ರಿಚಾ ಆರ್ಭಟದಲ್ಲೂ ಸೋತ ಭಾರತ – IND ಸೆಮಿಫೈನಲ್ಸ್ ಲೆಕ್ಕಾಚಾರ ಹೇಗಿದೆ?
ಗೆಲುವೇ ಕಾಣದೆ ಹೊರಬೀಳುತ್ತಾ PAK?

ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಚೊಚ್ಚಲ ಟ್ರೋಫಿಯ ಕನಸಿನಲ್ಲಿ ಟೂರ್ನಿಗೆ ಕಾಲಿಟ್ಟಿದ್ದ ಭಾರತ ಮೊದಲ ಎರಡು ಪಂದ್ಯಗಳನ್ನ ಭರ್ಜರಿಯಾಗಿ ಗೆದ್ದಿತ್ತು. ಶ್ರೀಲಂಕಾ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ 59 ರನ್ಗಳ ಅಂತರದ ಗೆಲುವು, ಪಾಕಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಿ 88 ರನ್ಗಳ ಅಂತರದ ಗೆಲುವು. ಆದ್ರೆ ಸೌತ್ ಆಫ್ರಿಕಾ ವಿರುದ್ಧದ ಮೂರನೇ ಪಂದ್ಯದಲ್ಲಿ ಸೋಲು ಕಂಡಿದೆ. ಈ ಮೂಲಕ ಸೆಮಿಫೈನಲ್ ಲೆಕ್ಕಾಚಾರ ಶುರುವಾಗಿದೆ.
ಇದನ್ನೂ ಓದಿ : 8 ದಿನದಲ್ಲಿ 509 ಕೋಟಿ ಕಲೆಕ್ಷನ್ ಮಾಡಿದ ಕಾಂತಾರ 1 – KGF, ಕಾಂತಾರ ದಾಖಲೆ ಉಡೀಸ್
ಟಾಸ್ ಸೋತ ಭಾರತಕ್ಕೆ ಬ್ಯಾಟಿಂಗ್ ನಲ್ಲೂ ಸಿಗಲಿಲ್ಲ ಬಲ!
ಗುರುವಾರ ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ಫಸ್ಟ್ ಬ್ಯಾಟಿಂಗ್ ಮಾಡಬೇಕಾಯ್ತು. ಮೊದಲ ವಿಕೆಟ್ಗೆ ಸ್ಮೃತಿ ಮಂದಾನ ಹಾಗೇ ಪ್ರತೀಕಾ ರಾವಲ್ 10 ಓವರ್ಗಳಲ್ಲಿ 55 ರನ್ಗಳ ಪಾರ್ಟ್ನರ್ ಶಿಪ್ ನೀಡಿದ್ರು. ಪ್ರತೀಕಾ 37 ರನ್ ಗಳಿಸಿ ಔಟಾದ್ರೆ ಸ್ಮೃತಿ 23 ರನ್ಗಳಿಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ಆ ನಂತ್ರ ಮಿಡಲ್ ಆರ್ಡರ್ ಕಂಪ್ಲೀಟ್ ಫ್ಲ್ಯಾಪ್ ಆಯ್ತು. ಹರ್ಲೀನ್ ಡಿಯೋಲ್ 13 ರನ್ಗಳಿಸಿ ಔಟಾದರೆ, ಜೆಮಿಮಾ ರೋಡ್ರಿಗಸ್ ಶೂನ್ಯಕ್ಕೆ ಔಟ್ ಆದ್ರು. ನಾಯಕಿ ಹರ್ಮನ್ ಪ್ರೀತ್ ಕೌರ್ 24 ಎಸೆತಗಳಲ್ಲಿ ಕೇವಲ 9 ರನ್ಗಳಿಸಿದ್ರೆ ನಂತರ ದೀಪ್ತಿ ಶರ್ಮಾ ಕೇವಲ 4 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಒಂದು ಹಂತದಲ್ಲಿ 91 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡ 102 ರನ್ಗಳಾಗುಷ್ಟರಲ್ಲಿ 6 ವಿಕೆಟ್ ಕಳ್ಕೊಂಡಿತ್ತು. 150+ ಸ್ಕೋರ್ ಕೂಡ ರೀಚ್ ಆಗಲ್ವೇನೋ ಅನ್ನುವಂಥ ಟೈಮಲ್ಲಿ ಆಸರೆಯಾಗಿದ್ದೇ ರಿಚಾ ಘೋಷ್. 7ನೇ ಕ್ರಮಾಂಕದಲ್ಲಿ ಬಂದು ಕೊನೆಯ ಓವರ್ನಲ್ಲಿ ವಿಕೆಟ್ ಒಪ್ಪಿಸಿದ ರಿಚಾ ಕೇವಲ 6 ರನ್ಗಳಿಂದ ಶತಕ ಮಿಸ್ ಮಾಡಿಕೊಂಡರು. 77 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ಗಳೊಂದಿಗೆ 94 ರನ್ಗಳಿಸಿ ನಡೀನ್ ಡಿಕ್ಲರ್ಕ್ಗೆ ವಿಕೆಟ್ ಒಪ್ಪಿಸಿದರು. ಒಟ್ಟಾರೆ ಭಾರತ ತಂಡ 49.5 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 251ರನ್ಗಳಿಸಿತು. 252 ರನ್ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 48.5 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಟಾರ್ಗೆಟ್ ರೀಚ್ ಆಯ್ತು. 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದಿದ್ದ ನಡೀನ್ ಡಿಕ್ಲೆರ್ಕ್ ಕೇವಲ 54 ಎಸೆತಗಳಲ್ಲಿ 8 ಬೌಂಡರಿ, 5 ಭರ್ಜರಿ ಸಿಕ್ಸರ್ಗಳ ಸಹಿತ ಅಜೇಯ 84 ರನ್ ಸಿಡಿಸಿ ಭಾರತದ ಕೈಯಲ್ಲಿದ್ದ ಗೆಲುವನ್ನ ಕಸಿದುಕೊಂಡರು.
ಪಂದ್ಯ ಸೋತರೂ ದಾಖಲೆ ಬರೆದ ರಿಚಾ ಮತ್ತು ಸ್ಮೃತಿ!
ಐಸಿಸಿ ವುಮೆನ್ಸ್ ವಿಶ್ವಕಪ್ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಕಡೆಯಿಂದ ಬಿಗ್ ಸ್ಕೋರ್ ಬಂದಿಲ್ಲ ಅಂದ್ರೂ ಕ್ಯಾಲೆಂಡರ್ ವರ್ಷದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಕಲೆಹಾಕಿದ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ಗುರುವಾರದ ಪಂದ್ಯದಲ್ಲಿ 23 ರನ್ ಗಳಿಸಿದ ಅವರು, ಈ ವರ್ಷ ಏಕದಿನ ಕ್ರಿಕೆಟ್ನಲ್ಲಿ ತಮ್ಮ 982 ರನ್ ಗಳಿಸಿದ್ದಾರೆ. 17 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದರಲ್ಲಿ 4 ಶತಕ. 3 ಅರ್ಧಶತಕಗಳೂ ಒಳಗೊಂಡಿವೆ. 1997ರಲ್ಲಿ ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ 970 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.ಇನ್ನು ರಿಚಾ ಏಕದಿನ ಕ್ರಿಕೆಟ್ನಲ್ಲಿ 1000 ರನ್ಸ್ ಕಂಪ್ಲೀಟ್ ಮಾಡಿದ್ದಾರೆ.
ಭಾರತ ತಂಡದ ಸೆಮೀಸ್ ಲೆಕ್ಕಾಚಾರ ಹೇಗಿದೆ?
ಇನ್ನು ಟೂರ್ನಿಯಲ್ಲಿ ಎರಡು ಪಂದ್ಯಗಳನ್ನ ಗೆದ್ದು 1 ಪಂದ್ಯ ಸೋತಿರೋ ಭಾರತದ ಸೆಮೀಸ್ ಲೆಕ್ಕಾಚಾರ ಶುರುವಾಗಿದೆ. ಹಾಗಂತ ಸೌತ್ ಆಫ್ರಿಕಾ ವಿರುದ್ಧದ ಸೋತು ದೊಡ್ಡ ಮಟ್ಟದ ಡ್ಯಾಮೇಜ್ ಮಾಡದೇ ಇದ್ರೂ ಅಲರ್ಟ್ ಮೆಸೇಜ್ ಅಂತೂ ಕೊಟ್ಟಿದೆ. ಲೀಗ್ ಹಂತದಲ್ಲಿ ಇನ್ನೂ ನಾಲ್ಕು ಪಂದ್ಯಗಳನ್ನ ಭಾರತ ಆಡಲಿದೆ. ಅಕ್ಬೋಬರ್ 12 ಆಸ್ಟ್ರೇಲಿಯಾ, ಅಕ್ಟೋಬರ್ 19 ಇಂಗ್ಲೆಂಡ್, ಅಕ್ಟೋಬರ್ 23 ನ್ಯೂಜಿಲೆಂಡ್ ಹಾಗೇ ಅಕ್ಟೋಬರ್ 26ಕ್ಕೆ ಬಾಂಗ್ಲಾ ವಿರುದ್ಧ ಕಣಕ್ಕಿಳಿಯಲಿದೆ. ಮುಂದಿನ ನಾಲ್ಕು ಪಂದ್ಯಗಳ ಪೈಕಿ ಮೂರು ಮ್ಯಾಚ್ ಗೆದ್ರೂ ಸೆಮೀಸ್ ಕನಸು ನನಸಾಗಲಿದೆ. ಈ ಮೂಲಕ ಚೊಚ್ಚಲ ಐಸಿಸಿ ವುಮೆನ್ಸ್ ವಿಶ್ವಕಪ್ಗೆ ಮುತ್ತಿಡೋ ಅವಕಾಶ ಸಿಗಲಿದೆ.
ಟೂರ್ನಿಯಲ್ಲಿ ಗೆಲುವಿನ ಖಾತೆಯನ್ನೇ ತೆರೆಯದ ಪಾಕಿಸ್ತಾನ!
ಮತ್ತೊಂದೆಡೆ ಪಾಕಿಸ್ತಾನ ತಂಡ ಟೂರ್ನಿಯಲ್ಲಿ ಮೂರು ಪಂದ್ಯಗಳನ್ನ ಆಡಿದ್ದು ಮೂರರಲ್ಲೂ ಸೋಲು ಕಂಡಿದೆ. ಈ ಮೂಲಕ 8 ತಂಡಗಳ ಪೈಕಿ ಮೈನಸ್ 1.887 ನೆಟ್ ರನ್ರೇಟ್ನೊಂದಿಗೆ ಕೊನೇ ಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ಪಾಕಿಸ್ತಾನಕ್ಕೆ ಇನ್ನೂ ನಾಲ್ಕು ಪಂದ್ಯಗಳಿವೆ. ಆದ್ರೆ ಪಾಕಿಸ್ತಾನಿ ಆಟಗಾರ್ತಿಯರ ಪರ್ಫಾಮೆನ್ಸ್ ನೋಡ್ತಿದ್ರೆ ಗೆಲುವಿನ ಖಾತೆ ತೆರೆಯದೇ ಟೂರ್ನಿಯಿಂದ ಹೊರ ಬೀಳ್ತಾರೇನೋ ಅನ್ನೋ ಚರ್ಚೆಯಾಗ್ತಿದೆ. ಐಸಿಸಿ ವುಮೆನ್ಸ್ ವಿಶ್ವಕಪ್ನಲ್ಲಿ ಇದು 13ನೇ ಆವೃತ್ತಿ. ಆದ್ರೆ ಭಾರತ ಇದುವರೆಗೂ ಒಮ್ಮೆಯೂ ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿಲ್ಲ. ಆಸ್ಟ್ರೇಲಿಯಾ 7 ಬಾರಿ, ಇಂಗ್ಲೆಂಡ್ ತಂಡ 4 ಸಲ ಹಾಗೇ ನ್ಯೂಜಿಲೆಂಡ್ 1 ಸಲ ಚಾಂಪಿಯನ್ ಆಗಿದ್ದಾರೆ. ಭಾರತ 2005 ಮತ್ತು 2017ರಲ್ಲಿ ಅಂದ್ರೆ ಎರಡು ಸಲ ಫೈನಲ್ ಪ್ರವೇಶ ಪಡೆದಿದ್ದು ಎರಡು ಸಲವೂ ರನ್ನರ್ ಅಪ್ ಆಗಿದೆ. ಈ ಸಲ ಮೊದಲ ಬಾರಿಗೆ ಟ್ರೋಫಿಯನ್ನ ಎತ್ತಿ ಹಿಡಿಯೋ ಕನಸಿನಲ್ಲಿದ್ದಾರೆ. ಸದ್ಯ ಟೂರ್ನಿಯಲ್ಲಿ ಸತತ ಎರಡು ಗೆಲುವು ಕಂಡಿದ್ದ ಭಾರತ ಸೌತ್ ಆಫ್ರಿಕಾ ವಿರುದ್ಧ ಸೋಲು ಕಂಡಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿದ್ದು ಮುಂದಿನ ಪಂದ್ಯಗಳಲ್ಲಿ ಕಮ್ ಬ್ಯಾಕ್ ಮಾಡಲೇಬೇಕಿದೆ.

ನೋಡಿರಿ

