ಬಿಎಂಟಿಸಿ ವಜ್ರ ಬಸ್ ದರ ಶೇ. 20ರಷ್ಟು ಹೆಚ್ಚಳ – ಜ. 1ರಿಂದ ಅನ್ವಯ
ಬೆಂಗಳೂರು: ಬೆಂಗಳೂರಿನ ಪ್ರಯಾಣಿಕರಿಗೆ ಬಿಎಂಟಿಸಿ ಬಸ್ ದರದ ಶಾಕ್ ನೀಡಿದೆ. ಹೆಚ್ಚುತ್ತಿರುವ ಇಂಧನ ಬೆಲೆಯ ಹಿನ್ನಲೆ ಬಿಎಂಟಿಸಿ ವಜ್ರ ಎಸಿ ಬಸ್ ಪಾಸ್ ದರದಲ್ಲಿ ಶೇ. 20 ರಷ್ಟು ಹೆಚ್ಚಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಭಾನುವಾರ ಜನವರಿ 1 ರಿಂದ ಹವಾ ನಿಯಂತ್ರಿತ (ಎಸಿ) ಬಸ್‌ನ ದೈನಂದಿನ ಮತ್ತು ಮಾಸಿಕ ಪಾಸ್ ದರವನ್ನು ಶೇ.20ರ ರಷ್ಟು ಏರಿಕೆ ಮಾಡಿದೆ. ಈ ವಿಚಾರವಾಗಿ ಸಭೆ ನಡೆಸಿದ ಅಧಿಕಾರಿಗಳು ದರ ಏರಿಕೆ ಬಗ್ಗೆ ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಮೊದಲ ಬಾರಿಗೆ ಜಿಯೋ ಟ್ರೂ 5ಜಿ ಸೇವೆ
ದೈನಂದಿನ ಪಾಸ್ ದರ ಹಾಲಿ 100 ರೂ.ನಿಂದ 120 ರೂ.ಗೆ ಏರಲಿದೆ. ಮಾಸಿಕ ಪಾಸ್ ದರ ಸದ್ಯ ಇರುವ 1,500 ರೂ.ನಿಂದ 1,800 ರೂ.ಗೆ ಹೆಚ್ಚಾಗಲಿದೆ. ಈ ಹೆಚ್ಚಳದಲ್ಲಿ ಶೇ. 5ರಷ್ಟು ಜಿಎಸ್‌ಟಿ ಒಳಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ.
ದೂರದ ವಜ್ರ ಪ್ರಯಾಣದ ದರ ಸಹ ಹೆಚ್ಚಾಗಿದೆ. ಮಾಗಡಿಗೆ ವಜ್ರ ಬಸ್ ದರ 10 ರೂ., ಆನೇಕಲ್ ಮತ್ತು ದೊಡ್ಡಬಳ್ಳಾಪುರಕ್ಕೆ 5 ರೂ. ಏರಿಕೆಯಾಗಲಿದೆ. ಆದರೆ ನಾನ್ ಎಸಿ ಮತ್ತು ವಾಯು ವಜ್ರ ಬಸ್ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಎಂದು ಬಿಎಂಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವಜ್ರ ಪಾಸ್ ದರಗಳ ಹೆಚ್ಚಳವು ಮುಖ್ಯವಾಗಿ ಐಟಿಪಿಎಲ್/ವೈಟ್‌ಫೀಲ್ಡ್ ಮತ್ತು ಔಟರ್ ರಿಂಗ್ ರೋಡ್‌ನಂತಹ ಟೆಕ್ ಪಾರ್ಕ್‌ಗಳಿಗೆ ನಿಯಮಿತವಾಗಿ ಪ್ರಯಾಣಿಸುವ ಟೆಕ್ಕಿಗಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಅನೇಕ ಪ್ರಯಾಣಿಕರು ಅತೃಪ್ತರಾಗಿದ್ದಾರೆ. ಬೆಂಗಳೂರಿನಂತಹ ಸಂಚಾರ ದಟ್ಟಣೆ ಇರುವ ನಗರದಲ್ಲಿ ಸಾರ್ವಜನಿಕ ಸಾರಿಗೆಯ ಪ್ರಯಾಣ ದರವನ್ನು ಹೆಚ್ಚಿಸುವುದು ಒಳ್ಳೆಯ ಲಕ್ಷಣವಲ್ಲ. ವಜ್ರ ದರಗಳು ಪ್ರತಿ 2ಕಿಲೋ ಮೀಟರ್‌ಗೆ ಒಂದು ಹಂತದಂತೆ ಒಟ್ಟು 20ಕಿ.ಮೀ.ಯ 10 ಹಂತವರೆಗೆ ದರ ಬದಲಾಗುವುದಿಲ್ಲ. 20 ಕಿಲೋ ಮೀಟರ್‌ಗಿಂತ ಹೆಚ್ಚು ಪ್ರಯಾಣಿಸುವವರು 2023 ಜನವರಿ 5 ರಿಂದ ಹೆಚ್ಚು ಹಣ ಪಾವತಿಸಬೇಕಾಗುತ್ತದೆ.
ಡಿಸೆಂಬರ್ 2020 ರಲ್ಲಿ ಬಿಎಂಟಿಸಿ ನಾನ್-ಎಸಿ ಮಾಸಿಕ ಪಾಸ್ ಹೊಂದಿರುವವರಿಗೆ ಭಾನುವಾರದಂದು ವಜ್ರ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಿತ್ತು. ಉಳಿದ ದಿನಗಳಲ್ಲಿ ನಾನ್ ಎಸಿ ಪಾಸ್ ಹೊಂದಿರುವವರು ವಜ್ರ ಬಸ್ ಗಳಲ್ಲಿ ಅನಿಯಮಿತ ಪ್ರಯಾಣಕ್ಕೆ 20 ರೂಪಾಯಿ ಟಿಕೆಟ್ ಖರೀದಿಸಬೇಕಿತ್ತು. ನಾನ್ ಎಸಿ ಮಾಸಿಕ ಪಾಸ್ ಹೊಂದಿರುವವರಿಗೆ ಭಾನುವಾರದಂದು ನಾವು ವಜ್ರ ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ಹಿಂಪಡೆದಿದ್ದೇವೆ. ನಾನ್ ಎಸಿ ಮಾಸಿಕ ಪಾಸ್ ಹೊಂದಿರುವವರು ವಜ್ರ ಬಸ್‌ಗಳಲ್ಲಿ ಪ್ರಯಾಣಿಸಲು ನಾವು ಎಲ್ಲಾ ದಿನಗಳಲ್ಲಿ ದರವನ್ನು 20 ರಿಂದ 25 ರೂ.ಗೆ ಹೆಚ್ಚಿಸಿದ್ದೇವೆ ಎಂದು ಬಿಎಂಟಿಸಿ ತಿಳಿಸಿದೆ.