ಆಸೀಸ್ ಸರಣಿಗೆ ಆಯ್ಕೆ ಮಾಡದ ಸಿಟ್ಟು – BCCI ವಿರುದ್ಧ ಮೊಹಮ್ಮದ್ ಶಮಿ ಗರಂ

ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಬಿಸಿಸಿಐ ವಿರುದ್ಧ ತಿರುಗಿ ಬಿದ್ದಿದ್ದಾರೆ. ಚಾಂಪಿಯನ್ ಟ್ರೋಫಿ ಗೆಲುವಿನ ಬಳಿಕ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಬಿಸಿಸಿಐ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಮಿ, ಬಿಸಿಸಿಐ ನಡೆಯನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ವಿಶ್ವಕಪ್ನಲ್ಲಿ ಭಾರತ ಮಹಿಳಾ ತಂಡಕ್ಕೆ ಸತತ ಸೋಲು – ಮಹಾಕಾಳೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಆರಂಭಕ್ಕೆ ಕೇವಲ ಐದು ದಿನಗಳು ಬಾಕಿ ಇವೆ. ಬೌಲರ್ ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿಲ್ಲ. ಈ ವಿಚಾರಕ್ಕೆ ತಾಳ್ಮೆ ಕಳೆದುಕೊಂಡ ಮೊಹಮ್ಮದ್ ಶಮಿ ಬಿಸಿಸಿಐ ವಿರುದ್ಧ ಕೆಂಡ ಕಾರಿದ್ದಾರೆ. ಮೊಹಮ್ಮದ್ ಶಮಿ ಕೊನೆಯ ಬಾರಿಗೆ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದರು. ಅವರು ವರುಣ್ ಚಕ್ರವರ್ತಿ ಜೊತೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಒಬ್ಬರಾಗಿದ್ದರು. ಇದರ ಹೊರತಾಗಿಯೂ ಶಮಿ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಿಲ್ಲ. ಇದು ಶಮಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಆಸ್ಟ್ರೇಲಿಯಾ ಪ್ರವಾಸದಿಂದ ಹೊರಗುಳಿದರೂ, ಮೊಹಮ್ಮದ್ ಶಮಿ ಬಂಗಾಳ ರಣಜಿ ಟ್ರೋಫಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದಾಗ್ಯೂ, ಶಮಿ ಈಗ ತಮ್ಮ ಕಾರಣಗಳನ್ನು ವಿವರಿಸುತ್ತಾ ಬಿಸಿಸಿಐ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2023 ರ ವಿಶ್ವಕಪ್ನಲ್ಲಿ ದಾಖಲೆಯ ಪ್ರದರ್ಶನ ನೀಡಿದ್ದರೂ, ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ಪ್ರವಾಸದ ಭಾಗವಾಗಿಲ್ಲ. ಈ ವಿಚಾರ ಕ್ರಿಕೆಟ್ ಗಲ್ಲಿಗಳಲ್ಲಿ ಚರ್ಚೆಗೆ ಕಾರಣವಾಗಿದೆ. ರಣಜಿ ಟ್ರೋಫಿ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಮೊಹಮ್ಮದ್ ಶಮಿ, ನಾನು ಇದನ್ನು ಮೊದಲೇ ಹೇಳಿದ್ದೇನೆ. ಆಯ್ಕೆ ನನ್ನ ಕೈಯಲ್ಲಿಲ್ಲ. ಯಾವುದೇ ಫಿಟ್ನೆಸ್ ಸಮಸ್ಯೆಗಳಿದ್ದರೆ, ನಾನು ಬಂಗಾಳ ಪರ ಆಡಬಾರದು. ಇದನ್ನು ಚರ್ಚಿಸುವ ಮೂಲಕ ವಿವಾದವನ್ನು ಹುಟ್ಟುಹಾಕುವ ಅಗತ್ಯವಿಲ್ಲ ಅಂದುಕೊಳ್ಳುತ್ತೇನೆ. ನಾನು ನಾಲ್ಕು ದಿನಗಳ ಕ್ರಿಕೆಟ್ (ರಣಜಿ ಟ್ರೋಫಿ) ಆಡಲು ಸಾಧ್ಯವಾದರೆ, 50 ಓವರ್ಗಳ ಕ್ರಿಕೆಟ್ ಅನ್ನು ಸಹ ಆಡಬಲ್ಲೆ ಎನ್ನುವ ಮೂಲಕ ಬಿಸಿಸಿಐ ವಿರುದ್ಧ ತಿರುಗಿ ಬಿದ್ದಿದ್ದಾರೆ. ನನ್ನ ಕೆಲಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹೋಗುವುದು, ಪಂದ್ಯಗಳಿಗೆ ಸಿದ್ಧತೆ ನಡೆಸುವುದು ಮತ್ತು ಆಡುವುದು. ಬಿಸಿಸಿಐ ಅವರಿಗೆ ಯಾರು ಅಪ್ಡೇಟ್ ನೀಡುತ್ತಾರೆ ಅದು ಅವರ ಕೆಲಸ. ಅದು ನನ್ನ ಜವಾಬ್ದಾರಿಯಲ್ಲ ಎಂದು ಶಮಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೋಡಿರಿ

