ಬಿಹಾರ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ಚಟುವಟಿಕೆಗಳು ಚುರುಕಾಗಿವೆ. ಪ್ರಧಾನಿ ನರೇಂದ್ರ ಮೋದಿ ಇಂದು ( ಅಕ್ಟೋಬರ್ 24) ರಂದು ಸಮಸ್ತಿಪುರದಿಂದ ತಮ್ಮ ಪಕ್ಷದ ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ.
ಈ ಸಮಸ್ತಿಪುರವು ಸಮಾಜವಾದಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರ ಜನ್ಮಸ್ಥಳವಾಗಿದೆ. ಕಳೆದ ವರ್ಷ ಎನ್‌ಡಿಎ ಸರ್ಕಾರವು ಕರ್ಪೂರಿ ಠಾಕೂರ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ಪ್ರಧಾನಿ ಮೋದಿ ಅವರೊಂದಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಇರಲಿದ್ದಾರೆ. ಅದೇ ದಿನ ಅವರು ಮತ್ತೊಂದು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದನ್ನೂ ಓದಿ: ತಗ್ಗಿದ ಕಾಂತಾರ ಚಾಪ್ಟರ್ 1 ಅಬ್ಬರ – ಮೊದಲ ಬಾರಿಗೆ ಅತೀ ಕಡಿಮೆ ಕಲೆಕ್ಷನ್ ಮಾಡಿದ ಶೆಟ್ರ ಸಿನಿಮಾ!
ಚುನಾವಣೆಯ ಮೊದಲ ಹಂತದ ಮತದಾನ ನವೆಂಬರ್ 6 ರಂದು ನಡೆಯಲಿದೆ. ಅದಕ್ಕೂ ಮೊದಲು, ಅಕ್ಟೋಬರ್ 30 ಮತ್ತು ನವೆಂಬರ್ 2 ಹಾಗೂ 3 ರಂದು ಪ್ರಧಾನಿ ಅವರು ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಒಟ್ಟು 243 ವಿಧಾನಸಭಾ ಕ್ಷೇತ್ರಗಳ ಪೈಕಿ 121 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.
ಇಲ್ಲಿ ಜೆಡಿಯು – ಬಿಜೆಪಿ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಇತ್ತ ಕಾಂಗ್ರೆಸ್-ಆರ್‌ಜೆಡಿ ಮಹಾಘಟಬಂಧನ್ ಅಧಿಕಾರದಿಂದ ಕೆಳಗಿಳಿಸುವ ಗುರಿ ಹೊಂದಿದೆ. ಚುನಾವಣಾ ಕಣದಲ್ಲಿ ಹೊಸದಾಗಿ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ ಕೂಡ ಕಾಣಿಸಿಕೊಂಡಿದೆ. ಎರಡನೇ ಹಂತದ ಮತದಾನ 122 ಕ್ಷೇತ್ರಗಳಿಗೆ ನವೆಂಬರ್ 11 ರಂದು ನಡೆಯಲಿದೆ. ಮತ ಎಣಿಕೆ ನವೆಂಬರ್ 14 ರಂದು ನಡೆಯಲಿದೆ. ಪ್ರಧಾನಿ ಅವರು ಸಮಸ್ತಿಪುರದಿಂದಲೇ ಪ್ರಚಾರ ಆರಂಭಿಸಲು ನಿರ್ಧರಿಸಿರುವುದು ಮಹತ್ವದ ಸಂಗತಿಯಾಗಿದೆ. ಏಕೆಂದರೆ ಬಿಜೆಪಿ ಬಹಳ ಹಿಂದಿನಿಂದಲೂ ಕರ್ಪೂರಿ ಠಾಕೂರ್ ಅವರ ಸಮಾಜವಾದಿ ಪರಂಪರೆಯನ್ನು ತಮ್ಮ ಪಕ್ಷಕ್ಕೆ ತಂದುಕೊಳ್ಳಲು ಪ್ರಯತ್ನಿಸುತ್ತಿದೆ.
ಠಾಕೂರ್ ಅವರ ತವರು ಗ್ರಾಮ, ಕರ್ಪೂರಿ ಗ್ರಾಮವು, 1988 ರಲ್ಲಿ ಅವರ ನಿಧನದ ನಂತರ ಅವರ ಹೆಸರಿಡಲ್ಪಟ್ಟಿದೆ. ಇದು ಪ್ರಧಾನಿ ರ್ಯಾಲಿ ನಡೆಯುವ ಸಮಸ್ತಿಪುರ ಪಟ್ಟಣದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದೆ. ವಿಶೇಷವೆಂದರೆ, ಕರ್ಪೂರಿ ಠಾಕೂರ್ ಅವರ ಮೊಮ್ಮಗಳು, ದಂತವೈದ್ಯೆ ಜಾಗೃತಿ ಠಾಕೂರ್, ಜನ ಸುರಾಜ್ ಪಕ್ಷದ ಅಭ್ಯರ್ಥಿಯಾಗಿ ಸಮಸ್ತಿಪುರದ ಮೊರ್ವಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಜಾಗೃತಿ ಅವರು ಕರ್ಪೂರಿ ಠಾಕೂರ್ ಅವರ ಕಿರಿಯ ಮಗ ಡಾ. ಬೀರೇಂದ್ರ ಠಾಕೂರ್ ಅವರ ಪುತ್ರಿ. ಮಾಜಿ ಮುಖ್ಯಮಂತ್ರಿಯ ಹಿರಿಯ ಮಗ ರಾಮನಾಥ್ ಠಾಕೂರ್ ಅವರು ಜೆಡಿಯು ಪಕ್ಷದ ರಾಜ್ಯಸಭಾ ಸದಸ್ಯ ಮತ್ತು ಕೇಂದ್ರ ಸಚಿವರಾಗಿದ್ದಾರೆ.