ಶತಮಾನದ ಸಂತನಿಗೆ ಭಕ್ತರ ಅಂತಿಮ ನಮನ – ದರ್ಶನಕ್ಕೆ ಬಂದ ಜನತೆಗೆ ಉಚಿತ ಭೋಜನ

ಶತಮಾನದ ಸಂತನಿಗೆ ಭಕ್ತರ ಅಂತಿಮ ನಮನ – ದರ್ಶನಕ್ಕೆ ಬಂದ ಜನತೆಗೆ ಉಚಿತ ಭೋಜನ

ವಿಜಯಪುರ: ಸಾಧಕನಿಗೆ ಸಾವು ಅಂತಿಮವಲ್ಲ.. ಸಾವಿನ ನಂತರವೂ ಸಾಧನೆ ಮುಂದುವರೆಯುವುದೇ ನಿಜವಾದ ಸಾಧನೆ.. ಹೌದು.. ನಡೆದಾಡುವ ದೇವರು ತಮ್ಮ ನಡಿಗೆಯನ್ನು ನಿಲ್ಲಿಸಿರಬಹುದು. ಆದರೆ, ಶತಮಾನದ ಸಂತನ ನುಡಿಗಳು, ಅವರ ಆಶಯಗಳು.. ನೀಡಿದ ಪ್ರವಚನಗಳು ಭಕ್ತರ ಹೃದಯದಲ್ಲಿ ಇನ್ನೂ ಜೀವಂತ.. ಸಿದ್ದೇಶ್ವರ ಶ್ರೀಗಳು ತಮ್ಮದೇ ಆದ ಸಿದ್ಧಾಂತವನ್ನು ಹೊಂದಿದವರು.  ಸಮಾಧಿ ಮಾಡಬಾರದು, ಸ್ಮಾರಕ ಕಟ್ಟಬಾರದು ಎಂದು ಹೇಳುತ್ತಿದ್ದರು. ಈಗ ಅವರ ಆಶಯದಂತೆ ಅವರ ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಪಕ್ಷಾತೀತವಾಗಿ ಜ್ಯಾತ್ಯಾತೀತವಾಗಿ ಎಲ್ಲರೂ ಸೇರಿಕೊಂಡು ಶ್ರೀಗಳ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಸಿದ್ದೇಶ್ವರ ಶ್ರೀಗಳು 2014ರಲ್ಲೇ ವಿಲ್ ನಲ್ಲಿ ಎಲ್ಲಾ ವಿಧಿ ವಿಧಾನಗಳನ್ನ ಬರೆದಿಟ್ಟಿದ್ದರು. ಅವರ ಇಚ್ಛೆಯಂತೆ ಆಶ್ರಮದಲ್ಲಿ ಅವರ ವಿಲ್ ಪ್ರಕಾರ ಅಂತಿಮ ವಿಧಿವಿಧಾನ ಮಾಡಲು ನಿರ್ಣಯಿಸಲಾಗಿದೆ.

ಇದನ್ನೂ ಓದಿ:  ಬಾಲಕ ‘ಸಿದ್ದಗೊಂಡ’.. ‘ಶತಮಾನದ ಸಂತ’ನಾಗಿದ್ದು ಹೇಗೆ?

ಇನ್ನು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ ಸೇರಿದಂತೆ ರಾಜಕೀಯ ಗಣ್ಯರು ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ವಾಮೀಜಿಗಳ ಅಂತಿಮದರ್ಶನಕ್ಕೆ ಲಕ್ಷಾಂತರ ಜನ ಹರಿದು ಬರುತ್ತಿದ್ದು, ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ವಿಜಯಪುರ ನಗರದಲ್ಲಿರುವ ಹಾಗೂ ಸುತ್ತಮುತ್ತಲಿನ ಎಲ್ಲಾ ಪೆಟ್ರೋಲ್ ಡೀಸೆಲ್ ಬಂಕ್ ಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಪೆಟ್ರೋಲಿಯಂ ಅಸೋಸಿಯೇಷನ್ ವತಿಯಿಂದ ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಸಹಾಯವಾಗಲೆಂದು ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ವಿಜಯಪುರ ಜಿಲ್ಲಾ ಪೆಟ್ರೋಲಿಯಂ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಅರುಣ ಹುಂಡೇಕರ ತಿಳಿಸಿದ್ದಾರೆ.  ಅಲ್ಲದೇ, ಆಕಾಶವಾಣಿ ರೇಡಿಯೋ ಕೇಂದ್ರದ ಬಳಿ ಬೃಹತ್ ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಿದ್ದೇಶ್ವರ ಸಂಸ್ಥೆ ಮತ್ತು ಬಿ.ಎಲ್‌ಡಿ ಸಂಸ್ಥೆಯಿಂದಲೂ ಭಕ್ತರಿಗಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಮತ್ತೊಂದೆಡೆ ಮಹಾರಾಷ್ಟ್ರದಿಂದಲೂ ಭಕ್ತರ ದಂಡೇ ಆಗಮಿಸುತ್ತಿದೆ. ಮಹಾರಾಷ್ಟ್ರ,  ಸೊಲ್ಲಾಪುರ ಸೇರಿದಂತೆ ಬೇರೆ ಬೇರೆ ಕಡೆಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ.

suddiyaana