ಪಂಚ ಗ್ಯಾರಂಟಿ ಗ್ರಾಮೀಣ ಮಟ್ಟದಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ ನೀಡಿವೆ – ಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಗ್ರಾಮೀಣ ಮಟ್ಟದಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ ನೀಡಿವೆ. ಇದರಿಂದ ರಾಜ್ಯಾದ್ಯಂತ ಶೇ.70 ರಿಂದ 95ರಷ್ಟು ಬಡ ಹಿಂದುಳಿದ ಮಹಿಳೆಯರ ಜೀವನಮಟ್ಟ ಸುಧಾರಣೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಉಡುಪಿಯಲ್ಲಿ ಶನಿವಾರ 70ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಗ್ರಾಮೀಣ ಮಟ್ಟದಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ ನೀಡಿವೆ. ಇದರಿಂದ ರಾಜ್ಯಾದ್ಯಂತ ಶೇ. 70 ರಿಂದ 95ರಷ್ಟು ಬಡ ಹಿಂದುಳಿದ ಮಹಿಳೆಯರ ಜೀವನಮಟ್ಟ ಸುಧಾರಣೆಯಾಗಿದೆ. ಶಕ್ತಿ, ಗೃಹಜ್ಯೋತಿ ಉಳಿತಾಯದ ಹಣ ಮತ್ತು ಗೃಹಲಕ್ಷ್ಮೀ ಹಣವನ್ನು ಪ್ರಮುಖವಾಗಿ ಆಹಾರ ಪದಾರ್ಥಗಳ ಖರೀದಿಗೆ ಬಳಸುತ್ತಿದ್ದು, ಇದರಿಂದ ಶೇ.88ರಷ್ಟು ಕುಟುಂಬಗಳು ಉತ್ತಮ ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುತ್ತಿದ್ದಾರೆ. ಶೇ.83ರಷ್ಟು ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಗ್ಯಾರಂಟಿಗಳು ಸಹಕಾರಿಯಾಗಿರುವ ಅಂಶ ಅಧ್ಯಯನದಿಂದ ಬಹಿರಂಗವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ಹೊಸ ಇತಿಹಾಸ – ಕರ್ನಾಟಕದಲ್ಲಿ 250 ಕೋಟಿ ಗಳಿಕೆ ಮಾಡಿದ ಮೊದಲ ಕನ್ನಡ ಸಿನಿಮಾ!
ನಮ್ಮ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರು, ವಿದೇಶಿಯರ ಆಡಳಿತದಿಂದ ದೇಶವನ್ನು ಮುಕ್ತಗೊಳಿಸುವ ಜತೆಗೆ, ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷಿಕರನ್ನು ಒಂದುಗೂಡಿಸಿ, ಕನ್ನಡ ನಾಡಿನ ಪುನರ್ ರಚನೆಯ ಕಾರ್ಯವನ್ನು ಸಾಧಿಸುವ ಕನಸು ಹೊಂದಿದ್ದರು. ಕನ್ನಡ ಭಾಷೆಯನ್ನಾಡುವ ಜನರು ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಪ್ರಾಂತ್ಯ ಸೇರಿದಂತೆ ಮತ್ತಿತರ ಹತ್ತು ಹಲವು ವಿಭಾಗಗಳಲ್ಲಿ ನೆಲೆಸಿದ್ದರು. ಅಲ್ಲಿಯೂ ಕನ್ನಡದ ಕೃಷಿ, ಕನ್ನಡದ ಬಗ್ಗೆ ಅಪಾರ ಚಿಂತನೆ, ಅಭಿಮಾನ, ಸಾಹಿತ್ಯ ರಚನೆ ನಡೆಯುತ್ತಿತ್ತು ಎಂದು ಸಚಿವರು ಸ್ಮರಿಸಿದರು.
ಸ್ವತಂತ್ರ ಭಾರತದ ರಾಜ್ಯ ಪುನರ್ ವಿಂಗಡಣೆಯು ಭಾಷಾ ಆಧಾರಿತ ರಾಜ್ಯವಾಗಬೇಕೆಂಬ ಸೂತ್ರದ ಆಧಾರದ ಮೇಲೆ 1956ರ ನವೆಂಬರ್ 1 ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬರುವುದರೊಂದಿಗೆ ಕನ್ನಡದ ಮನಸ್ಸುಗಳು ಒಂದಾದವು. 1973ರಲ್ಲಿ ದೇವರಾಜ ಅರಸರು “ಕರ್ನಾಟಕ” ಎಂದು ಮರುನಾಮಕರಣ ಮಾಡಿದರು. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಭಾಗವಹಿಸಿದ ಹಿರಿಯ ರಾಜಕೀಯ ಮುತ್ಸದ್ದಿಗಳು, ಸಾಹಿತಿಗಳು, ಹಿರಿಯ ನಾಗರಿಕರ ತ್ಯಾಗ, ಬಲಿದಾನ ಅವಿಸ್ಮರಣೀಯ. ಇಂದು ಕನ್ನಡ ಸಾಹಿತ್ಯ ಹಾಗೂ ನಾಡನ್ನು ಶ್ರೀಮಂತಗೊಳಿಸಿದ ಎಲ್ಲರನ್ನೂ ಕೃತಜ್ಞತಾ ಪೂರ್ವಕವಾಗಿ ಗೌರವಿಸೋಣ ಎಂದರು.

ನೋಡಿರಿ

