ಮಾಟ – ಮಂತ್ರ ವಿಚಾರವಾಗಿ ಜಗಳ – ಹೆಂಡ್ತಿ ಮೇಲೆ ಬಿಸಿ ಮೀನು ಸಾರು ಎರಚಿದ ಪಾಪಿ ಪತಿ

ಗಂಡ ಹೆಂಡ್ತಿ ಜಗಳ ಉಂಡು ಮಲಗುವವರೆಗೆ ಎಂಬ ಮಾತಿದೆ. ಆದ್ರೆ ಈಗಿನವರ ಜಗಳ ಮಾತ್ರ ಬೇರೆ ಹಂತಕ್ಕೆ ಹೋಗುತ್ತೆ. ಇದೀಗ ಇಲ್ಲೊಂದು ಕಡೆ ಮಾಟ-ಮಂತ್ರ ವಿಚಾರವಾಗಿ ಗಂಡ, ಹೆಂಡ್ತಿ ಮಧ್ಯೆ ಜಗಳ ನಡೆದಿದೆ. ತನ್ನ ಮಾತು ಕೇಳಿಲ್ಲ ಎಂದು ಪತಿ, ಪತ್ನಿ ಮೇಲೆ ಬಿಸಿ ಮೀನು ಸಾರು ಎರಚಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಶತಕ ಸಿಡಿಸಿದ ಜೆಮಿಮಾಗೆ ಸಲಾಂ – ಆಸೀಸ್ ವಿರುದ್ಧ ಭಾರತದ ಸಿಂಹಿಣಿಯ ಕೆಚ್ಚೆದೆಯ ಹೋರಾಟ
ಈ ಘಟನೆ ಕೇರಳದ ಕೊಲ್ಲಂನಲ್ಲಿ ಕಳೆದ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಡಯಮಂಗಲಂ ಸಮೀಪದ ವೈಕ್ಕಲ್‌ನ ಸಂತ್ರಸ್ತೆ ರೆಜಿಲಾ ಗಫೂರ್ (36) ಆಸ್ಪತ್ರೆಗೆ ದಾಖಲಾಗಿದ್ದು, ಆಕೆಯ ಪತಿ ಸಜೀರ್ ತಲೆಮರೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಪತಿ ಸಜೀರ್ ರೆಜಿಲಾ ಅವರ ಕೂದಲನ್ನು ಸಡಿಲಗೊಳಿಸಿ, ತನ್ನ ಮುಂದೆ ಕುಳಿತು, ಭಸ್ಮ ಹಚ್ಚಿಕೊಳ್ಳುವಂತೆ ಮತ್ತು ಮಾಟಮಂತ್ರ ಮಾಡುವವರು ನೀಡಿದ ಲಾಕೆಟ್ ಧರಿಸುವಂತೆ ಕೇಳಿಕೊಂಡಿದ್ದ, ಆಕೆ ನಿರಾಕರಿಸಿದಾಗ, ಅಡುಗೆಮನೆಯ ಒಲೆ ಮೇಲೆ ಕುದಿಯುತ್ತಿದ್ದ ಫಿಶ್ ಕರಿಯ ಪಾತ್ರೆಯನ್ನು ತೆಗೆದುಕೊಂಡು ಬಂದು ಪತ್ನಿಯ ಮೇಲೆ ಸುರಿದಿದ್ದಾನೆ. ಆಕೆಯ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಓಡಿಬಂದಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಅಂದ್ಹಾಗೆ ಸಜೀರ್ ತನ್ನ ಪತ್ನಿಗೆ ದೆವ್ವ ಹಿಡಿದಿದೆ ಎಂದು ಭಾವಿಸಿ, ಈ ಹಿಂದೆ ಹಲವಾರು ಬಾರಿ ಆಕೆಯ ಮೇಲೆ ಹಲ್ಲೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮೊದಲು, ಪತಿ ತನ್ನ ಮೇಲೆ ಹಲ್ಲೆ ನಡೆಸಿದ ನಂತರ ಆಕೆ ಪೊಲೀಸರನ್ನು ಸಂಪರ್ಕಿಸಿದ್ದರು. ಆಗ ಆತನಿಗೆ ಎಚ್ಚರಿಕೆ ನೀಡಲಾಗಿದ್ದರೂ, ನಂತರ ಆತ ಮಾಟಮಂತ್ರ ಮಾಡುವವರನ್ನು ಸಂಪರ್ಕಿಸುವುದನ್ನು ಬಿಟ್ಟಿರಲಿಲ್ಲ. ಗಂಡ ತಮ್ಮ ಮಗನ ಮೇಲೂ ಆಗಾಗ ಹಲ್ಲೆ ನಡೆಸುತ್ತಿದ್ದ ಎಂದು ಅವರು ಆರೋಪಿಸಿದ್ದಾರೆ.

ನೋಡಿರಿ

