಳಿ ಕೇಳಿ ತಂಡದಲ್ಲಿ ಸ್ಥಾನ ಪಡೆದಿದ್ದಿದೆ. ಌಂಡ್ ಮೈದಾನಕ್ಕಿಳಿದು ಆಡ್ತಾರೆ.  ಆಸ್ಟ್ರೇಲಿಯಾ, ಇಂಗ್ಲೆಂಡ್ ಅಥವಾ ಭಾರತದ ತವರಿನಲ್ಲಿ ಭಾರತ ಎ ಪಂದ್ಯಗಳನ್ನು ಆಡೋದನ್ನ ಮಿಸ್ ಮಾಡಿಕೊಳ್ಳಲ್ಲ. ಇನ್ನು ರಾಹುಲ್ ಅವ್ರ ಮೇನ್ ಸ್ಟ್ರೆಂಥ್ ಏನಂದ್ರೆ ವಿದೇಶಿ ಪಿಚ್​ಗಳಲ್ಲಿ ಅದ್ಭುತ ರೆಕಾರ್ಡ್ಸ್ ಹೊಂದಿದ್ದಾರೆ. ಅವ್ರ ಟೆಸ್ಟ್ ವೃತ್ತಿ ಜೀವನದಲ್ಲಿ ಟೋಟಲ್ಲಾಗಿ 11 ಶತಕ ಬಾರಿಸಿದ್ದಾರೆ. ಇದ್ರಲ್ಲಿ ತವರಿನಲ್ಲಿ ಕೇವಲ ಎರಡು ಶತಕಗಳನ್ನು ಮಾತ್ರ ಗಳಿಸಿದ್ದಾರೆ. ವಿದೇಶಗಳಲ್ಲಿ ಒಂಬತ್ತು ಶತಕಗಳು ಬಂದಿವೆ. ಇನ್ನು ವಿಂಡೀಸ್ ವಿರುದ್ಧದ ಸರಣಿಯಲ್ಲಿ ಇತ್ತೀಚೆಗೆ ಒಂಬತ್ತು ವರ್ಷಗಳ ನಂತರ ತವರಿನಲ್ಲಿ ಶತಕ ಗಳಿಸಿದ್ರು.  ಬರೋಬ್ಬರಿ 3,211 ದಿನಗಳ ನಂತ್ರ. ಇನ್ನು ತವರಿನಲ್ಲಿ 21 ಟೆಸ್ಟ್‌ ಪಂದ್ಯಗಳ 33 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಹಾಗೇ  10 ಅರ್ಧಶತಕಗಳು ಮತ್ತು ಎರಡು ಶತಕಗಳು ಸೇರಿದಂತೆ 41.63 ಸರಾಸರಿಯಲ್ಲಿ 1249 ರನ್‌ಗಳನ್ನು ಗಳಿಸಿದ್ದಾರೆ. ಇನ್ನು ಕಳೆದ ಒಂದು ವರ್ಷದಿಂದ  ಟೆಸ್ಟ್‌ನಲ್ಲಿ ಮಾತ್ರವಲ್ಲದೆ ಎಲ್ಲಾ ಸ್ವರೂಪಗಳಲ್ಲೂ ಬೆಸ್ಟ್ ಪರ್ಫಾಮೆನ್ಸ್ ಬರ್ತಿದೆ. ಕಳೆದ 12 ತಿಂಗಳುಗಳಲ್ಲಿ, ಅವರ ಟೆಸ್ಟ್ ಸರಾಸರಿ 49.92 ಕ್ಕೆ ಏರಿದೆ, ಏಕದಿನ ಪಂದ್ಯಗಳಲ್ಲಿ 48 ಮತ್ತು ಐಪಿಎಲ್‌ನಲ್ಲಿ 53 ಇದೆ. ಹೀಗಾಗಿ 2025ರಿಂದ ರಾಹುಲ್ ಅವ್ರ 2.0 ಸ್ಟಾರ್ಟ್ ಆಗಿದೆ ಎಂದೇ ಬಣ್ಣಿಸಲಾಗ್ತಿದೆ.

ಟೀಂ ಇಂಡಿಯಾ ಪಾಲಿಗೆ ಕೂಲ್ & ಕ್ಲಾಸಿಕ್ ಪ್ಲೇಯರ್ ಆಗಿರೋ ರಾಹುಲ್ ಯಾವುದೇ ಆರ್ಡರ್​ನಲ್ಲೂ ಲೀಲಾಜಾಲವಾಗಿ ಬ್ಯಾಟ್ ಬೀಸೋ ಶಕ್ತಿ ಹೊಂದಿದ್ದಾರೆ. ಅದ್ರಲ್ಲೂ ಟೆಸ್ಟ್ ಅಂತಾ ಬಂದಾಗ ಅವ್ರ ತಾಳ್ಮೆಯೇ ತಂಡಕ್ಕೆ ಪ್ಲಸ್ ಆಗ್ತಿದೆ. ಹೀಗಾಗಿ ಈ ಬಾರಿ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ರಾಹುಲ್ ಕಡೆಯಿಂದ ಬಿಗ್ ಇನ್ನಿಂಗ್ಸ್ ನಿರೀಕ್ಷೆ ಮಾಡ್ಲಾಗಿದೆ.

Shantha Kumari