ಟೀಂ ಇಂಡಿಯಾಗೆ ಟಾಟಾ ಬಂಪರ್ ಗಿಫ್ಟ್ – ವಿಶ್ವಕಪ್ ಗೆದ್ದ ಸಿಂಹಿಣಿಯರಿಗೆ ಟಾಟಾ ಸಿಯೆರಾ SUV ಕಾರು

ಟೀಂ ಇಂಡಿಯಾಗೆ ಟಾಟಾ ಬಂಪರ್ ಗಿಫ್ಟ್ – ವಿಶ್ವಕಪ್ ಗೆದ್ದ ಸಿಂಹಿಣಿಯರಿಗೆ ಟಾಟಾ ಸಿಯೆರಾ SUV ಕಾರು

ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ದೇಶದ ಪ್ರಮುಖ ಆಟೋಮೊಬೈಲ್ ಕಂಪೆನಿ ಟಾಟಾ ಮೋಟರ್ಸ್ ಭರ್ಜರಿ ಉಡುಗೊರೆ ಘೋಷಿಸಿದೆ. ನವೆಂಬರ್ 2 ರಂದು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 52 ರನ್​ಗಳ ಜಯ ಸಾಧಿಸಿತ್ತು. ಈ ಮೂಲಕ ಭಾರತ ಮಹಿಳಾ ತಂಡ ಚೊಚ್ಚಲ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ.

ಈ ಐತಿಹಾಸಿಕ ಸಾಧನೆಗಾಗಿ ಇದೀಗ ಟಾಟಾ ಕಂಪೆನಿಯು ಟೀಮ್ ಇಂಡಿಯಾ ಆಟಗಾರ್ತಿಯರಿಗೆ ಹೊಚ್ಚ ಹೊಸ ಟಾಟಾ ಸಿಯೆರಾ ಎಸ್‌ಯುವಿ ಕಾರನ್ನು ನೀಡುವುದಾಗಿ ತಿಳಿಸಿದೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾದ ಕೋಚ್ ಹಾಗೂ ಸಹಾಯಕ ಸಿಬ್ಬಂದಿಗಳಿಗೂ ಈ ಉಡುಗೊರೆ ಸಿಗಲಿದೆ ಎಂದು ತಿಳಿಸಿದ್ದಾರೆ.ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಶೈಲೇಶ್ ಚಂದ್ರ,  ಭಾರತೀಯ ಮಹಿಳಾ ತಂಡವು ತನ್ನ ದೃಢನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ದೇಶಕ್ಕೆ ಹೆಮ್ಮೆಯ ಕ್ಷಣವನ್ನು ನೀಡಿದೆ. ಅವರ ಸಾಧನೆಗಳನ್ನು ಗೌರವಿಸಲು ನಾವು ಸಂತೋಷಪಡುತ್ತೇವೆ.

ಇದನ್ನೂ ಓದಿ: ಮನೆಯಲ್ಲಿರೋ ಒಂಟಿ ಮಹಿಳೆಯರೇ ಟಾರ್ಗೆಟ್!‌ – ಆಹ್ವಾನ ಪತ್ರಿಕೆ ಕೊಡಲು ಬಂದು ಚಿನ್ನಾಭರಣ ಕದ್ದೊಯ್ದರು

ಟಾಟಾ ಸಿಯೆರಾ ಭಾರತೀಯ ಆಟೋಮೊಬೈಲ್ ಇತಿಹಾಸದಲ್ಲಿ ಒಂದು ಪರಂಪರೆಯ ಐಕಾನ್ ವಾಹನವಾಗಿದೆ. ಈ ಕಾರುಗಳನ್ನು ಇದೀಗ ಗೌರವಾನ್ವಿತ ವ್ಯಕ್ತಿಗಳಿಗೆ ನಾವು ಪ್ರತಿಷ್ಠಿತ ವಸ್ತುವನ್ನಾಗಿ ಉಡುಗೊರೆಯಾಗಿ ನೀಡುತ್ತಿದ್ದೇವೆ. ಟಾಟಾ ಸಿಯೆರಾ ಹಾಗೂ ಟೀಮ್ ಇಂಡಿಯಾ ಎರಡೂ ಸ್ಫೂರ್ತಿಯ ಸಂಕೇತಗಳು. ಹೀಗಾಗಿ ಹೊಚ್ಚ ಹೊಸ ವಿನ್ಯಾಸದ ಟಾಟಾ ಸಿಯೆರಾ ಕಾರನ್ನು ಭಾರತೀಯ ತಂಡಕ್ಕೆ ನೀಡುತ್ತಿದ್ದೇವೆ ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಶೈಲೇಶ್ ಚಂದ್ರ ಹೇಳಿದ್ದಾರೆ.

ನವೆಂಬರ್ 25 ರಂದು ಬಿಡುಗಡೆ:

ಟಾಟಾ ಸಿಯೆರಾ ಕಾರಿನ ಹೊಸ ಮಾಡೆಲ್ ಇನ್ನೂ ಸಹ ಬಿಡುಗಡೆಯಾಗಿಲ್ಲ. 90 ರ ದಶಕದಲ್ಲಿ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಸಿಯೆರಾ ಕಾರಿಗೆ ಇದೀಗ ಆಧುನಿಕ ಟಚ್ ನೀಡಲಾಗಿದ್ದು, ಈ ಮೂಲಕ ಟಾಟಾ ಕಂಪೆನಿ ಮತ್ತೊಮ್ಮೆ ತನ್ನ ಐಕಾನ್ ಕಾರನ್ನು ರಸ್ತೆಗಿಳಿಸಲು ನಿರ್ಧರಿಸಿದೆ. ಅದರಂತೆ ಇದೇ ನವೆಂಬರ್ 25 ರಂದು ಟಾಟಾ ಸಿಯೆರಾ ಕಾರು ಬಿಡುಗಡೆಯಾಗಲಿದೆ. ಇದೇ ವೇಳೆ ಟೀಮ್ ಇಂಡಿಯಾ ಆಟಗಾರ್ತಿಯರಿಗೆ ಕಾರನ್ನು ಹಸ್ತಾಂತರಿಸುವ ಸಾಧ್ಯತೆಯಿದೆ.

Kishor KV