ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಕರ್ನಾಟಕದ ಲಿಂಕ್‌ –  ಬೆಂಗಳೂರಿನಲ್ಲಿ ಸಾಕ್ಷ್ಯ ಸಂಗ್ರಹ.. ಬಳ್ಳಾರಿಯಲ್ಲಿ ಗೋಲ್ಡ್‌ ರಿಕವರಿ!

ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಕರ್ನಾಟಕದ ಲಿಂಕ್‌ –  ಬೆಂಗಳೂರಿನಲ್ಲಿ ಸಾಕ್ಷ್ಯ ಸಂಗ್ರಹ.. ಬಳ್ಳಾರಿಯಲ್ಲಿ ಗೋಲ್ಡ್‌ ರಿಕವರಿ!

ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಎಸ್‌ಐಟಿ ಪ್ರಕರಣದ ತನಿಖೆ ನಡೆಸುತ್ತಿದೆ. ಇದೀಗ ಈ ಕೇಸ್‌ ಗೆ ಬೆಂಗಳೂರು ಮತ್ತು ಬಳ್ಳಾರಿಯ ಲಿಂಕ್‌ ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿ, ಬೆಂಗಳೂರು ಮೂಲದ ಉನ್ನಿಕೃಷ್ಣನ್ ಪೊಟ್ಟಿಯನ್ನು ವಿಶೇಷ ತನಿಖಾ ತಂಡ ಸಾಕ್ಷ್ಯ ಸಂಗ್ರಹಕ್ಕಾಗಿ ಬೆಂಗಳೂರಿಗೆ ಕರೆತಂದಿದೆ.

ಇದನ್ನೂ ಓದಿ:ಜಮ್ಮು & ಕಾಶ್ಮಿರದಲ್ಲಿ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ – ವಿಶ್ವಸಂಸ್ಧೆಯಲ್ಲಿ ಪಾಕ್ ವಿರುದ್ಧ ಭಾರತ ಆಕ್ರೋಶ

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ದ್ವಾರಪಾಲಕ ವಿಗ್ರಹಗಳಿಗೆ ಹೊದಿಸಿದ 42.8 ಕೆಜಿ ತೂಕದ ಕವಚದಲ್ಲಿ 4.5 ಕೆಜಿ ಚಿನ್ನ ನಾಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. 2019ರಲ್ಲಿ ಮೂರ್ತಿಗಳಿಗೆ ಪುನರ್‌ಲೇಪನ ಮಾಡಿದ ಸಂದರ್ಭದಲ್ಲಿ ಈ ಚಿನ್ನದ ಕಳ್ಳತನ ನಡೆದಿದೆ ಎಂದು ವಿಶೇಷ ಆಯುಕ್ತರು ಆರೋಪಿಸಿದ್ದರು. ಹಳೆಯ ತಾಮ್ರ ಮತ್ತು ಚಿನ್ನದ ಲೇಪನದ ಮೂರ್ತಿಗಳ ತೂಕದಲ್ಲಿ ವ್ಯತ್ಯಾಸ ಕಂಡುಬಂದಿರುವ ಬಗ್ಗೆ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಪೊಟ್ಟಿ ವಿರುದ್ಧ ಬೆಂಗಳೂರಿನ ಶ್ರೀರಾಂಪುರದಲ್ಲಿ ಚಿನ್ನಲೇಪಿತ ಕವಚಗಳನ್ನು ಪ್ರದರ್ಶಿಸಿ ದೇಣಿಗೆ ಸಂಗ್ರಹಿಸಿದ್ದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಎಸ್‌ಪಿ ಶಶಿಧರನ್ ನೇತೃತ್ವದ ಕೇರಳದ ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.

ಪೊಟ್ಟಿ ಕದ್ದ ಚಿನ್ನವನ್ನು ಬಳ್ಳಾರಿಯಲ್ಲಿ ಮಾರಾಟ ಮಾಡಿದ್ದ ಆರೋಪದ ಮೇಲೆ ಅಲ್ಲಿಯೂ ತನಿಖೆ ನಡೆಸಲಾಗಿದೆ. ಎಸ್‌ಐಟಿ ತಂಡ ನಿನ್ನೆ ಬಳ್ಳಾರಿಯ ರೊದ್ದಂ ಜ್ಯುವೆಲ್ಸ್ ಳಿಗೆ ಮೇಲೆ ದಾಳಿ ನಡೆಸಿ, ನಾಣ್ಯಗಳ ರೂಪದಲ್ಲಿ ಪರಿವರ್ತಿಸಲಾಗಿದ್ದ 476 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದೆ. ಈ ಚಿನ್ನವನ್ನು ಪೊಟ್ಟಿಯಿಂದ ಜ್ಯುವೆಲ್ಸ್ ಮಾಲೀಕ ಗೋವರ್ಧನ್ ಖರೀದಿಸಿದ್ದು, ಆತನ ವಿಚಾರಣೆ ನಡೆಸಲಾಗಿದೆ. ಸದ್ಯ ರೊದ್ದಂ ಗೋಲ್ಡ್ ಶಾಪ್‌ಗೆ ಬೀಗ ಜಡಿಯಲಾಗಿದೆ.

ಬಳ್ಳಾರಿಯಲ್ಲಿ ವಶಪಡಿಸಿಕೊಂಡ ಚಿನ್ನಕ್ಕೆ ಸಂಬಂಧಿಸಿದ ದಾಖಲೆಗಳು ಬೆಂಗಳೂರಿನಲ್ಲಿದ್ದ ಕಾರಣ, ಅಧಿಕಾರಿಗಳು ಕೋರ್ಟ್ ಅನುಮತಿಯೊಂದಿಗೆ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿರುವ ಉನ್ನಿಕೃಷ್ಣನ್ ಪೊಟ್ಟಿಯ ಮನೆಯಲ್ಲಿ ಚಿನ್ನದ ಗಟ್ಟಿ ಮತ್ತು ₹2 ಲಕ್ಷ ನಗದು ಪತ್ತೆಯಾಗಿದೆ ಎಂದು ಎಸ್‌ಐಟಿ ಮೂಲಗಳು ಮಾಹಿತಿ ನೀಡಿವೆ.

Shwetha M