ಮುಖ್ಯಮಂತ್ರಿ ಆಗೋಕೆ ನನಗೆ ಆತುರ ಇಲ್ಲ – ಡಿಸಿಎಂ ಡಿ.ಕೆ ಶಿವಕುಮಾರ್‌

ಮುಖ್ಯಮಂತ್ರಿ ಆಗೋಕೆ ನನಗೆ ಆತುರ ಇಲ್ಲ – ಡಿಸಿಎಂ ಡಿ.ಕೆ ಶಿವಕುಮಾರ್‌

ಮುಖ್ಯಮಂತ್ರಿಆಗೋಕೆ ನನಗೆ ಆತುರ ಇಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌   ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ವಿಪಕ್ಷಗಳ ʼನವೆಂಬರ್ ಕ್ರಾಂತಿʼ ಚರ್ಚೆ ವಿಚಾರಕ್ಕೆ ಬ್ರೇಕ್‌ ಹಾಕುವ ಯತ್ನ ಮಾಡಿದ್ದಾರೆ. ಲಾಲ್‌ ಬಾಗ್‌ನಲ್ಲಿ ಬೆಂಗಳೂರು  ನಡಿಗೆ ಹೆಸರಿನಲ್ಲಿ ನಡೆಸಿದ ಸಾರ್ವಜನಿಕರ ಭೇಟಿ ಕಾರ್ಯಕ್ರಮದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ʼನವೆಂಬರ್ ಕ್ರಾಂತಿʼ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ಆಗೋಕೆ ನನಗೆ ಆತುರ ಇಲ್ಲ. ಮಾತಿನ ವೇಳೆ ಯಾರೋ ಸಾರ್ವಜನಿಕರು ನೀವು ಸಿಎಂ ಆಗೋ ಟೈಂ ಹತ್ತಿರ ಬರಲಿ ಅಂದ್ರು. ನಾನು ಅದಕ್ಕೆ ಪ್ರತಿಕ್ರಿಯಿಸಿಲ್ಲ. ನನ್ನ ಹೇಳಿಕೆಯನ್ನು ತಿರುಚುವ ಕೆಲಸ ಆಗುತ್ತಿದೆ ಎಂದಿದ್ದಾರೆ. ನಾನು ಮುಖ್ಯಮಂತ್ರಿ ಆಗುವ ಟೈಂ ಹತ್ತಿರ ಬಂದಿದೆ ಅಂತ ಹೇಳಿಲ್ಲ. ನನ್ನ ರಾಜ್ಯದ ಜನರಿಗೆ ಒಳ್ಳೆಯ ಕೆಲಸ ಮಾಡಲು ಹೊರಟಿದ್ದೇನೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:   ಪ. ಬಂಗಾಳದಲ್ಲಿ ಕಾಮು*ಕರ ಅಟ್ಟಹಾಸ – ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಮೇಲೆ ರೇ*ಪ್

ಬೆಂಗಳೂರಿನ ಸಾಮಾನ್ಯ ನಾಗರಿಕರ ಬಳಿ ನಾನು ಮಾತನಾಡಬೇಕು. ಅವರ ಸಮಸ್ಯೆ, ಅಭಿಪ್ರಾಯಗಳನ್ನು ಆಲಿಸಬೇಕು. ಈ ಕಾರಣಕ್ಕಾಗಿ ಪ್ರತಿ ಶನಿವಾರ ಹಾಗೂ ಭಾನುವಾರದ ಬೆಳಿಗ್ಗೆ ವೇಳೆ ಪಾಲಿಕೆವಾರು ‘ಉದ್ಯಾನ ನಡಿಗೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು. ಪಾಲಿಕೆವಾರು ಉದ್ಯಾನಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಇದೇ ಶನಿವಾರ ಲಾಲ್ ಬಾಗ್ ನಲ್ಲಿ ಹಾಗೂ ಭಾನುವಾರ ಜೆ.ಪಿ. ಪಾರ್ಕ್ ನಲ್ಲಿ ಈ ನಡಿಗೆ ಕಾರ್ಯಕ್ರಮ ಇಟ್ಟುಕೊಂಡಿದ್ದೇನೆ. ಇದೇ ರೀತಿ ಮೊದಲ ಹಂತದಲ್ಲಿ 10 ದಿನ 10 ಉದ್ಯಾನಗಳಲ್ಲಿ ಈ ಕಾರ್ಯಕ್ರಮ ಮಾಡಲಿದ್ದೇನೆ. ಸಾರ್ವಜನಿಕರ ಅಭಿಪ್ರಾಯ, ಸಲಹೆ ಪಡೆದು ಅಗತ್ಯ ಬದಲಾವಣೆ ತಿದ್ದುಪಡಿ ಮಾಡಿಕೊಳ್ಳಲು ಈ ಕಾರ್ಯಕ್ರಮ. ನಡಿಗೆಯ ಅವಧಿ ಒಂದು ಗಂಟೆಯಿರುತ್ತದೆ. ಈ ವೇಳೆ ಜನ ಸಾಮಾನ್ಯರ ಬಳಿ ವಿಚಾರಗಳ ವಿನಿಮಯ ಹಾಗೂ ಚರ್ಚೆ ನಡೆಸಲಾಗುವುದು. ಏಕೆಂದರೆ ನಾಯಕರೇ ಒಂದು ಹೇಳುತ್ತಾರೆ. ಜನಸಾಮಾನ್ಯರೇ ಒಂದಷ್ಟು ಹೇಳುತ್ತಾರೆ. ಜನರ ಸಮಸ್ಯೆ ಏನಿದೆ ಎಂದು ಅವರಿಂದಲೇ ತಿಳಿದುಕೊಳ್ಳಬೇಕು. ಈ ದೃಷ್ಟಿಯಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಟನಲ್ ರಸ್ತೆಯಿಂದ ಲಾಲ್ ಬಾಗ್‌ಗೆ ಹಾನಿಯಾಗಲಿದೆ ಎಂದು ಕೇಳಿದಾಗ “ಟನಲ್ ರಸ್ತೆಯಿಂದ ಲಾಲ್ ಬಾಗ್ ಹಾಳಾಗುತ್ತದೆ ಎಂದು ಹೇಳಲಾಗುತ್ತಿದೆ. ಲಾಲ್ ಬಾಗ್ ಹಾಳಾಗುವುದಿಲ್ಲ. ಅದನ್ನು ಹಾಳು ಮಾಡಿದರೆ ನನ್ನ ತಲೆ ಒಡೆದು ಹಾಕುತ್ತಾರೆ ಎಂಬುದು ನನಗೆ ಗೊತ್ತಿದೆ. ಒಂದು ಮೂಲೆಯಲ್ಲಿ ಭೂಗರ್ಭದಲ್ಲಿ ಹೋಗುತ್ತದೆ. ಲಾಲ್ ಬಾಗ್‌ಗೆ ಯಾವುದೇ ತೊಂದರೆಯಾಗುವುದಿಲ್ಲ, ತೊಂದರೆ ಮಾಡಲು ಆಗುವುದಿಲ್ಲ” ಎಂದರು.  ಉದ್ಯಾನದ ಒಂದು ಮೂಲೆಯಲ್ಲಿ ಕಲ್ಲು ಬಂಡೆಯಿದ್ದು ಅಲ್ಲಿ ಟನಲ್ ರಸ್ತೆಗೆ ಪ್ರವೇಶ ಕಲ್ಪಿಸುವಂತೆ ಯೋಜಿಸಲಾಗಿದೆ. ಆ ಪ್ರದೇಶವನ್ನು ನಾನು ವೀಕ್ಷಣೆ ಮಾಡುತ್ತೇನೆ. ಏನಾದರೂ ತೊಂದರೆಗಳು, ಬದಲಾವಣೆಗಳಿದ್ದರೆ ಅದನ್ನು ಮಾಡಿಕೊಳ್ಳೋಣ. ಐತಿಹಾಸಿಕ ಲಾಲ್ ಬಾಗ್ ಅನ್ನು ಹಾಳು ಮಾಡಲು ಆಗುತ್ತದೆಯೇ? ಅಧಿಕಾರಿಗಳು ವರದಿ ನೀಡಿದ್ದಾರೆ. ಆದರೆ ನಾನೇ ಕಣ್ಣಾರೆ ನೋಡಿ ತಿಳಿದುಕೊಳ್ಳುತ್ತೇನೆ” ಎಂದು ತಿಳಿಸಿದರು.

Kishor KV