ಬೌಲರ್‌ಗೆ ಹೊಡೆಯಲು ಹೋಗಿದ್ಯಾಕೆ ಪೃಥ್ವಿ ಶಾ? – ಔಟಾಗಿದ್ದಕ್ಕೆ ಇಷ್ಟೆಲ್ಲಾ ರಂಪಾಟ ಬೇಕಿತ್ತಾ?

ಬೌಲರ್‌ಗೆ ಹೊಡೆಯಲು ಹೋಗಿದ್ಯಾಕೆ ಪೃಥ್ವಿ ಶಾ? – ಔಟಾಗಿದ್ದಕ್ಕೆ ಇಷ್ಟೆಲ್ಲಾ ರಂಪಾಟ ಬೇಕಿತ್ತಾ?

ಇರಲಾರದೆ ಇರುವೆ ಬಿಟ್ಕೊಂಡರು ಅಂತಾರಲ್ಲಾ.. ಹಾಗಾಗಿದೆ ಕ್ರಿಕೆಟರ್ ಪೃಥ್ವಿ ಶಾ ಸ್ಥಿತಿ. ಸದಾ ಒಂದಲ್ಲ ಒಂದು ವಿವಾದೊಂದಿಗೆ ಸುದ್ದಿಯಲ್ಲಿರುವ ಪೃಥ್ವಿ ಶಾ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಔಟಾದ ಸಿಟ್ಟಿಗೆ ಬೌಲರ್‌ಗೆ ಹೊಡೆಯೋ ಮೂಲಕ ಕಿರಿಕ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: BCCI ಕೆಣಕಿ ಕೆಟ್ಟ ಕಿಶನ್.. ಭಾರತದ ಬಾಗಿಲು ಶಾಶ್ವತ ಬಂದ್! – ಬಂದಷ್ಟೇ ಸ್ಪೀಡಾಗಿ ಹೋದವರೆಷ್ಟು?

ಎಂಸಿಎ ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಮಹಾರಾಷ್ಟ್ರ ಹಾಗೂ ಮುಂಬೈ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮಹಾರಾಷ್ಟ್ರ ಪರ ಕಣಕ್ಕಿಳಿದಿದ್ದ ಪೃಥ್ವಿ ಶಾ 220 ಎಸೆತಗಳಲ್ಲಿ 22 ಫೋರ್ ಹಾಗೂ 3 ಸಿಕ್ಸರ್​ಗಳೊಂದಿಗೆ 181 ರನ್ ಬಾರಿಸಿದ್ದರು. ಈ ಹಂತದಲ್ಲಿ ದಾಳಿಗಿಳಿದ ಸರ್ಫರಾಝ್ ಖಾನ್ ಸಹೋದರ ಮುಶೀರ್ ಖಾನ್ ಪೃಥ್ವಿ ಶಾ ವಿಕೆಟ್ ಕಬಳಿಸಿದರು. ಪ್ರಮುಖ ಆಟಗಾರನ ವಿಕೆಟ್ ಸಿಗುತ್ತಿದ್ದಂತೆ ಮುಶೀರ್ ಖಾನ್ ಸಂಭ್ರಮಿಸಿದ್ದಾರೆ. ಇದರಿಂದ ಕೋಪಗೊಂಡ ಪೃಥ್ವಿ ಶಾ ಯುವ ಆಟಗಾರನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಅತ್ತ ಮುಶೀರ್ ಖಾನ್ ಸಹ ಆಟಗಾರರತ್ತ ಸಾಗಿದರೂ ಹಿಂಬಾಲಿಸಿದ ಪೃಥ್ವಿ ಬ್ಯಾಟ್​ನಿಂದ ದಾಳಿ ಮಾಡಲು ಯತ್ನಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೆ ಮುಶೀರ್ ಖಾನ್ ಜೊತೆ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಸಹ ಆಟಗಾರರು ಹಾಗೂ ಅಂಪೈರ್ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಆ ಬಳಿಕ ಮತ್ತೋರ್ವ ಮುಂಬೈ ಆಟಗಾರ ಕೂಡ ಪೃಥ್ವಿ ಶಾ ಜೊತೆ ವಾಕ್ಸಮರಕ್ಕೆ ಇಳಿದಿರುವುದು ವಿಡಿಯೋದಲ್ಲಿ ಕಾಣಬಹುದು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭ್ಯಾಸ ಪಂದ್ಯದಲ್ಲೇ ಆಕ್ರಮಣಕಾರಿಯಾಗಿ ವರ್ತಿಸಿರುವ ಪೃಥ್ವಿ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಸದಾ ಒಂದಲ್ಲೊಂದು ವಿವಾದದಿಂದ ಸುದ್ದಿಯಲ್ಲಿರುತ್ತಿದ್ದ ಪೃಥ್ವಿ ಶಾ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

Sulekha