ಆಸ್ಪತ್ರೆಗೆ ಹೋದಾತ ಹೆಣವಾದ! – ವೈದ್ಯ ಎಡವಟ್ಟಿಗೆ ಜೀವ ಕಳೆದುಕೊಂಡ ಯುವಕ!

ಆಸ್ಪತ್ರೆಗೆ ಹೋದಾತ ಹೆಣವಾದ! – ವೈದ್ಯ ಎಡವಟ್ಟಿಗೆ ಜೀವ ಕಳೆದುಕೊಂಡ ಯುವಕ!

ಈಗೀಗ ನಕಲಿ ಡಾಕ್ಟರ್‌ಗಳ ಹಾವಳಿ ಹೆಚ್ಚಾಗಿದೆ. ಫೇಕ್‌ ಸರ್ಟಿಫಿಕೇಟ್‌ ಪಡೆದುಕೊಂಡು ಕ್ಲೀನಿಕ್‌ ಹಾಕುವವರ ಸಂಖ್ಯೆ ಹೆಚ್ಚಾಗಿದ್ದು, ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಇದೀಗ ಇಲ್ಲೊಬ್ಬ ಯುವಕ ಭುಜ ನೋವು ಎಂದು ಆಸ್ಪತ್ರೆಗೆ ಹೋಗಿದ್ದಾತ ವೈದ್ಯನ ಎಡವಟ್ಟಿನಿಂದಾಗಿ ಜೀವ ಕಳೆದುಕೊಂಡಿದ್ದಾನೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ತೀವ್ರಗೊಂಡ ರೈತರ ಪ್ರತಿಭಟನೆ! – ಕೇಂದ್ರ ಸರ್ಕಾರ ನೆರವಿಗೆ ಬರುವಂತೆ ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ಧರಾಮಯ್ಯ!

ಈ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಶೇಖರ್ ಅವರ ಪುತ್ರ ವಿನೋದ್ ಭುಜದ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆ ಪಡೆಯಲೆಂದು ಸುಂಟಿಕೊಪ್ಪದಲ್ಲೇ ಇರುವ ಖಾಸಗಿ ಕ್ಲಿನಿಕ್​ಗೆ ತೆರಳಿದ್ದಾರೆ. ಇವರನ್ನು ಪರೀಕ್ಷಿಸಿದ ವೈದ್ಯ ಯಶೋಧರ್ ಪೂಜಾರಿ ಮಾತ್ರೆ ಜೊತೆಗೆ ಇಂಜೆಕ್ಷನ್​ ಕೂಡ ನೀಡಿದ್ದಾರೆ. ಆದರೂ ನೋವು ಕಡಿಮೆಯಾಗದ ಕಾರಣ ಮತ್ತೊಂದು ಇಂಜೆಕ್ಷನ್​ ಕೊಟ್ಟು ಮನೆಗೆ ಕಳುಹಿಸಿದ್ದಾರೆ. ಕ್ಲಿನಿಕ್​ನಿಂದ ಮನೆಗೆ ಆಗಮಿಸಿದ ವಿನೋದ್ ಕೆಲವೇ ಹೊತ್ತಿನಲ್ಲಿ ಅಸ್ವಸ್ಥರಾಗಿ ಬಿದ್ದಿದ್ದು, ತಕ್ಷಣವೇ ಸ್ಥಳೀಯರು ಆಟೋದಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಅವರನ್ನು ಕರೆ ತಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ವಿನೋದ್ ಸಾವನ್ನಪ್ಪಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ.

ಅಂದ್ಹಾಗೆ ಮೃತ ವಿನೋದ್​ಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳು ಇರಲಿಲ್ಲ.ಕಳೆದ ಕೆಲವು ದಿನಗಳಿಂದ ತಮ್ಮ ಮನೆಯನ್ನ ತಾವೇ ನವೀಕರಿಸಿದ್ದರು. ಮರಗಳನ್ನ ಇಳಿಸಿದ್ದರಿಂದ ಸ್ವಲ್ಪ ಭುಜ ನೋವಿದೆ ಅಂತ ಕ್ಲಿನಿಕ್​ಗೆ ತೆರಳಿದ್ದೇ ಅವರ ಜೀವಕ್ಕೀಗ ಮುಳುವಾಗಿದೆ. ಭುಜ ನೋವಿಗೆ ಕಾರಣ ಏನು ಎಂದು ವೈದ್ಯರು ಸರಿಯಾಗಿ ಪರಿಶೀಲಿಸದೆ ಎರಡೆರಡು ಇಂಜೆಕ್ಷನ್ ನೀಡಿದ್ದೇ ವಿನೋದ್​ ಸಾವಿಗೆ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಖಾಸಗಿ ಕ್ಲಿನಿಕ್​ ವೈದ್ಯರಾಗಿರೋ ಯಶೋಧರ್ ಪೂಜಾರಿ ವಿರುದ್ಧ ಈ ಹಿಂದೆಯೂ ಹಲವು ದೂರುಗಳಿವೆ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ವಿನೋದ್ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಅದರ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Shwetha M