ಅಬ್ಬಬ್ಬಾ.. ಈ ಸೇಫ್ಟಿ ಪಿನ್‌ ಬೆಲೆ 69,000 ರೂ.! – ಯಾಕಿಷ್ಟು ದುಬಾರಿ?

ಅಬ್ಬಬ್ಬಾ.. ಈ ಸೇಫ್ಟಿ ಪಿನ್‌ ಬೆಲೆ 69,000 ರೂ.! – ಯಾಕಿಷ್ಟು ದುಬಾರಿ?

ಮಹಿಳೆಯರು ಹೆಚ್ಚಾಗಿ ಸೇಫ್ಟಿ ಪಿನ್‌ ಬಳಸುತ್ತಾರೆ. ಸೀರೆ ಉಡಲು, ಶಾಲು ಬೀಳದಂತೆ ಸೆಟ್‌ ಮಾಡಲು ಹೀಗೆ ನಾನಾ ಕಾರಣಕ್ಕೆ ಬಳಸುತ್ತಾರೆ. ಸೇಫ್ಟಿಗೆ ಇರಲಿ ಅಂತಾ ತಮ್ಮ ಬ್ಯಾಗ್‌ನಲ್ಲೂ ಇಟ್ಟುಕೊಳ್ತಾರೆ. ಹೀಗಾಗಿ ಶಾಪಿಂಗ್‌ ಹೋದಾಗ ಇದನ್ನ ಕೂಡ ಕೊಳ್ಳುತ್ತಾರೆ. ಅಂಗಡಿಗಳಲ್ಲಿ ಒಂದು ಡೆಸನ್‌ ಗೆ 10 ರೂಪಾಯಿ ಇರುತ್ತೆ. ಇನ್ನು ಮಾಲ್‌ಗಳಲ್ಲಿ ಹೆಚ್ಚಂದ್ರೆ 100 ರೂ ಇರ್ಬೋದು. ಆದ್ರೆ ಇದೊಂದು ಸೇಫ್ಟಿ ಪಿನ್‌ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರೆಂಟಿ. ಇದ್ರ ಬೆಲೆ ಬರೋಬ್ಬರಿ 69,000 ರೂ.!

ಇದನ್ನೂ ಓದಿ:ಈ ಹೊತ್ತು ಬಿಸಿಲಿನಲ್ಲಿ ನಿಂತ್ರೆ ಮಿಟಮಿನ್‌ D ಸಮಸ್ಯೆ ಬರೋದೆ ಇಲ್ಲ! 

ಸಾಮಾನ್ಯವಾಗಿ 10-20 ರೂ.ರವರೆಗೆ ಇರುತ್ತದೆ. ಆದರೆ ಇದೀಗ ದುಬಾರಿ ಬೆಲೆಯ ಸೇಫ್ಟಿ ಪಿನ್‌ ಮಾರುಕಟ್ಟೆಗೆ ಬಂದಿದೆ. ಅದರ ಬೆಲೆ ಕೇಳಿದರೆ ಹೌಹಾರುವುದು ಗ್ಯಾರಂಟಿ. ಪ್ರಾಡಾ ಎಂಬ ಕಂಪನಿ ತಯಾರಿಸಿದ ಒಂದು ಪಿನ್‌ನ ಬೆಲೆ ಬರೋಬ್ಬರಿ 69,000 ರೂ.! ಇಷ್ಟೊಂದು ಬೆಲೆಗೆ ಮಾರಾಟವಾಗುತ್ತಿರುವ ಈ ಸೇಫ್ಟಿ ಪಿನ್‌ ಮೇಲೆ ಚಿನ್ನ ಅಥವಾ ವಜ್ರ ಇದೆಯೇ ಎಂದು ಅನುಮಾನಿಸುವುದು ಸಹಜ. ಆದರೆ ಹಾಗೆ ಏನೂ ಇಲ್ಲ. ಈ ಸೇಫ್ಟಿ ಪಿನ್‌ ಒಂದು ಬದಿಯನ್ನ ದಾರದಿಂದ ನೇಯಲಾಗಿದೆ. ಇದರ ಬಗ್ಗೆ ಹೇಳಲು ಹೆಚ್ಚೇನೂ ಇಲ್ಲ. ಇದು ಎರಡು ಅಥವಾ ಮೂರು ಬಣ್ಣಗಳ ಸಂಯೋಜನೆಯಲ್ಲಿ ಲಭ್ಯವಿದೆ. ಇದು ಸಣ್ಣ ಸಿಗ್ನೇಚರ್ ಲೋಗೋವನ್ನ ಸಹ ಹೊಂದಿದೆ.

ಪ್ರಾಡಾ ತಯಾರಿಸಿದ ಈ ಸೇಫ್ಟಿ ಪಿನ್ ಬಗ್ಗೆ ಫ್ಯಾಷನ್ ಪ್ರಭಾವಿಯೊಬ್ಬರು ವಿಡಿಯೋ ಮಾಡಿದ್ದಾರೆ. ಅದರಲ್ಲಿ ಇದರ ಬೆಲೆ 775 ಡಾಲರ್ ಎಂದು ತಿಳಿಸಲಾಗಿದೆ. ಅಂದರೆ ನಮ್ಮ ಕರೆನ್ಸಿಗೆ ಪರಿವರ್ತಿಸಿದರೆ ಅದು ಸುಮಾರು 69,000 ರೂ. ಆಗುತ್ತದೆ. ಈಗ ಈ ಸೇಫ್ಟಿ ಪಿನ್ ಬಗ್ಗೆ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟಿಜನ್‌ಗಳು ಬೆಲೆ ಕೇಳಿ ಹೌಹಾರಿದ್ದಾರೆ.

ಈ ವಿಡಿಯೋ ನೋಡಿದ ಅನೇಕ ನೆಟಿಜನ್‌ಗಳು ಮಾಡಿರುವ ಕಾಮೆಂಟ್‌ಗಳು ಅದ್ಭುತವಾಗಿವೆ. ಈ ಸೇಫ್ಟಿ ಪಿನ್ ಅನ್ನ ಇಷ್ಟೊಂದು ದುಬಾರಿ ಮೊತ್ತ ಕೊಟ್ಟು ಯಾರು ಖರೀದಿಸುತ್ತಾರೆ? ಎಂದು ಅನೇಕರು ಕಾಮೆಂಟ್‌ ಮಾಡಿದ್ದಾರೆ. ಪ್ರಾಡಾ 1913ರಲ್ಲಿ ಮಾರಿಯೋ ಪ್ರಾಡಾ ಸ್ಥಾಪಿಸಿದ ಇಟಾಲಿಯನ್ ಐಷಾರಾಮಿ ಫ್ಯಾಷನ್ ಹೌಸ್ ಆಗಿದೆ. ಇದು ಬ್ಯಾಗ್‌ಗಳು, ಶೂಗಳು ಮತ್ತು ಫ್ಯಾಷನ್ ವಸ್ತುಗಳನ್ನ ಮಾರಾಟ ಮಾಡುತ್ತದೆ. ಇದು ಇಂಟರ್‌ನ್ಯಾಷನಲ್‌ ಬ್ರಾಂಡ್‌ ಆಗಿರುವುದರಿಂದ ಇದರ ಉತ್ಪನ್ನಗಳು ಕೂಡ ದುಬಾರಿ ಆಗಿರುತ್ತವೆ.

Shwetha M