52 ವರ್ಷ.. 52 ರನ್.. ವಿಶ್ವಕಪ್ ಗೆದ್ದು ಭಾರತ ಚರಿತ್ರೆ – ಸೋತು ಗೆದ್ದ ಆಫ್ರಿಕಾಗೂ ಸಲಾಂ

ಸೂಪರ್ ಸಂಡೇ. ಕೋಟ್ಯಂತರ ಭಾರತೀಯ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಭಾನುವಾರ ನಿಜಕ್ಕೂ ಡಬಲ್ ಲಾಟರಿ ಹೊಡೆದಂಗಿತ್ತು. ಮಧ್ಯಾಹ್ನದಿಂದ ಶುರುವಾದ ಸೆಲೆಬ್ರೇಷನ್ ಮಿಡ್ನೈಟ್ವರೆಗೂ ಕಂಟಿನ್ಯೂ ಆಗಿತ್ತು. ಒಂದ್ಕಡೆ ಬಾಯ್ಸ್ ಟೀಂ ಆಸ್ಟ್ರೇಲಿಯಾ ವಿರುದ್ಧ ಮೂರನೇ t20i ಮ್ಯಾಚ್ನಲ್ಲಿ ಭರ್ಜರಿಯಾಗಿ ಗೆದ್ರೆ ಇತ್ತ ವುಮೆನ್ಸ್ ಟೀಂ ಚರಿತ್ರೆಯನ್ನೇ ಸೃಷ್ಟಿಸೋ ಅವತಾರ ತಾಳಿದ್ರು. ನವಿ ಮುಂಬೈನ ಡಿ ವೈ ಪಾಟೀಲ್ ಮೈದಾನದಲ್ಲಿ ನಡೆದ ಈ ಪಂದ್ಯ ಭಾರತೀಯರ ಪಾಲಿಗೆ ಇನ್ನೆಂದು ಮರೆಯಲಾಗದ ಸವಿನೆನಪುಗಳನ್ನ ತಂದುಕೊಟ್ಟಿದೆ.
ಇದನ್ನೂ ಓದಿ : 21 ಕೋಟಿ ರೂ. ಮೌಲ್ಯದ ಕೋಣ ಸಾ*ವು – ವಿಷ ಹಾಕಿ ಕೊಂದ್ರಾ?
ಟಾಸ್ ಸೋತ್ರೂ ಫೈನಲ್ ಗೆದ್ದು ಸಿಂಹಿಣಿಯರು ಇತಿಹಾಸ!
ನವೆಂಬರ್ 2. ಭಾನುವಾರ. ಭಾರತದ ಪಾಲಿಗೆ ಇನ್ನೆಂದೂ ಮರೆಯಲಾಗದ ದಿನ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ವರ್ಸಸ್ ಸೌತ್ ಆಫ್ರಿಕಾ ನಡುವಿನ ಐಸಿಸಿ ವುಮೆನ್ಸ್ ವಿಶ್ವಕಪ್ ಫೈನಲ್ ನಲ್ಲಿ ಭಾರತ ಗೆದ್ದು ಬೀಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ವೀರವನಿತೆಯರು ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ಗಳನ್ನ ಕಲೆ ಹಾಕಿದ್ರು. ಹರಿಣಗಳ ನಾಡಿನ ಆಟಗಾರ್ತಿಯರಿಗೆ 299 ರನ್ಸ್ ಟಾರ್ಗೆಟ್ ಇತ್ತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 45.3 ಓವರ್ಗಳಲ್ಲಿ ತನೆನಲ್ಲಾ ವಿಕೆಟ್ಗಳನ್ನ ಕಳೆದುಕೊಂಡು 246 ರನ್ ಕಲೆಹಾಕಲಷ್ಟೇ ಶಕ್ತವಾಯ್ತು. ಈ ಮೂಲಕ 52 ವರ್ಷಗಳಿಂದ ಕಾಯ್ತಿದ್ದ ವಿಶ್ವಕಪ್ನ 52 ರನ್ಗಳಿಂದ ಗೆಲ್ಲೋ ಮೂಲಕ ಟೀಂ ಇಂಡಿಯಾ ಟ್ರೋಫಿ ಬರ ನೀಗಿಸಿಕೊಳ್ತು.
ನಿರ್ಣಾಯಕ ಪಂದ್ಯದಲ್ಲಿ ಮಿಂಚಿದ ಶರ್ಮಾ & ವರ್ಮಾ!
ಭಾರತದ ಈ ಹಿಸ್ಟಾರಿಕ್ ವಿಕ್ಟರಿಯಲ್ಲಿ ಪ್ರತಿಯೊಬ್ಬ ಆಟಗಾರ್ತಿಯರ ಕೊಡುಗೆಯೂ ಇದೆ. ಜಾಸ್ತಿ ಹೈಲೆಟ್ ಆಗಿತ್ತು ಆಲ್ ರೌಂಡರ್ ಗಳಾದ ದೀಪ್ತಿ ಶರ್ಮಾ ಮತ್ತು ಶೆಫಾಲಿ ವರ್ಮಾ. ಓಪನರ್ ಆಗಿ ಕಣಕ್ಕಿಳಿದ ಶೆಫಾಲಿ ವರ್ಮಾ 78 ಎಸೆತಗಳಲ್ಲಿ 87 ರನ್ಸ್ ಕಲೆ ಹಾಕಿ ಔಟ್ ಆದ್ರು. ಹಾಗೇ ಬೌಲಿಂಗ್ನಲ್ಲೂ ವಿಕೆಟ್ ಉರುಳಿಸಿದ್ರು. ಇನ್ನು ದೀಪ್ತಿ ಶರ್ಮಾ ಅಂತೂ ಎಕ್ಸ್ಟ್ರಾರ್ಡಿನರಿ. ಫೈನಲ್ ಪಂದ್ಯದಲ್ಲಿ ದೀಪ್ತಿ ಶರ್ಮಾ 5ನೇ ಸ್ಲಾಟ್ನಲ್ಲಿ ಬ್ಯಾಟ್ ಬೀಸಿ 58 ರನ್(58 ಎಸೆತ, 3 ಬೌಂಡರಿ, 1 ಸಿಕ್ಸ್) ಹೊಡೆದರೆ ಬೌಲಿಂಗ್ನಲ್ಲಿ 9.3 ಓವರ್ ಬೌಲ್ ಮಾಡಿ 39 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಲು ಕಾರಣರಾಗಿದ್ದಾರೆ.ಈ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ 22 ವಿಕೆಟ್ ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅಷ್ಟೇ ಅಲ್ಲದೇ 9 ಪಂದ್ಯಗಳ 7 ಇನ್ನಿಂಗ್ಸ್ ಆಡಿ 215 ರನ್ ಹೊಡೆದಿದ್ದಾರೆ. ವಿಶ್ವಕಪ್ ಟೂರ್ನಿಯೊಂದರಲ್ಲಿ ಇಷ್ಟು ರನ್ ಮತ್ತು ಇಷ್ಟು ವಿಕೆಟ್ ಯಾರು ಪಡೆದೇ ತೆಗೆದಿಲ್ಲ. ಈ ಕಾರಣಕ್ಕೆ ದೀಪ್ತಿ ಶರ್ಮಾ ಅವರಿಗೆ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಹಾಗೇ ಶೆಫಾಲಿ ವರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ್ರು.
ಸೋತರೂ ಜನಮನ ಗೆದ್ದ ಸೌತ್ ಆಫ್ರಿಕಾ ನಾಯಕಿ!
ಇಲ್ಲಿ ಸೌತ್ ಆಫ್ರಿಕಾ ಟೀಂ ಸೋಲ್ತು ನಿಜ. ಬಟ್ ನಾಯಕಿಯ ಪ್ರದರ್ಶನವನ್ನ ಮೆಚ್ಚಲೇಬೇಕು. ದಕ್ಷಿಣ ಆಫ್ರಿಕಾ ಪರ ಏಕಾಂಗಿ ಹೋರಾಟ ನಡೆಸಿದ ನಾಯಕಿ ಲೌರಾ ವೋಲ್ವಾರ್ಡ್ 101 ರನ್ಗಳ ಇನ್ನಿಂಗ್ಸ್ ಆಡಿದ್ರು. ಮೊದಲ ಓವರ್ನಿಂದಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಲಾರಾ 98 ಎಸೆತಗಳಲ್ಲಿ ಶತಕ ಪೂರೈಸಿದರು. 39 ಓವರ್ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 200ರ ಗಡಿದಾಟಿತು. ಲಾರಾ ಇರೋವರೆಗೂ ಸೌತ್ ಆಫ್ರಿಕಾ ವಿನ್ನಿಂಗ್ ರೇಸ್ನಲ್ಲಿತ್ತು. ಆದರೆ ದೀಪ್ತಿ ಶರ್ಮಾ ಎಸೆದ 42ನೇ ಓವರ್ನ ಮೊದಲ ಎಸೆತದಲ್ಲಿ ಲಾರಾ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿಯಾಗಿ ಬಾರಿಸಿದರು. ಫೀಲ್ಡಿಂಗ್ನಲ್ಲಿದ್ದ ಅಮನ್ಜೋತ್ ಕೌರ್ ಎರಡು ಸಲ ಕೈಜಾರಿದ್ರೂ ಅಂತಿಮವಾಗಿ ಚೆಂಡನ್ನ ಒಂದೇ ಕೈಯಲ್ಲಿ ಹಿಡಿದು ಕ್ಯಾಚ್ ಕಂಪ್ಲೀಟ್ ಮಾಡಿದ್ರು. ಬಳಿಕ ಒತ್ತಡಕ್ಕೆ ಸಿಕಿದ ಸೌತ್ ಆಫ್ರಿಕಾ 45.3 ಓವರ್ಗಳಲ್ಲಿ 246 ರನ್ಗಳಿಸಿ ಆಲೌಟ್ ಆಯಿತು.
ಕೊನೆಗೂ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದ ಹರ್ಮನ್ ಪ್ರೀತ್ ಕೌಟ್!
ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿಗೆ ಈ ಟ್ರೋಫಿ ನಿಜಕ್ಕೂ ಬೆಲೆ ಕಟ್ಟಲಾಗದ ಟ್ರೋಫಿ. ತಮ್ಮ ಇಡೀ ಕರಿಯರ್ನಲ್ಲಿ ಒಂದೇ ಒಂದು ಟ್ರೋಫಿ ಗೆಲ್ಲೋಕೂ ಸಾಧ್ಯವಾಗಿರಲಿಲ್ಲ. ಇದಕ್ಕೂ ಮೊದಲು 12 ಐಸಿಸಿ ಟೂರ್ನಮೆಂಟ್ಗಳಲ್ಲಿ ಆಡಿದ್ದ ಹರ್ಮನ್ ಪ್ರೀತ್ ಒಮ್ಮೆಯೂ ಟ್ರೋಫಿ ಗೆದ್ದಿರಲಿಲ್ಲ. 2009, 2013, 2017 ಮತ್ತು 2022 ರಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಆಡಿದ್ದರು. ಹಾಗೆಯೇ 2009, 2010, 2012, 2014, 2016, 2018, 2020 ಮತ್ತು 2023 ರಲ್ಲಿ ಟಿ20 ವಿಶ್ವಕಪ್ನಲ್ಲಿಯೂ ಭಾಗವಹಿಸಿದ್ದರು. ಆದರೆ ಯಾವ ಐಸಿಸಿ ಟೂರ್ನಿಯಲ್ಲೂ ಟ್ರೋಫಿ ಎತ್ತಿಹಿಡಿದಿರಲಿಲ್ಲ. ಇದೀಗ ಅವರ ಪ್ರಶಸ್ತಿ ಬರ ಕೊನೆಗೂ ನೀಗಿದೆ. ಮೊದಲ ಬಾರಿಗೆ ಕಪ್ ಎತ್ತಿ ಹಿಡಿದಿದ್ದಾರೆ.
ಭಾರತದ ಗೆಲುವಿಗೆ ಕಾರಣಗಳು!
ಸ್ಮೃತಿ ಮತ್ತು ಶಫಾಲಿ ಶತಕದ ಜೊತೆಯಾಟ
ಬ್ಯಾಟಿಂಗ್ ನಲ್ಲಿ ಪ್ರತಿಯೊಬ್ಬರ ಕೊಡುಗೆ
ದೀಪ್ತಿ ಶರ್ಮಾ ಆಲ್ ರೌಂಡ್ ಪ್ರದರ್ಶನ
ಹೋಮ್ ಪಿಚ್ ಅಂಡ್ ಹೋಮ್ ಕ್ರೌಡ್
ಸೌತ್ ಆಫ್ರಿಕಾ ಪಾರ್ಟ್ನರ್ ಶಿಪ್ ಬ್ರೇಕ್
ಹೀಗೆ ಹೆಜ್ಜೆಹೆಜ್ಜೆಗೂ ಸೌತ್ ಆಫ್ರಿಕಾ ಪಡೆಯನ್ನ ಕಟ್ಟಿಹಾಕಿದ ವುಮೆನ್ಸ್ ಟೀಂ ಫೀಲ್ಡಿಂಗ್ನಲ್ಲೂ ಅದ್ಭುತ ಪ್ರದರ್ಶನ ನೀಡಿತು. ಇಬ್ಬರನ್ನ ರನ್ ಔಟ್ ಮಾಡುವಲ್ಲಿ ಯಶಸ್ವಿಯಾದ್ರು. ಒಟ್ಟಾರೆಯಾಗಿ ಆಲ್ ರೌಂಡ್ ಪ್ರದರ್ಶನದಿಂದಲೇ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಪ್ರಧಾನಿ ಮೋದಿಯಿಂದ ಹಿಡಿದು ಗೂಗಲ್ ಸಿಇಓ ಸುಂದರ್ ಪಿಚೈವರೆಗೂ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದು. ಇನ್ನು ವಿನ್ನಿಂಗ್ ಟೀಂ ಭಾರತಕ್ಕೆ ಹಣದ ಹೊಳೆಯೇ ಹರಿದು ಬಂದಿದೆ. ವಿಶ್ವ ಚಾಂಪಿಯನ್ ಭಾರತಕ್ಕೆ ಐಸಿಸಿಯಿಂದ $4.48 ಮಿಲಿಯನ್ ಡಾಲರ್ ಸಿಗಲಿದೆ. ಅಂದರೇ ಸರಿಸುಮಾರು 41 ಕೋಟಿ ರೂ. ಬಹುಮಾನವನ್ನು ಮಹಿಳಾ ತಂಡ ಪಡೆದುಕೊಳ್ಳಲಿದೆ. ಇದು ಪುರುಷ ಮತ್ತು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ದೊಡ್ಡ ಬಹುಮಾನದ ಮೊತ್ತವಾಗಿದೆ. ಮತ್ತೊಂದೆಡೆ ಈ ಐತಿಹಾಸಿಕ ಸಾಧನೆಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಜೇತ ತಂಡಕ್ಕೆ 51 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಒಟ್ನಲ್ಲಿ ಟೀಂ ಇಂಡಿಯಾ ಫ್ಯಾನ್ಸ್ ಈಗ ವಿಶ್ವಕಪ್ ಟ್ರೋಫಿ ಸಂಭ್ರಮದಲ್ಲಿ ಮಿಂದೇಳ್ತಿದ್ದಾರೆ.

ನೋಡಿರಿ

