ಶುಕ್ರವಾರ ಬೆಳಗ್ಗೆಯಿಂದಲೇ ಹಾಸನಾಂಬೆಯ ದರ್ಶನ – ಸಾರ್ವಜನಿಕರ ದರ್ಶನಕ್ಕೆ ಸಕಲ ವ್ಯವಸ್ಥೆ

ಶುಕ್ರವಾರ ಬೆಳಗ್ಗೆಯಿಂದಲೇ ಹಾಸನಾಂಬೆಯ ದರ್ಶನ – ಸಾರ್ವಜನಿಕರ ದರ್ಶನಕ್ಕೆ ಸಕಲ ವ್ಯವಸ್ಥೆ

ಹಾಸನಾಂಬೆ ದೇಗುಲ ಬಾಗಿಲು ದರ್ಶನಕ್ಕೆ ತೆರೆದಿದೆ. ಶುಕ್ರವಾರ ಬೆಳಗ್ಗೆಯಿಂದಲೇ ಭಕ್ತರಿಗೆ ದರ್ಶನ ನೀಡಲಿದ್ದಾಳೆ ತಾಯಿ ಹಾಸನಾಂಬೆ. ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಈ ದೇಗುಲದ ಗರ್ಭಗುಡಿ ಬಾಗಿಲನ್ನು ಗುರುವಾರ ಮಧ್ಯಾಹ್ನ 12 ಗಂಟೆಗೆ ತೆರೆಯಲಾಗಿದೆ.

ಇದನ್ನೂ ಓದಿ:ಇಂದಿನಿಂದ ಹಾಸನಾಂಬೆ ದೇಗುಲ ಓಪನ್‌ – ಸಾರ್ವಜನಿಕರಿಗೆ ನಾಳೆಯಿಂದ ದರ್ಶನಕ್ಕೆ ವ್ಯವಸ್ಥೆ

ಅಶ್ವಯುಜ ಮಾಸದ ಮೊದಲ ಗುರುವಾರ ಸಾಮಾನ್ಯವಾಗಿ ಈ ಬಾಗಿಲು ತೆರೆಯಲಾಗುತ್ತದೆ. ಕಳೆದ ವರ್ಷ ನವೆಂಬರ್ 3 ರಂದು ಮುಚ್ಚಲ್ಪಟ್ಟಿದ್ದ ದೇಗುಲದ ಬಾಗಿಲು, ಇದೀಗ ಅಕ್ಟೋಬರ್ 9 ರಂದು ಮತ್ತೆ ತೆರೆಯಲ್ಪಟ್ಟಿದೆ. ಈ ವರ್ಷ ಒಟ್ಟು 15 ದಿನಗಳ ಕಾಲ ಗರ್ಭಗುಡಿ ಬಾಗಿಲು ತೆರೆದಿರುತ್ತದೆ. ಅಕ್ಟೋಬರ್ 9 (ಪ್ರಥಮ ದಿನ) ಮತ್ತು ಅಕ್ಟೋಬರ್ 23 (ಕೊನೆಯ ದಿನ) ಹೊರತುಪಡಿಸಿ, ಉಳಿದ 13 ದಿನಗಳ ಕಾಲ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಗುರುವಾರ ವಿದ್ಯುಕ್ತವಾಗಿ ಹಾಸನಾಂಬೆ ಗರ್ಭಗುಡಿ ಬಾಗಿಲು ತೆಗೆದಿದ್ದು, ಪೂಜಾ ಕೈಂಕರ್ಯಗಳು ಜರುಗಿದೆ. ಇವತ್ತು ಶುಕ್ರವಾರ ಬೆಳಗ್ಗೆಯಿಂದಲೇ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಹಾಸನದ ಅಧಿದೇವತೆಯಾದ ಶ್ರೀ ಹಾಸನಾಂಬೆ ದೇವಸ್ಥಾನದ ಗರ್ಭಗುಡಿ ಬಾಗಿಲು ವರ್ಷಕ್ಕೊಮ್ಮೆ ಮಾತ್ರ ತೆಗೆಯಲಾಗುತ್ತದೆ. ಅಕ್ಟೋಬರ್ 22ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈ ಉತ್ಸವವು ಹಾಸನ ಜಾತ್ರೆಯ ಭಾಗವಾಗಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಹಾಸನಾಂಬೆ ದೇವಸ್ಥಾನವು 12ನೇ ಶತಮಾನದಿಂದಲೂ ತನ್ನ ವಿಶಿಷ್ಟ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಗರ್ಭಗುಡಿಯಲ್ಲಿ ನೆಲೆಸಿರುವ ದೇವಿಯ ದರ್ಶನವು ಭಕ್ತರಿಗೆ ಮನಸ್ಸಿನ ಶಾಂತಿ ನೀಡುತ್ತದೆ ಎಂಬ ನಂಬಿಕೆಯಿದೆ. ಬಾಗಿಲು ತೆರೆಯುವ ಮುನ್ನ ದೇವಾಲಯದ ಮುಂದೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ಸಾರ್ವಜನಿಕ ದರ್ಶನ ಅಕ್ಟೋಬರ್ 10ರಿಂದ ಬೆಳಿಗ್ಗೆ 6 ಗಂಟೆಯಿಂದಲೇ ಆರಂಭವಾಗುತ್ತದೆ. ಪ್ರತಿದಿನ ಬೆಳಿಗ್ಗೆ 6ಕ್ಕೆ ಆರಂಭವಾಗಲಿದ್ದು ರಾತ್ರಿ 9.30ಕ್ಕೆ ಮುಚ್ಚುತ್ತದೆ. ಭಕ್ತರಿಗೆ ಉಚಿತ ಊಟ, ನೀರು ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ.

ಕಳೆದ ವರ್ಷ ಸುಮಾರು 20 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದರು. ಈ ವರ್ಷ ದರ್ಶನದ ದಿನಗಳು ಹೆಚ್ಚಾಗಿರುವುದರಿಂದ, 25 ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇಟ್ಟುಕೊಂಡಿದೆ. ಅದಕ್ಕೆ ಪೂರಕವಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

Sulekha