ನರೇಂದ್ರ ಮೋದಿ ಡೊನಾಲ್ಡ್ ಟ್ರಂಪ್ ಅವರನ್ನು ನೋಡಿ ಭಯಗೊಂಡಿದ್ದಾರೆ – ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೋಡಿ ಭಯಗೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಸಬೇಕಾ ಅಥವಾ ಬೇಡಾ ಎಂಬ ಕುರಿತು ನಿರ್ಧರಿಸಲು ಮತ್ತು ಘೋಷಿಸಲು ಅವರು ಅಮೆರಿಕ ನಾಯಕರಿಗೆ ಅವಕಾಶ ಕೊಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ತಮ್ಮ ಸ್ನೇಹಿತ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂಬ ಟ್ರಂಪ್ ಹೇಳಿಕೆಯ ಬೆನ್ನಲ್ಲೇ ಈ ಟೀಕೆ ವ್ಯಕ್ತವಾಗಿದೆ. ಮೋದಿ ಅವರು ಟ್ರಂಪ್ ಬಗ್ಗೆ ಭಯ ಹೊಂದಿದ್ದಾರೆ. ಭಾರತವು ರಷ್ಯಾದ ತೈಲವನ್ನು ಖರೀದಿಸುವುದಿಲ್ಲ ಎಂದು ನಿರ್ಧರಿಸಲು ಮತ್ತು ಘೋಷಿಸಲು ಟ್ರಂಪ್ಗೆ ಅವಕಾಶ ನೀಡುತ್ತಿದ್ದಾರೆ. ಪದೇ ಪದೇ ತಿರಸ್ಕಾರದ ಹೊರತಾಗಿಯೂ ಅಭಿನಂದನಾ ಸಂದೇಶಗಳನ್ನು ಕಳುಹಿಸುತ್ತಲೇ ಇರುತ್ತಾರೆ. ಅಮೆರಿಕಕ್ಕೆ ಹಣಕಾಸು ಸಚಿವರ ಭೇಟಿಯನ್ನು ರದ್ದುಗೊಳಿಸಲಾಗಿದೆ. ಶರ್ಮ್ ಎಲ್ ಶೇಖ್ ಅವರನ್ನು ಬಿಟ್ಟುಬಿಡಲಾಗಿದೆ. ಆಪರೇಷನ್ ಸಿಂಧೂರ್ ಬಗ್ಗೆ ಅವರ ಹೇಳಿಕೆಯನ್ನು ವಿರೋಧಿಸುತ್ತಿಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ಸಕ್ಸಸ್ ಬೆನ್ನಲ್ಲೇ ರಿಷಬ್ ಶೆಟ್ಟಿ ಟೆಂಪಲ್ ರನ್! – ಚಾಮುಂಡೇಶ್ವರಿ ದರ್ಶನ ಪಡೆದ ಡಿವೈನ್ ಸ್ಟಾರ್!
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಕೂಡ ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಮೇ 10ರಂದು ಭಾರತ ಆಪರೇಷನ್ ಸಿಂಧೂರ ಸ್ಥಗಿತಗೊಳಿಸಿದೆ ಎಂದು ಮೊದಲು ಘೋಷಿಸಿದವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ. ಇದಾದ ಬಳಿಕ ಅಮೆರಿಕ ಅಧ್ಯಕ್ಷ ಟ್ರಂಪ್ ಸುಂಕ ಮತ್ತು ವ್ಯಾಪಾರದ ಅಸ್ತ್ರವನ್ನು ಬಳಕೆ ಮಾಡಿ ಆಪರೇಷನ್ ಸಿಂಧೂರ್ ಅನ್ನು ನಿಲ್ಲಿಸಲು ಮಧ್ಯಪ್ರವೇಶ ಮಾಡಿದ್ದಾಗಿ ಹೇಳಿಕೊಂಡರು. ಆದರೂ ನಮ್ಮ ಪ್ರಧಾನಿ ಮೌನವಾಗಿದ್ದರು. ಈಗ ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದಿಲ್ಲ ಎಂದು ಮೋದಿ ಭರವಸೆ ನೀಡಿದ್ದಾರೆ ಎಂದು ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ. ಈ ಮೂಲಕ ಪ್ರಮುಖ ನಿರ್ಧಾರಗಳನ್ನು ಅಮೆರಿಕಕ್ಕೆ ಹೊರಗುತ್ತಿಗೆ ನೀಡಿದಂತೆ ಕಾಣುತ್ತದೆ. 56 ಇಂಚಿನ ಎದೆ ಕುಗ್ಗಿದೆ ಎಂದು ರಮೇಶ್ ಕುಟುಕಿದ್ದಾರೆ.
ನಿನ್ನೆ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಭಾರತ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದಕ್ಕೆ ಅಮೆರಿಕ ಸಂತೋಷವಾಗಿಲ್ಲ. ಈ ಖರೀದಿಯು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯುದ್ಧಕ್ಕೆ ಹಣಕಾಸು ಒದಗಿಸಲು ಸಹಾಯ ಮಾಡಿದೆ. ನನ್ನ ಸ್ನೇಹಿತ, ನಮ್ಮ ನಡುವೆ ಉತ್ತಮ ಸಂಬಂಧವಿದೆ. ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ನನಗೆ ಭರವಸೆ ನೀಡಿದರು. ಅದು ಒಂದು ದೊಡ್ಡ ಹೆಜ್ಜೆ. ಈಗ ನಾವು ಚೀನಾವನ್ನು ಅದೇ ರೀತಿ ಮಾಡಬೇಕಾಗಿದೆ ಎಂದು ತಿಳಿಸಿದ್ದರು.

ನೋಡಿರಿ

