ರಜೆಯಲ್ಲಿ ಮಜಾ ಮಾಡಬೇಕಾ?- ಚಿಕ್ಕಮಗಳೂರಿನಲ್ಲಿ ಈ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಿ

ರಜೆಯಲ್ಲಿ ಮಜಾ ಮಾಡಬೇಕಾ?- ಚಿಕ್ಕಮಗಳೂರಿನಲ್ಲಿ ಈ ಪ್ರವಾಸಿ ಸ್ಥಳಕ್ಕೆ  ಭೇಟಿ ನೀಡಿ

ಬೆಂಗಳೂರಿನಿಂದ ಚಿಕ್ಕಮಗಳೂರು ಸುಮಾರು 250 ರಿಂದ 265 ಕಿ.ಮೀ ದೂರದಲ್ಲಿದೆ.  ರಜೆಯಲ್ಲಿ ಫ್ಯಾಮಿಲಿ ಅಥವಾ ಫ್ರೆಂಡ್ಸ್‌ ಜೊತೆ ಟ್ರಿಪ್‌ ಯೋಜಿಸಲು ಬಯಸಿದರೆ ತಪ್ಪದೇ ಚಿಕ್ಕಮಗಳೂರಿಗೆ ಹೋಗಿ. ಇಲ್ಲಿ ಪ್ರವಾಸಿಗರನ್ನು ಸೆಳೆಯುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಮಾಣಿಕ್ಯಧಾರ ಜಲಪಾತ, ಕಲ್ಹಟ್ಟಿ ಜಲಪಾತ, ಮುಳ್ಳಯ್ಯನಗಿರಿ, ಹೆಬ್ಬೆ ಜಲಪಾತ, ಬಾಬಾ ಬುಡನ್‌ಗಿರಿ, ಕೆಮ್ಮಣ್ಣುಗುಂಡಿ, ಭದ್ರಾ ವನ್ಯಜೀವಿ ಧಾಮ, ಕಾಫಿ ವಸ್ತು ಸಂಗ್ರಹಾಲಯ, ಕದಂಬಿ ಜಲಪಾತ, ಝಡ್ ಪಾಯಿಂಟ್ ಸೇರಿದಂತೆ ಇನ್ನು ಹಲವಾರು ಪ್ರವಾಸಿ ಆಕರ್ಷಣೆಗಳಿವೆ. ಇವುಗಳಲ್ಲಿ ಪ್ರಮುಖ 3 ಪ್ರವಾಸಿ ತಾಣಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ

ಚಿಕ್ಕಮಗಳೂರಿನಲ್ಲಿ ಭೇಟಿ ನೀಡುವ ಎಲ್ಲಾ ತಾಣಗಳಿಗಿಂತ ಈ ಉದ್ಯಾನವನ ಹೆಚ್ಚು ಪ್ರಸಿದ್ಧವಾಗಿದೆ. ಇಲ್ಲಿ ರಜಾ ದಿನಗಳನ್ನು ಕಳೆಯಲು ಹಾಗೂ ಪ್ರಕೃತಿಯ ಸೌಂದರ್ಯವನ್ನು ಆನಂದಿಸಲು ಅತ್ಯುತ್ತಮವಾದ ತಾಣವಾಗಿದೆ. ಚಿಕ್ಕಮಗಳೂರಿನಿಂದ ಕೇವಲ 100 ಕಿ.ಮೀಗಿಂತ ಕಡಿಮೆ ದೂರದಲ್ಲಿರುವ ಈ ಉದ್ಯಾನವನವು ಅನೇಕ ವನ್ಯಜೀವಿಗಳನ್ನು ಹೊಂದಿದೆ. ಈ ಉದ್ಯಾನವನವು ಸಮುದ್ರ ಮಟ್ಟದಿಂದ ಸುಮಾರು 1800 ಮೀಟರ್ ಎತ್ತರದಲ್ಲಿದೆ. ಚಿಕ್ಕಮಗಳೂರಿನ ವಾತಾವರಣವನ್ನು ಆನಂದಿಸಲು ಬಯಸುವ ಮಂದಿಗೆ ಈ ಉದ್ಯಾನವನ ಸ್ವರ್ಗವಾಗಿದೆ.
ಪ್ರಕೃತಿ ಪ್ರಿಯರು ಮತ್ತು ಸಾಹಸ ಪ್ರಿಯರು ರೋಮಾಂಚಕ ಚಾರಣದ ಅನುಭವವನ್ನು ಇಲ್ಲಿ ಹೊಂದಬಹುದು. ಉದ್ಯಾನವನದಲ್ಲಿ ಒಂದು ಪ್ರಾಚೀನ ಗುಹೆ ಇದೆ. ಅಲ್ಲಿಗೆ ಹೆಚ್ಚಾಗಿ ಭಗವತಿಯ ಭಕ್ತರು ಹೋಗುತ್ತಾರೆ. ನೂರಾರು ಭಕ್ತರು ದೇವಿಯನ್ನು ಆರಾಧಿಸುತ್ತಾರೆ. ಅಂದಹಾಗೆ, ನೀವು ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಡಿಸೆಂಬರ್‌ನಿಂದ ಫೆಬ್ರವರಿ ತಿಂಗಳುಗಳಾಗಿವೆ. ಪ್ರವೇಶ ಸಮಯ: ಬೆಳಿಗ್ಗೆ 7:00 ರಿಂದ ಮಧ್ಯಾಹ್ನ 1:00 ರವರೆಗೆ
ಹೆಬ್ಬೆ ಜಲಪಾತ
ಹೆಬ್ಬೆ ಜಲಪಾತವು ಚಿಕ್ಕಮಗಳೂರಿನ ಅತ್ಯಂತ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತಕ್ಕೆ ಪ್ರವೇಶಿಸಲು ನೀವು ಕೆಮ್ಮಣ್ಣುಗುಂಡಿಯ ಮೂಲಕ ಹೋಗಬೇಕಾಗುತ್ತದೆ. ಇದು ಈ ಸಣ್ಣ ಗಿರಿಧಾಮದಿಂದ ಕೇವಲ 8 ರಿಂದ 9 ಕಿ.ಮೀ ದೂರದಲ್ಲಿದೆ. ಎತ್ತ ನೋಡಿದರೂ ದಟ್ಟವಾದ ಕಾಡುಗಳು, ಶ್ರೀಮಂತ ಸಸ್ಯವರ್ಗ ಮತ್ತು ಬೆಟ್ಟಗಳಿಂದ ಈ ಪ್ರದೇಶವು ಆವರಿಸಿಕೊಂಡಿವೆ. ಜಲಪಾತವು 168 ಮೀಟರ್ ಎತ್ತರದಿಂದ ಇಳಿಯುವ ದೃಶ್ಯ ನೋಡುವುದೇ ಸೋಜಿಗ. ಜಲಪಾತದ ಪ್ರೇಮಿಗಳಿಗಂತೂ ಈ ಸ್ಥಳ ಬಹಳ ಇಷ್ಟವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಈ ಪ್ರಶಾಂತವಾದ ಜಲಪಾತದ ನೀರು ಗಿಡಮೂಲಿಕೆಗಳಿಂದ ತುಂಬಿರುತ್ತದೆ ಎಂದು ನಂಬಲಾಗಿದೆ. ಈ ಆರೋಗ್ಯಕರ ನೀರಿನಲ್ಲಿ ಸ್ನಾನ ಮಾಡುವುದರಿಂದ ಅನೇಕ ಚರ್ಮದ ತೊಂದರೆಗಳು ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಸುತ್ತಲೂ ವಿವಿಧ ಸಾಹಸಮಯ ಚಟುವಟಿಕೆಗಳನ್ನು ಸಹ ಆನಂದಿಬಹುದು. ಜಲಪಾತದ ಸ್ಥಳವು ಅತ್ಯುತ್ತಮ ಕುಟುಂಬ ಪಿಕ್ನಿಕ್‌ಗೆ ಹೇಳಿ ಮಾಡಿಸಿದಂತಿದೆ.

ಸಮಯ: ಬೆಳಿಗ್ಗೆ 6:00 ರಿಂದ ಸಂಜೆ 6:00 ರವರೆಗೆ ತೆರೆದಿರುತ್ತದೆ

ಕಾಫಿ ವಸ್ತುಸಂಗ್ರಹಾಲಯ

ಚಿಕ್ಕಮಗಳೂರಿನಲ್ಲಿ ನೀವು ಮಿಸ್ ಮಾಡಿಕೊಳ್ಳಬಾರದ ಮತ್ತೊಂದು ಸುಂದರ ತಾಣವೆಂದರೆ ಅದು ಕಾಫಿ ವಸ್ತುಸಂಗ್ರಹಾಲಯವಾಗಿದೆ. ಈ ಸ್ಥಳವು ತಾಜಾ ಕಾಫಿ ಸುವಾಸನೆ, ತಯಾರಿಕೆಗಳಿಗೆ ಹೆಸರುವಾಸಿಯಾಗಿದೆ. ಬೀಜಗಳನ್ನು ಕೀಳುವ ಮೊದಲ ಹಂತದಿಂದ ಹಿಡಿದು ಪುಡಿ ಮಾಡುವ ಹಂತದವರೆವಿಗೂ ನೀವು ಎಲ್ಲಾ ಪ್ರಕ್ರಿಯೆಯನ್ನು ನೋಡಬಹುದು ಹಾಗೂ ಕಲಿಯಬಹುದು.

ಕಾಫಿ ವಸ್ತುಸಂಗ್ರಹಾಲಯ ಪ್ರವೇಶ ಶುಲ್ಕ: 20 ಪ್ರವೇಶ ಶುಲ್ಕವಾಗಿದೆ.

Kishor KV