ರಣಜಿಯಲ್ಲಿ ದೀಪಕ್ ಹೂಡಾ ರನ್ ಮಳೆ – ರಾಜಸ್ಥಾನ್ ಪರ ಭರ್ಜರಿ ದ್ವಿಶತಕ

ರಣಜಿಯಲ್ಲಿ ದೀಪಕ್ ಹೂಡಾ ರನ್ ಮಳೆ – ರಾಜಸ್ಥಾನ್ ಪರ ಭರ್ಜರಿ ದ್ವಿಶತಕ

ರಣಜಿ ಟೂರ್ನಿಯಲ್ಲಿ ಈ ಬಾರಿ ರನ್ ಮಳೆ ಸುರಿಯುತ್ತಿದೆ. ಈ ಬಾರಿ ರಾಜಸ್ಥಾನ್ ಪರ ಹೊಸ ಇನಿಂಗ್ಸ್ ಆರಂಭಿಸಿರುವ ದೀಪಕ್ ಹೂಡಾ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ಈ ಡಬಲ್ ಸೆಂಚುರಿಯೊಂದಿಗೆ ಮುಂಬೈ ವಿರುದ್ಧ ರಾಜಸ್ಥಾನ್ ತಂಡವು ಬೃಹತ್ ರನ್‌ಗಳ ಮುನ್ನಡೆ ಪಡೆದುಕೊಂಡಿದೆ.

ಇದನ್ನೂ ಓದಿ: ಸೋತ ಮೇಲೆ BCCIಗೆ ಬುದ್ಧಿ ಬಂತಾ? – ಬೆಂಚ್ ಕಾದವರಿಂದ್ಲೇ ಗೆದ್ದ ಭಾರತ

ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಗ್ರೂಪ್-ಡಿ ಪಂದ್ಯದಲ್ಲಿ ದೀಪಕ್ ಹೂಡಾ ಭರ್ಜರಿ ದ್ವಿಶತಕ ಬಾರಿಸಿದ್ದಾರೆ. ಈ ಮೂಲಕ ದೀಪಕ್ ಹೂಡಾ ಕ್ರಿಕೆಟ್ ಲೋಕ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ದೀಪಕ್ ಹೂಡಾ, 335 ಎಸೆತಗಳಲ್ಲಿ 22 ಫೋರ್​ ಹಾಗೂ 2 ಸಿಕ್ಸರ್​ಗಳೊಂದಿಗೆ 248 ರನ್ ಬಾರಿಸಿ ಅಬ್ಬರಿಸಿದ್ದಾರೆ.

ಮುಂಬೈ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡದ ನಾಯಕ ಮಹಿಪಾಲ್ ಲೋಮ್ರರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು ಮೊದಲ ಇನಿಂಗ್ಸ್​ನಲ್ಲಿ 254 ರನ್​ಗಳಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ರಾಜಸ್ಥಾನ್ ತಂಡಕ್ಕೆ ಆರಂಭಿಕ ದಾಂಡಿಗ ಸಚಿನ್ ಯಾದವ್ (92) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹಿಪಾಲ್ ಲೋಮ್ರರ್ 41 ರನ್​ಗಳ ಕೊಡುಗೆ ನೀಡಿದರು. ಆ ಬಳಿಕ ಕಣಕ್ಕಿಳಿದ ದೀಪಕ್ ಹೂಡಾ ಆಕರ್ಷಕ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದರು. ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ದ ಹೂಡಾ ಕ್ರೀಸ್​ನಲ್ಲಿ ನೆಲೆಯೂರುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್​ಗೆ ಮುಂದಾದರು. ಈ ಮೂಲಕ ಶತಕ ಪೂರೈಸಿದರು. ಸೆಂಚುರಿ ಬಳಿಕ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ ದೀಪಕ್ ಹೂಡಾ 335 ಎಸೆತಗಳಲ್ಲಿ 22 ಫೋರ್​ ಹಾಗೂ 2 ಸಿಕ್ಸರ್​ಗಳೊಂದಿಗೆ 248 ರನ್ ಬಾರಿಸಿದರು. ದೀಪಕ್ ಹೂಡಾ ಅವರ ಈ ದ್ವಿಶತಕದ ನೆರವಿನೊಂದಿಗೆ ರಾಜಸ್ಥಾನ್ ತಂಡವು 6 ವಿಕೆಟ್ ಕಳೆದುಕೊಂಡು 617 ರನ್​ಗಳಿಸಿ ಡಿಕ್ಲೇರ್ ಘೋಷಿಸಿತು.

ಮೊದಲ ಇನಿಂಗ್ಸ್​ನಲ್ಲಿನ 363 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಮುಂಬೈ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಮುಶೀರ್ ಖಾನ್ ಭರ್ಜರಿ ಆರಂಭ ಒದಗಿಸಿದ್ದಾರೆ. 56 ಎಸೆತಗಳನ್ನು ಎದುರಿಸಿರುವ ಯಶಸ್ವಿ ಜೈಸ್ವಾಲ್ 8 ಫೋರ್​ಗಳೊಂದಿಗೆ 56 ರನ್ ಬಾರಿಸಿದರೆ, ಮುಶೀರ್ 32 ರನ್​ಗಳಿಸಿ ಉತ್ತಮ ಸಾಥ್ ನೀಡಿದ್ದಾರೆ. ಈ ಮೂಲಕ ಮುಂಬೈ ತಂಡವು 3ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 89 ರನ್ ಕಲೆಹಾಕಿದೆ. ಸದ್ಯ ಮುಂಬೈ ತಂಡವು 274 ರನ್​ಗಳ ಹಿನ್ನಡೆ ಹೊಂದಿದ್ದು, ನಾಲ್ಕನೇ ದಿನದಾಟದಲ್ಲಿ ಆಲೌಟ್ ಆಗದೇ ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯುವ ಇರಾದೆಯಲ್ಲಿದ್ದಾರೆ. ಅತ್ತ ಕೊನೆಯ ದಿನದಾಟದೊಳಗೆ ಮುಂಬೈ ತಂಡವನ್ನು ಆಲೌಟ್ ಮಾಡಿದರೆ ಮಾತ್ರ ರಾಜಸ್ಥಾನ್ ತಂಡ ಗೆಲುವು ಸಾಧಿಸಬಹುದು.

Sulekha